ಗೋಕರ್ಣದಲ್ಲಿ ಮತದಾನಕ್ಕೆ ಸಕಲ ಸಿದ್ಧತೆ

| Published : May 07 2024, 01:02 AM IST

ಸಾರಾಂಶ

ಗೋಕರ್ಣ ಗ್ರಾಪಂ ವ್ಯಾಪ್ತಿಯಲ್ಲಿ 12, ನಾಡುಮಾಸ್ಕೇರಿ ಗ್ರಾಪಂ ವ್ಯಾಪ್ತಿಯಲ್ಲಿ 6 ಹನೇಹಳ್ಳಿ ಗ್ರಾಪಂ 5, ತೊರ್ಕೆ 4, ಹಿರೇಗುತ್ತಿ 2 ಮತಗಟ್ಟೆಗಳಿವೆ.

ಗೋಕರ್ಣ: ಮಂಗಳವಾರ ನಡೆಯಲಿರುವ ಲೋಕಸಭಾ ಚುಣಾವಣೆಯ ಮತದಾನಕ್ಕೆ ಪ್ರವಾಸಿತಾಣದ ಮತಗಟ್ಟೆಗಳು ಸಕಲ ರೀತಿಯಲ್ಲಿ ಸಜ್ಜಾಗಿವೆ.

ಮತಗಟ್ಟೆ ಅಧಿಕಾರಿಗಳು ಪೊಲೀಸ್ ಸಿಬ್ಬಂದಿಗಳೊಂದಿಗೆ ಸೋಮವಾರ ಸಂಜೆ ಆಯಾ ಮತಗಟ್ಟೆಗೆ ಆಗಮಿಸಿದ್ದಾರೆ.

ಅವರಿಗೆ ವಸತಿ ಹಾಗೂ ಕುಡಿಯುವ ನೀರು ಊಟ, ತಿಂಡಿ ಸೇರಿದಂತೆ ಎಲ್ಲ ವ್ಯವಸ್ಥೆ ಕಲ್ಪಿಸಲಾಗಿದೆ. ಮತದಾರರಿಗ ಸಹ ಅನುಕೂಲತೆ ಒದಗಿಸಲಾಗಿದೆ. ನಡೆಯಲಾಗದ ಮತದಾರರಿಗೆ ಗಾಲಿಕುರ್ಚಿ ಇಡಲಾಗಿದೆ.

ಗೋಕರ್ಣ ಗ್ರಾಪಂ ವ್ಯಾಪ್ತಿಯಲ್ಲಿ 12, ನಾಡುಮಾಸ್ಕೇರಿ ಗ್ರಾಪಂ ವ್ಯಾಪ್ತಿಯಲ್ಲಿ 6 ಹನೇಹಳ್ಳಿ ಗ್ರಾಪಂ 5, ತೊರ್ಕೆ 4, ಹಿರೇಗುತ್ತಿ 2 ಮತಗಟ್ಟೆಗಳಿವೆ. ಒಂದು ಮತಗಟ್ಟೆಗೆ ಒಟ್ಟು 6 ಸಿಬ್ಬಂದಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದಾರೆ. ಒಟ್ಟಾರೆ ಶಾಂತಿಯುತ ಮತದಾನಕ್ಕೆ ಎಲ್ಲ ರೀತಿಯಲ್ಲಿ ಸಜ್ಜಾಗಿದ್ದು, ಪ್ರಜಾಪ್ರಭುತ್ವದ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ.

ವ್ಯಾಪಾರಸ್ಥರ ಅಸಮಾಧಾನ: ಮತಗಟ್ಟೆಯ ನೂರು ಮೀಟರ್ ವ್ಯಾಪ್ತಿಯಲ್ಲಿನ ಎಲ್ಲ ಅಂಗಡಿಯನ್ನು ಚುಣಾವಣೆಯ ದಿನ ಮುಚ್ಚುವಂತೆ ಪೊಲೀಸ್ ಸಿಬ್ಬಂದಿ ಸೂಚಿಸಿದ್ದಾರೆ. ಆದರೆ ಪ್ರತಿ ಬಾರಿ ನಾವು ಅಂಗಡಿ ತೆರದು ವ್ಯಾಪರ ನಡೆಸುತ್ತಾ ಬಂದಿದ್ದು, ಈ ಸಲ ಏಕೆ ಈ ರೀತಿ ಎಂದು ಆಕ್ಷೇಪ ವ್ಯಕ್ತಪಡಿಸಿದ್ದು, ದಿನದ ದುಡಿಮೆಗೆ ಕಷ್ಟ ನೀಡಬೇಡಿ ಎಂದು ಅಂಗಡಿಕಾರರು ಮನವಿ ಮಾಡಿದ್ದಾರೆ.ಮತದಾನದ ದಿನ ಕಾರ್ಮಿಕರಿಗೆ ವೇತನಸಹಿತ ರಜೆ

ಕಾರವಾರ: ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಮೇ 7ರಂದು ಮತದಾನ ನಡೆಯಲಿದ್ದು, ಜಿಲ್ಲಾ ವ್ಯಾಪ್ತಿಯ ಎಲ್ಲ ಕಾರ್ಮಿಕರಿಗೆ ಮತದಾನ ಮಾಡಲು ಅನುಕೂಲವಾಗುವಂತೆ ವೇತನ ಸಹಿತ ರಜೆ ಘೋಷಿಸಲಾಗಿದೆ.ಕಾರ್ಖಾನೆಗಳು, ಅಂಗಡಿಗಳು, ವಾಣಿಜ್ಯ ಸಂಸ್ಥೆಗಳು ಹಾಗೂ ಇತರ ಸಂಸ್ಥೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ 1951ರ ಪ್ರಜಾ ಪ್ರತಿನಿಧಿ ಕಾಯ್ದೆ, ಸೆಕ್ಷನ್ 135(ಬಿ) ರಡಿ ಹಾಗೂ ಕೈಗಾರಿಕಾ ಸಂಸ್ಥೆಗಳ(ರಾಷ್ಟ್ರೀಯ ಮತ್ತು ಹಬ್ಬದ ರಜೆಗಳು) ಕಾಯ್ದೆ 1963 ಕಲಂ 3(ಎ) ರನ್ವಯ ಕಾರ್ಮಿಕರಿಗೆ ವೇತನ ಸಹಿತ ರಜೆ ಮಂಜೂರು ಮಾಡಿ ಸಂವಿಧಾನಾತ್ಮಕ ಹಕ್ಕಾದ ಕಡ್ಡಾಯವಾಗಿ ಮತವನ್ನು ಚಲಾಯಿಸುವುದಕ್ಕಾಗಿ ಎಲ್ಲ ಮಾಲೀಕರು, ನಿಯೋಜಕರು ಅನುವು ಮಾಡಿಕೊಡಬೇಕಿದೆ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.