ದಕ್ಷಿಣ ಶಿಕ್ಷಕರ ಕ್ಷೇತ್ರದ ಅಂತಿಮ ಪಟ್ಟಿಯಲ್ಲಿ 2084 ಮತದಾರರು

| Published : May 07 2024, 01:04 AM IST

ದಕ್ಷಿಣ ಶಿಕ್ಷಕರ ಕ್ಷೇತ್ರದ ಅಂತಿಮ ಪಟ್ಟಿಯಲ್ಲಿ 2084 ಮತದಾರರು
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಈಗಾಗಲೇ ಚುನಾವಣಾ ವೇಳಾಪಟ್ಟಿ ಪ್ರಕಟವಾಗಿದ್ದು, ಚಾಮರಾಜನಗರ ಜಿಲ್ಲೆಯಲ್ಲಿ 1,373 ಮಂದಿ ಪುರುಷರು ಮತ್ತು 711ಮಂದಿ ಮಹಿಳೆಯರು ಸೇರಿ ಒಟ್ಟು 2,084 ಮಂದಿ ಮತದಾರರು ಅಂತಿಮ ಪಟ್ಟಿಯಲ್ಲಿದ್ದಾರೆ ಎಂದು ಎಡಿಸಿ ಗೀತಾ ಹುಡೇದ ತಿಳಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಈಗಾಗಲೇ ಚುನಾವಣಾ ವೇಳಾಪಟ್ಟಿ ಪ್ರಕಟವಾಗಿದ್ದು, ಚಾಮರಾಜನಗರ ಜಿಲ್ಲೆಯಲ್ಲಿ 1,373 ಮಂದಿ ಪುರುಷರು ಮತ್ತು 711ಮಂದಿ ಮಹಿಳೆಯರು ಸೇರಿ ಒಟ್ಟು 2,084 ಮಂದಿ ಮತದಾರರು ಅಂತಿಮ ಪಟ್ಟಿಯಲ್ಲಿದ್ದಾರೆ ಎಂದು ಎಡಿಸಿ ಗೀತಾ ಹುಡೇದ ತಿಳಿಸಿದರು. ನಗರದ ಡೀಸಿ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ವಿಪ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆ ಸಂಬಂಧ ಜಿಲ್ಲೆಯ ಮತದಾರರ ಪಟ್ಟಿ ಸಿದ್ಧತೆ ಹಾಗೂ ಮತದಾನ ಕೇಂದ್ರಗಳ ಸ್ಥಾಪನೆ ಕುರಿತು ವಿವಿಧ ರಾಜಕೀಯ ಪಕ್ಷದ ಪದಾಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಭಾರತ ಚುನಾವಣಾ ಆಯೋಗದ ನಿರ್ದೇಶನದನ್ವಯ ಕರ್ನಾಟಕ ವಿಪ ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಸಂಬಂಧಿಸಿದಂತೆ 2023ರ ಡಿ. 30ರಂದು ಮತದಾನಕ್ಕೆ ಅರ್ಹರಾದ 2084 ಶಿಕ್ಷಕ ಮತದಾರರ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗಿತ್ತು. ಅದರನ್ವಯ ಗುಂಡ್ಲುಪೇಟೆ ತಾಲೂಕಿನಲ್ಲಿ 291 ಮಂದಿ ಪುರುಷರು, 88 ಮಂದಿ ಮಹಿಳೆಯರು ಸೇರಿದಂತೆ ಒಟ್ಟು 379, ಚಾಮರಾಜನಗರ 362 ಪುರುಷರು, 213 ಮಹಿಳೆಯರು ಸೇರಿದಂತೆ ಒಟ್ಟು 575, ಯಳಂದೂರು 140 ಪುರುಷರು, 51 ಮಹಿಳೆಯರು ಸೇರಿದಂತೆ ಒಟ್ಟು 191, ಕೊಳ್ಳೇಗಾಲ 398 ಪುರುಷರು, 304 ಮಹಿಳೆಯರು ಸೇರಿದಂತೆ ಒಟ್ಟು 702 ಮತ್ತು ಹನೂರು 182 ಪುರುಷರು, 55 ಮಹಿಳೆಯರು ಸೇರಿದಂತೆ ಒಟ್ಟು 237 ಮತದಾರರಿದ್ದಾರೆ. ಇತರರು ಯಾರು ಇರುವುದಿಲ್ಲ ಎಂದು ತಿಳಿಸಿದರು.

ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಮೇ 9ರಂದು ಅಧಿಸೂಚನೆ ಹೊರಡಿಸಲಿದ್ದು, ಅಂದಿನಿಂದ ನಾಮಪತ್ರ ಸಲ್ಲಿಸಬಹುದಾಗಿದೆ. ನಾಮರ್ದೇಶನ ಪತ್ರ ಸಲ್ಲಿಸಲು ಮೇ 16 ಕೊನೆಯ ದಿನವಾಗಿದೆ. ಮೇ 17ರಂದು ನಾಮ ನಿರ್ದೇಶನ ಪತ್ರ ಪರಿಶೀಲನಾ ಕಾರ್ಯ ನಡೆಯಲಿದೆ. ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳಲು ಮೇ 20 ಅಂತಿಮ ದಿನ. ಮತದಾನವು ಜೂ. 3ರಂದು ಬೆಳಗ್ಗೆ 8 ರಿಂದ ಸಂಜೆ 4ರವರೆಗೆ ಬ್ಯಾಲೆಟ್ ಪೇಪರ್ ಮೂಲಕ ನಡೆಯಲಿದೆ. ಮತ ಎಣಿಕೆಯು ಜೂ. 6ರಂದು ನಡೆಯಲಿದೆ. ಜೂನ್ 12ರಂದು ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದರು.

ಕಳೆದ ಬಾರಿ 2018ರಲ್ಲಿ ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ 1865 ಮಂದಿ ಮತದಾರರು ಮತದಾರರ ಪಟ್ಟಿಯಲ್ಲಿದ್ದರು. ಈ ಬಾರಿ ಹೊಸದಾಗಿ ಹೆಸರು ಸೇರ್ಪಡೆ ಮಾಡುವ ಸಂಬಂಧ ಹೊಸ ಸೇರ್ಪಡೆ ಅರ್ಜಿಗಳನ್ನು ಸ್ವೀಕರಿಸಿ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ನಾಮಪತ್ರ ಸ್ವೀಕರಿಸುವ ಅಂತಿಮ ದಿನಾಂಕದ ಹಿಂದೆ ಅಂದರೆ ಮೇ 6ರಂದು ಸಂಜೆ 5.30 ಗಂಟೆಯೊಳಗೆ ಮಾತ್ರ ಸ್ವೀಕರಿಸಲ್ಪಟ್ಟ ಅರ್ಜಿಗಳನ್ನು ನಿಯಮಾನುಸಾರ ಪರಿಶೀಲಿಸಿ ಹೆಚ್ಚುವರಿ ಅರ್ಹರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲಾಗುತ್ತದೆ ಎಂದು ಹೇಳಿದರು.

ಪ್ರೌಢಶಾಲಾ ಶಿಕ್ಷಕರು ಹಾಗೂ ಅದಕ್ಕೆ ಸಮನಾದ ಅಥವಾ ಅದಕ್ಕಿಂತ ಹೆಚ್ಚಿನ ಮೇಲ್ಪಟ್ಟ ದರ್ಜೆ ಶಿಕ್ಷಕರು ಮಾತ್ರ ಮತದಾನ ಪ್ರಕ್ರಿಯೆಗೆ ಅರ್ಹರಾಗಿರುತ್ತಾರೆ. ಕಳೆದ 6 ವರ್ಷಗಳಿಂದ ಅಂದರೆ 2018 ರಿಂದ ಕನಿಷ್ಠ 3 ವರ್ಷಗಳಲ್ಲಿ ಶಿಕ್ಷಕ ಅಥವಾ ಬೋಧಕ ವೃತ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರು ಮಾತ್ರ ಮತದಾನಕ್ಕೆ ಅರ್ಹರಾಗಿರುತ್ತಾರೆ ತಿಳಿಸಿದರು.

ಜಿಲ್ಲೆಯಲ್ಲಿ ತಾಲೂಕಿಗೆ ತಲಾ ಒಂದರಂತೆ 5 ಮತಗಟ್ಟೆ ಕೇಂದ್ರಗಳನ್ನು ತೆರೆಯಲಾಗಿದ್ದು, ಗುಂಡ್ಲುಪೇಟೆ ತಾಲೂಕಿನ ತಾಲೂಕು ಆಡಳಿತ ಸೌಧದ ನೆಲಮಹಡಿಯಲ್ಲಿರುವ ಕೊಠಡಿ ಸಂಖ್ಯೆ 17, ಚಾಮರಾಜನಗರ ತಾಲೂಕಿನ ತಾಲೂಕು ಆಡಳಿತ ಸೌಧದ ನೆಲಮಹಡಿಯಲ್ಲಿರುವ ಮೀಟಿಂಗ್ (ಸಭಾಂಗಣ) ಹಾಲ್, ಯಳಂದೂರು ತಾಲೂಕಿನ ತಾಲೂಕು ಆಡಳಿತ ಸೌಧದ ನೆಲಮಹಡಿಯಲ್ಲಿರುವ ಕೊಠಡಿ ಸಂಖ್ಯೆ 1ರ ಮೀಟಿಂಗ್ ಹಾಲ್, ಕೊಳ್ಳೇಗಾಲ ತಾಲೂಕಿನ ತಾಲೂಕು ಆಡಳಿತ ಸೌಧದ ನೆಲಮಹಡಿಯಲ್ಲಿರುವ ಕೊಠಡಿ ಸಂಖ್ಯೆ 2ರ ಕೇಸ್ವಾನ್ ಕೊಠಡಿ ಮತ್ತು ಹನೂರು ಪಟ್ಟಣದ ಪಶು ವೈದ್ಯಕೀಯ ಆಸ್ಪತ್ರೆ ಸಭಾಂಗಣದಲ್ಲಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದರು.

ಕರ್ನಾಟಕ ವಿಪ ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಚುನಾವಣಾ ಸಂಬಂಧ ನೀತಿ ಸಂಹಿತೆಯು ಜಿಲ್ಲೆಯಾದ್ಯಂತ ಜೂ. 12ರವರೆಗೂ ಜಾರಿಯಲ್ಲಿರಲಿದ್ದು, ವಿವಿಧ ರಾಜಕೀಯ ಪಕ್ಷಗಳು ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಿ ಚುನಾವಣೆಯನ್ನು ಮುಕ್ತ, ನ್ಯಾಯಸಮ್ಮತ, ಪಾರದರ್ಶಕ ಹಾಗೂ ಶಾಂತಿಯುತವಾಗಿ ನಡೆಸಲು ಸಹಕಾರ ನೀಡುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಅವರು ಸಭೆಯಲ್ಲಿ ಮನವಿ ಮಾಡಿದರು.

ಜಿಲ್ಲಾಧಿಕಾರಿ ಕಚೇರಿಯ ಚುನಾವಣಾ ತಹಸೀಲ್ದಾರ್ ಕೀರ್ತನಾ, ಚುನಾವಣಾ ಶಿರಸ್ತೇದಾರ್ ಬಸವರಾಜು, ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಎ.ಎಚ್. ನಸ್ರುಲ್ಲಾ ಖಾನ್, ಬ್ಯಾಡಮೂಡ್ಲು ಬಸವಣ್ಣ, ಸಭೆಯಲ್ಲಿ ಉಪಸ್ಥಿತರಿದ್ದರು.