ಎಲ್ಲ ಪ್ರಕಾರದ ಕಲೆಗಳಿಗೆ ಮೂಲ ‘ಜನಪದ’: ರಂಗ ಕಲಾವಿದೆ ಸವಿತಕ್ಕ

| Published : May 07 2024, 01:02 AM IST

ಎಲ್ಲ ಪ್ರಕಾರದ ಕಲೆಗಳಿಗೆ ಮೂಲ ‘ಜನಪದ’: ರಂಗ ಕಲಾವಿದೆ ಸವಿತಕ್ಕ
Share this Article
  • FB
  • TW
  • Linkdin
  • Email

ಸಾರಾಂಶ

ಜನಪದ ಎಲ್ಲ ಪ್ರಾಕಾರದ ಕಲೆಗಳಿಗೂ ಮೂಲ. ಇಂತಹ ಕಲೆಯನ್ನು ಉಳಿಸಿ ಬೆಳೆಸಬೇಕಾದ ಅನಿವಾರ್‍ಯತೆ ಇದೆ. ಮೂಲ ಜನಪದಕ್ಕೆ ಪಾಶ್ಚಿಮಾತ್ಯ ಸಂಸ್ಕೃತಿ ಬೆರೆಸಿ ಹಾಡುತ್ತಿರುವುದನ್ನು ಕಂಡಿದ್ದೇವೆ. ಅದೇ ರೀತಿ ವಿದೇಶಿ ಸಂಸ್ಕೃತಿ, ಅಲ್ಲಿನ ಕಲೆಯನ್ನು ನಾವು ಬಳಸಿಕೊಂಡು ನಮ್ಮ ತನವನ್ನು ಮರೆಯುತ್ತಿದ್ದೇವೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗುತ್ತಿರುವ ಯುವ ಜನತೆ ಗ್ರಾಮೀಣ ಸೊಗಡಿನ ಜನಪದವನ್ನು ಮರೆಯುತ್ತಿದ್ದಾರೆ ಎಂದು ರಂಗ ಕಲಾವಿದೆ ಸವಿತಕ್ಕ ಆತಂಕ ವ್ಯಕ್ತಪಡಿಸಿದರು.

ನಗರದ ವಿವೇಕಾನಂದ ರಂಗ ಮಂದಿರದಲ್ಲಿ ಜನತಾ ಶಿಕ್ಷಣ ಟ್ರಸ್ಟ್, ಪಿಇಎಸ್ ವಿಜ್ಞಾನ, ಕಲಾ ಮತ್ತು ವಾಣಿಜ್ಯ ಕಾಲೇಜು ವತಿಯಿಂದ ನಿತ್ಯ ಸಚಿವ ಕೆ.ವಿ.ಶಂಕರಗೌಡರ 28ನೇ ವರ್ಷದ ಸ್ಮರಣಾರ್ಥ ನಡೆದ ರಾಜ್ಯ ಮಟ್ಟದ ಜನಪದ ಗೀತೆ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.

ಜನಪದ ಕ್ಷೇತ್ರದಲ್ಲಿ ಸಾಧನೆ ಮಾಡಿರುವವರೆಲ್ಲರೂ ಒಂದಲ್ಲ ಒಂದು ದಿನ ಮರೆಯಾಗುತ್ತಾರೆ. ಆದರೆ, ಜನಪದ ಮಾತ್ರ ಮರೆಯಾಗಬಾರದು. ಇದನ್ನು ಅರಿತು ಯುವಜನತೆ ಮುಂದುವರಿಸುವ ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು.

ನಾವು ಜನಪದ ಗೀತೆ ಕಲಿತಿರುವುದರಿಂದ ನಮ್ಮನ್ನು ವೇದಿಕೆಗೆ ಆಹ್ವಾನಿಸುತ್ತಾರೆ. ಇದು ನಮಗೆ ಬಹಳ ಖುಷಿ ನೀಡುತ್ತದೆ. ಮುಂದಿನ ಪೀಳೆಗೆ ಜನಪದ ಬೆಳೆಸಬೇಕು. ಇಂದಲ್ಲ ನಾಳೆ ನಾವೆಲ್ಲ ಮರೆಯಾಗುತ್ತೇವೆ. ಆದರೆ, ಮುಂದಿನ ದಿನಗಳಲ್ಲಿ ಜನಪದ ಉಳಿಯಲು ನೀವು ವೇದಿಕೆಗಳಲ್ಲಿ ಜನಪದ ಹಾಡಬೇಕು ಎಂದರು.

ಜನಪದ ಎಲ್ಲ ಪ್ರಾಕಾರದ ಕಲೆಗಳಿಗೂ ಮೂಲ. ಇಂತಹ ಕಲೆಯನ್ನು ಉಳಿಸಿ ಬೆಳೆಸಬೇಕಾದ ಅನಿವಾರ್‍ಯತೆ ಇದೆ. ಮೂಲ ಜನಪದಕ್ಕೆ ಪಾಶ್ಚಿಮಾತ್ಯ ಸಂಸ್ಕೃತಿ ಬೆರೆಸಿ ಹಾಡುತ್ತಿರುವುದನ್ನು ಕಂಡಿದ್ದೇವೆ. ಅದೇ ರೀತಿ ವಿದೇಶಿ ಸಂಸ್ಕೃತಿ, ಅಲ್ಲಿನ ಕಲೆಯನ್ನು ನಾವು ಬಳಸಿಕೊಂಡು ನಮ್ಮ ತನವನ್ನು ಮರೆಯುತ್ತಿದ್ದೇವೆ ಎಂದು ವಿಷಾದಿಸಿದರು.

ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗುವುದರಿಂದ ಜನಪದ ಉಳಿಸಲು ಸಾಧ್ಯವಾಗದು. ಇನ್ನಾದರೂ ಮೂಲ ಜನಪದವನ್ನು ಉಳಿಸುವ ನಿಟ್ಟಿನಲ್ಲಿ ಸಂಘ ಸಂಸ್ಥೆಗಳೂ ಸಹ ಸಹಕಾರ ನೀಡಬೇಕು ಎಂದು ಕೋರಿದರು.

ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯ್‌ ಆನಂದ್ ಮಾತನಾಡಿ, ಗ್ರಾಮೀಣ ಪ್ರತಿಭೆಗಳು ಜನಪದ ಕ್ಷೇತ್ರದಲ್ಲಿ ಗುರುತಿಸಿಕೊಂಡು ಇಂದು ರಾಷ್ಟ್ರ, ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಹಾಡುತ್ತಿದ್ದಾರೆ. ದೇಶಿ ಕಲೆ ಉಳಿಯಲು ಇಂತಹ ವೇದಿಕೆಯಲ್ಲಿ ಪ್ರತಿಭೆ ಪ್ರದರ್ಶಿಸಿ ನೀವು ಬೆಳೆಯಿರಿ ಎಂದು ಶುಭ ಕೋರಿದರು.

ನಮ್ಮ ತಾತಾ ಕೆ.ವಿ.ಶಂಕರಗೌಡ ಅವರು ಕಲಾವಿದರಾಗಿದ್ದರು. ನಮ್ಮ ಜೀವನವೇ ನಾಟಕ ರಂಗವಾಗಿದೆ. ನಾಟಕದಲ್ಲಿ ಯಾವ ಪಾತ್ರ ನಿರ್ವಹಿಸಬೇಕು ಎಂದು ತಿಳಿಯುತ್ತಿಲ್ಲ. ನಮ್ಮ ತಾತಾ ಮತ್ತು ಸಂಗಡಿಗರು ನಾಟಕ ಮಾಡಿ ಈ ಸಂಸ್ಥೆಯನ್ನು ಕಟ್ಟಿದ್ದಾರೆ ಎಂದು ಸ್ಮರಿಸಿದರು.

ಜಾನಪದ ಗೀತೆ ಸ್ಪರ್ಧೆಯಲ್ಲಿ ಕಾಲೇಜಿನ ವಿದ್ಯಾರ್ಥಿ ವಿಭಾಗ ಮತ್ತು ಸಾರ್ವಜನಿಕ ವಿಭಾಗದ ಸ್ಪರ್ಧಾರ್ಥಿಗಳು ಪಾಲ್ಗೊಂಡಿದ್ದರು.

ಪ್ರಾಂಶುಪಾಲ ಡಾ.ಮಂಜುನಾಥ್, ರಾಷ್ಟ್ರೀಯ ಜನಪದ ಗಾಯಕ ರಮೇಶ್, ಆಕಾಶವಾಣಿ ಕಲಾವಿದ ಜಿ.ಜಿ. ನವೀನ್‌ಕುಮಾರ್, ಉಪನ್ಯಾಸಕ ಎಸ್.ಪಿ.ಕ್ಯಾತೇಗೌಡ, ಕಾಲೇಜಿನ ಸಾಂಸ್ಕೃತಿಕ ಸಮಿತಿ ಸಂಚಾಲಕಿ ಡಾ. ಜಿ. ಸವಿತಾ, ವಿದ್ಯಾರ್ಥಿ ಕ್ಷೇಮ ಸಮಿತಿ ಸಂಚಾಲಕ ಪ್ರೊ. ವೀರೇಶ್, ಪ್ರೊ. ನಂದೀಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.ಜಾನಪದ ಗೀತೆಗಳನ್ನು ಏಕಾಗ್ರತೆಯಿಂದ ಕಲಿಯಬೇಕು. ಇಷ್ಟಪಟ್ಟು-ಕಷ್ಟಪಟ್ಟು ಗೀತೆಗಳ ಹಾಡುಗಾರಿಕೆಯನ್ನು ಕಲಿತು ಸಾಧನೆ ಮಾಡಬೇಕು. ನಾವು ಜನಪದಗೀತೆ ಹಾಡಲು ದೂರದ ಅಮೆರಿಕಾ, ದುಬೈ ಸೇರಿದಂತೆ ವಿವಿಧ ದೇಶಗಳಿಗೆ ಹೋಗಿದ್ದೇನೆ. ಮುಂದಿಯೂ ಹೋಗುತ್ತೇನೆ. ನೀವೂ ಹೋಗಿ ಜನಪದ ಗೀತೆ ಹಾಡಿ.

- ಸವಿತಕ್ಕ, ರಂಗ ಕಲಾವಿದೆ