ಒಂದೇ ಕೇಂದ್ರದಲ್ಲಿ ಎರಡು ಮತಗಟ್ಟೆ

| Published : May 07 2024, 01:02 AM IST

ಸಾರಾಂಶ

ಮತಗಟ್ಟೆ ಸಂಖ್ಯೆ-123 ಹಾಗೂ ಮತಗಟ್ಟೆ ಸಂಖ್ಯೆ 125 ಎರಡೂ ಮತಗಟ್ಟೆಗಳನ್ನು ಒಂದೇ ಕೊಠಡಿಯಲ್ಲಿ ಸ್ಥಾಪಿಸಿರುವುದು ಸ್ಥಳಿಯರ ಆಕ್ರೋಶಕ್ಕೆ ಕಾರಣವಾಗಿದೆ.

ಹುಬ್ಬಳ್ಳಿ:

ನಗರದ ಬಂಕಾಪುರ ಚೌಕ್‌ ಬಳಿಯ ಇಂದಿರಾ ನಗರ ಸಮುದಾಯ ಭವನವೊಂದರಲ್ಲಿಯೇ 2 ಮತಗಟ್ಟೆ ಸ್ಥಾಪಿಸಲಾಗಿದೆ. ಅದೂ ಒಂದು ಸಾಮಾನ್ಯ ಮತಗಟ್ಟೆಯಾಗಿದ್ದರೆ ಮತ್ತೊಂದು ದುರ್ಬಲ ಮತಗಟ್ಟೆಯಾಗಿದೆ.ಈ ಸಮುದಾಯ ಭವನದಲ್ಲಿ ಮತಗಟ್ಟೆ ಸಂಖ್ಯೆ-123 ಹಾಗೂ ಮತಗಟ್ಟೆ ಸಂಖ್ಯೆ 125 ಎರಡೂ ಮತಗಟ್ಟೆಗಳನ್ನು ಒಂದೇ ಕೊಠಡಿಯಲ್ಲಿ ಸ್ಥಾಪಿಸಿರುವುದು ಸ್ಥಳಿಯರ ಆಕ್ರೋಶಕ್ಕೆ ಕಾರಣವಾಗಿದೆ. ಇದರಲ್ಲಿ ಮತಗಟ್ಟೆ 123 ಸಂಖ್ಯೆ ಮತಗಟ್ಟೆ ದುರ್ಬಲ ಮತಗಟ್ಟೆಯಾಗಿದ್ದು, 878 ಮತದಾರರನ್ನು ಹೊಂದಿದೆ. ಇದೇ ಕೇಂದ್ರದಲ್ಲಿ ಮತಗಟ್ಟೆ ಸಂಖ್ಯೆ 125ರಲ್ಲಿ 1058 ಮತದಾರರಿದ್ದಾರೆ. ಒಟ್ಟು 1936 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಎರಡೂ ಮತಗಟ್ಟೆಗೆ ಮತದಾರರು ಬರಲು ಮತ್ತು ಹೋಗಲು ಒಂದೇ ಬಾಗಿಲಿದೆ. ಇದರಿಂದ ಮತದಾನ ಪ್ರಕ್ರಿಯೆಯಲ್ಲಿ ಗದ್ದಲ ಮತ್ತು ಗಲಾಟೆಯಾಗುವ ಸಂಭವವಿದೆ. ಮುಂದಿನ ಚುನಾವಣೆಯಲ್ಲಾದರೂ ಪ್ರತ್ಯೇಕವಾಗಿಯೇ ಮತಗಟ್ಟೆ ತೆರೆಯಬೇಕು ಎಂಬುದು ಸ್ಥಳೀಯ ಮತದಾರರ ಅನಿಸಿಕೆಯಾಗಿದೆ.

ಮುಖ್ಯ ರಸ್ತೆ ಪಕ್ಕದಲ್ಲಿಯೇ ಮತಗಟ್ಟೆ:

ಈ ಮತಗಟ್ಟೆಯ ಕೂಗಳತೆಯ ದೂರದಲ್ಲಿರುವ ಎಸ್‌ಡಿಎನ್‌ ಪೂರ್ವ ಪ್ರಾಥಮಿಕ, ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸ್ಥಾಪಿಸಲಾಗಿರುವ ಮತಗಟ್ಟೆ ಸಂಖ್ಯೆ 124 ಪೂನಾ-ಬೆಂಗಳೂರು ರಸ್ತೆಗೆ ಹೊಂದಿಕೊಂಡಿದೆ. ಇಲ್ಲಿ 834 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಚುನಾವಣೆಯ ನಿರ್ದೇಶನದಂತೆ ಮತಗಟ್ಟೆ ಕೇಂದ್ರದ ಸುತ್ತಲೂ 100 ಮೀಟರ್‌ ವ್ಯಾಪ್ತಿಯಲ್ಲಿ ಸಾರ್ವಜನಿಕರ ಸಂಚಾರ ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಆದರೆ, ಈ ಮತಗಟ್ಟೆಯ ಪಕ್ಕದಲ್ಲಿಯೇ ಮುಖ್ಯರಸ್ತೆಯಿದ್ದು, ನಿತ್ಯವೂ ಸಾವಿರಾರು ವಾಹನ, ಜನದಟ್ಟಣೆ ಸಾಮಾನ್ಯವಾಗಿರುತ್ತದೆ. ದಿಢೀರೆಂದು ಯಾರಾದರೂ ಮತಕೇಂದ್ರಕ್ಕೆ ನುಗ್ಗುವ ಆತಂಕವಿದೆ. ಇಲ್ಲಿನ ಪೊಲೀಸ್ ಸಿಬ್ಬಂದಿಗಳಿಗೆ ಕೇಳಿದರೆ ಮುಖ್ಯರಸ್ತೆಯಿಂದ ಮತಗಟ್ಟೆ ಕೇಂದ್ರಕ್ಕೆ ಯಾರೂ ಬರದಂತೆ ಅಗತ್ಯ ಭದ್ರತೆ ಕಲ್ಪಿಸಲಾಗುವುದು. ಪ್ರತಿ ಬಾರಿಯೂ ಇಲ್ಲಿಯೇ ಮತದಾನವಾಗುತ್ತದೆ. ಈ ವರೆಗೂ ಯಾವುದೇ ಸಮಸ್ಯೆಯಾಗಿಲ್ಲ ಎನ್ನುತ್ತಾರೆ.

ಒಟ್ಟಾರೆಯಾಗಿ ಒಂದೇ ಕೇಂದ್ರದಲ್ಲಿ ಎರಡು ಮತಗಟ್ಟೆ ಹಾಗೂ ಮತ್ತೊಂದು ಕಡೆ ಮುಖ್ಯರಸ್ತೆಗೆ ಹೊಂದಿಕೊಂಡು ಮತಗಟ್ಟೆ ಸ್ಥಾಪಿಸಿದೆ. ಇಲ್ಲಿನ ಮತದಾರರು ಆತಂಕದಲ್ಲಿಯೇ ಬಂದು ಮತಚಲಾವಣೆ ಮಾಡುವ ಪರಿಸ್ಥಿತಿ ಉದ್ಭವವಾಗಿದೆ.