ದುಷ್ಟರನ್ನು ಶಿಕ್ಷಿಸಲು ಅವತರಿಸಿದ ರೂಪವೇ ಕಾಳಿ: ಸ್ವಾಮೀಜಿ

| Published : May 07 2024, 01:02 AM IST

ದುಷ್ಟರನ್ನು ಶಿಕ್ಷಿಸಲು ಅವತರಿಸಿದ ರೂಪವೇ ಕಾಳಿ: ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ದುಷ್ಟರನ್ನು ಶಿಕ್ಷಿಸಲು ಅವತರಿಸಿದ ರೂಪವೇ ಕಾಳಿ. ಇದು ದೇವಿಯ ರುದ್ರ ಸ್ವರೂಪ.

ಸಿದ್ದಾಪುರ: ಜಗತ್ತು ಶಕ್ತಿಯಿಂದ ನಡೆಯುತ್ತಿದೆ. ಜಗತ್ತಿನಲ್ಲಿ ಅನಂತ ಶಕ್ತಿಗಳಿವೆ. ಎಲ್ಲ ಶಕ್ತಿಗಳನ್ನು ಒಟ್ಟಿಗೆ ಸೇರಿಸಿದಾಗ ಜಗನ್ಮಾತೆ ಭವಾನಿ ಉದ್ಭವಿಸುತ್ತಾಳೆ ಎಂದು ಶಿರಳಗಿ ರಾಜಾರಾಮ ಕ್ಷೇತ್ರದ ಬ್ರಹ್ಮಾನಂದ ಭಾರತೀ ಸ್ವಾಮಿಗಳು ತಿಳಿಸಿದರು.

ಶುಕ್ರವಾರ ಪಟ್ಟಣದ ಕೊಂಡ್ಲಿಯ ಕಾಳಿಕಾ ಭವಾನಿ(ಕಾಳಮ್ಮ) ದೇವಿ ಹಾಗೂ ಪರಿವಾರ ದೇವತೆಗಳ ನೂತನ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ಮತ್ತು ನೂತನ ಆಲಯದ ಪರಿಗ್ರಹ ಮಹೋತ್ಸವದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು.

ದುಷ್ಟರನ್ನು ಶಿಕ್ಷಿಸಲು ಅವತರಿಸಿದ ರೂಪವೇ ಕಾಳಿ. ಇದು ದೇವಿಯ ರುದ್ರ ಸ್ವರೂಪ. ಅಮ್ಮನ ಋಣ ನೆನಪಿರಲು ದೇವರು ನಮಗೆ ಹೊಕ್ಕಳು ಬಳ್ಳಿಯನ್ನು ನೀಡಿದ್ದಾನೆ. ನಮ್ಮನ್ನು ಹೊತ್ತ ತಾಯಿಗೆ ನಮ್ಮ ಬಗೆಗೆ ಅಪಾರ ಪ್ರೀತಿ ಹೊಂದಿರಬೇಕಾದರೆ ಜಗತ್ತನ್ನು ನಿರ್ಮಿಸಿದ ಜಗನ್ಮಾತೆ ನಮ್ಮ ಬಗೆಗೆ ಎಂತಹ ಪ್ರೀತಿ ಇರಬಹುದು ಎಂಬುದನ್ನು ಅರಿಯಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಭಾಗಿಯಾದ ಮಂಜಗುಣಿಯ ಅರ್ಚಕ ಶ್ರೀನಿವಾಸ ಭಟ್ಟ ಮಾತನಾಡಿ, ಮಠ ಮತ್ತು ಮಂದಿರಗಳು ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಇಲ್ಲಿ ನಾನು, ನನ್ನದು ಎನ್ನುವುದು ಯಾವುದು ಇಲ್ಲ. ತಾಯಿಯ ಇಚ್ಛೆ ನನ್ನ ಮೂಲಕ ವ್ಯಕ್ತವಾಗಿದೆ. ಕಾಣುವುದಕ್ಕೂ ನೋಡುವುದಕ್ಕೂ ಬಹಳ ವ್ಯತ್ಯಾಸವಿದೆ. ದೇವಸ್ಥಾನವನ್ನು ನೋಡಬಹುದು, ಆದರೆ ದೇವರನ್ನು ಕಾಣಬೇಕು. ಆಗ ಮಾತ್ರ ದೇವಾಲಯಗಳ ನಿರ್ಮಾಣ ಸಾರ್ಥಕ. ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಸ್ಕಾರವಾಗಿ ಬದಲಾದಾಗ ಮಾತ್ರ ಕಾರ್ಯಕ್ರಮಗಳು ಅರ್ಥಪೂರ್ಣವಾಗುತ್ತದೆ ಎಂದರು.

ಮತ್ತೋರ್ವ ಅತಿಥಿ ಶಿರಳಗಿ ಮೂಲದ ಬೆಂಗಳೂರು ನಿವಾಸಿ, ಪ್ರಖ್ಯಾತ ಜ್ಯೋತಿಷಿ ವಿ. ಗೋಪಾಲಕೃಷ್ಣ ಶರ್ಮಾ ಮಾತನಾಡಿ, ಬಹಳ ಸಮಯದಿಂದ ಪ್ರಯತ್ನ ಪಟ್ಟರೂ ಆಗದ ದೇವಾಲಯ ನಿರ್ಮಾಣ ಈಗ ಪೂರ್ಣಗೊಂಡಿರುವುದು ದೇವಿಯ ಇಚ್ಛೆಯೇ ಆಗಿದೆ ಎಂದರು.

ಪಟ್ಟಣದ ಶಂಕರ ಮಠದ ಧರ್ಮದರ್ಶಿ ವಿಜಯ ಹೆಗಡೆ ದೊಡ್ಮನೆ, ದೇವಾಲಯದ ವಾಸ್ತುಶಿಲ್ಪಿ ಶಿರಸಿಯ ಅರುಣ ನಾಯಕ, ವಿಗ್ರಹದ ಶಿಲ್ಪಿ ವರ್ಲೆಗದ್ದೆಯ ವೆಂಕಟರಮಣ ಹೆಗಡೆ ಮಾತನಾಡಿದರು.

ದೇವಾಲಯ ಆಡಳಿತ ಸಮಿತಿ ಗೌರವಾಧ್ಯಕ್ಷ ಜಿ.ಜಿ. ಭಟ್ಟ ಹೆಗ್ಗಾರಳ್ಳಿ ಹಾಗೂ ಇನ್ನಿತರ ಪದದಾಧಿಕಾರಿಗಳು ವೇದಿಕೆಯಲ್ಲಿದ್ದರು.

ಈ ಸಂದರ್ಭದಲ್ಲಿ ದೇವಾಲಯ ನಿರ್ಮಾಣದಲ್ಲಿ ಕಾರ್ಯನಿರ್ವಹಿಸಿದವರನ್ನು ಗೌರವಿಸಲಾಯಿತು. ದೇವಾಲಯ ಪ್ರತಿಷ್ಠಾಪನಾ ಸಮಿತಿಯ ಗೌರವಾಧ್ಯಕ್ಷ ಶ್ರೀಧರ ವೈದ್ಯ ಸ್ವಾಗತಿಸಿದರು, ಪ್ರತಿಷ್ಠಾಪನಾ ಸಮಿತಿಯ ಅಧ್ಯಕ್ಷ ಜೈವಂತ ಶಾನಭಾಗ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಶಿನಾಥ ಪೈ ನಿರೂಪಿಸಿದರು. ನರಹರಿ ಡೋಂಗ್ರೆ ವಂದಿಸಿದರು.

ಫೋಟೊಪೈಲ್- ೩ಎಸ್ಡಿಪಿ೨

ಧರ್ಮಸಭೆಯಲ್ಲಿ ಬ್ರಹ್ಮಾನಂದ ಭಾರತೀ ಸ್ವಾಮಿಗಳು ಆಶೀರ್ವಚನ ನೀಡಿದರು.೩

ನೂತನವಾಗಿ ಪ್ರತಿಷ್ಠಾಪಿಸಲಾದ ಕಾಳಿಕಾಭವಾನಿ ದೇವಿ.