ಮತದಾರರನ್ನು ಆಕರ್ಷಿಸಲು ವಿಶೇಷ ಮತಗಟ್ಟೆಗಳ ಸ್ಥಾಪನೆ

| Published : May 07 2024, 01:02 AM IST

ಸಾರಾಂಶ

ರಾಣಿಬೆನ್ನೂರು ತಾಲೂಕಿನ ರಾಹುತನಕಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗೋವಿಂದ ಬಡಾವಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ -62ರ ಮತಗಟ್ಟೆ ಹೊರಗೆ ಮತ್ತು ಒಳಗೆ ಕೃಷ್ಣಮೃಗ ಅಭಿಯಾರಣ್ಯ ಕುರಿತು ಸುಂದರ ಛಾಯಾಚಿತ್ರಗಳನ್ನು ಬಿಡಿಸಲಾಗಿದೆ.

ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತಾಲೂಕಿನ ಗ್ರಾಮೀಣ ಹಾಗೂ ನಗರ ಪ್ರದೇಶದ ಮತದಾರರನ್ನು ಸೆಳೆಯುವ ಸಲುವಾಗಿ 5 ಮತಗಟ್ಟೆಗಳಲ್ಲಿ ಪರಿಸರ ಸ್ನೇಹಿ, ವಿಶೇಷ ಚೇತನರ ಸ್ನೇಹಿ, ಮಹಿಳಾ ಸ್ನೇಹಿ ಪೂರಕ ವಾತಾವರಣ ನಿರ್ಮಿಸುವ ಉದ್ದೇಶದಿಂದ 5 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ತಾಲೂಕಿನ ರಾಹುತನಕಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗೋವಿಂದ ಬಡಾವಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ -62ರ ಮತಗಟ್ಟೆ ಹೊರಗೆ ಮತ್ತು ಒಳಗೆ ಕೃಷ್ಣಮೃಗ ಅಭಿಯಾರಣ್ಯ ಕುರಿತು ಸುಂದರ ಛಾಯಾಚಿತ್ರಗಳನ್ನು ಬಿಡಿಸಲಾಗಿದೆ.

ವಿಶೇಷ ಚೇತನರ ಮತಗಟ್ಟೆ

ತಾಲೂಕಿನ ಕರೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಮತಗಟ್ಟೆ ಸಂಖ್ಯೆ -167ರಲ್ಲಿ ಅಂಗವಿಕಲರಿಗೆ ವೃದ್ಧರಿಗೆ ವಿಶೇಷ ಸೌಲತ್ತುಗಳನ್ನು ಒಳಗೊಂಡ ಮತಗಟ್ಟೆಯನ್ನು ಸ್ಥಾಪನೆ ಮಾಡಲಾಗಿದೆ. ಮತಗಟ್ಟೆಯ ಹೊರಭಾಗ ಮತ್ತು ಒಳಭಾಗದಲ್ಲಿ ಆಕರ್ಷಣೀಯ ವಿಶೇಷ ಚೇತನರ ಛಾಯಾಚಿತ್ರಗಳನ್ನು ಬಿಡಿಸಲಾಗಿದ್ದು ಇದು ಮತದಾನಕ್ಕಾರಿ ವಿಶೇಷ ಚೇತನ ಮತದಾರರನ್ನು ಕೈಬೀಸಿ ಕರೆಯುವಂತಿದೆ. ಇದಲ್ಲದೆ ಮತಗಟ್ಟೆಗೆ ಬರುವ ವಿಶೇಷ ಚೇತನರಿಗೆ ವೀಲ್‌ಚೇರ್, ನೆರಳು ಮತ್ತು ರ‍್ಯಾಂಪ್ ವ್ಯವಸ್ಥೆ, ಕುಡಿಯುವ ನೀರು, ಫ್ಯಾನ್ ಇತ್ಯಾದಿ ಸೌಲಭ್ಯಗಳನ್ನು ಒಳಗೊಂಡ ಆಕರ್ಷಣೀಯ ಮತಗಟ್ಟೆ ಸ್ಥಾಪಿಸಲಾಗಿದೆ.

ಸಖಿ ಮತಗಟ್ಟೆಗಳು

ತಾಲೂಕಿನ ಕಮದೋಡ, ಇಟಗಿ ಮತ್ತು ಕುಪ್ಪೇಲೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಮತಗಟ್ಟೆ ಸಂಖ್ಯೆ-175ರ ಮಹಿಳಾ ಸ್ನೇಹಿ ಮತಗಟ್ಟೆಯ ಹೊರಗೆ ಮತ್ತು ಒಳಗೆ ಛಾಯಾಚಿತ್ರಗಳನ್ನು ಬಿಡಿಸಲಾಗಿದ್ದು ಮತದಾರರನ್ನು ಸೆಳೆಯುವಂತಿದೆ.