ಕರಾವಳಿಯಲ್ಲಿ ಹಲವರಿಗೆ ಆರೋಗ್ಯ ಸಮಸ್ಯೆ: ಉಷ್ಣಾಂಶ ಏರಿಕೆಯಿಂದ ಡೆಂಘೀ ಆತಂಕ

| Published : May 07 2024, 01:00 AM IST

ಕರಾವಳಿಯಲ್ಲಿ ಹಲವರಿಗೆ ಆರೋಗ್ಯ ಸಮಸ್ಯೆ: ಉಷ್ಣಾಂಶ ಏರಿಕೆಯಿಂದ ಡೆಂಘೀ ಆತಂಕ
Share this Article
  • FB
  • TW
  • Linkdin
  • Email

ಸಾರಾಂಶ

ದ.ಕ. ಜಿಲ್ಲೆಯಲ್ಲಿ ಕಳೆದ ಹಲವು ದಶಕಗಳ ತಾಪಮಾನವನ್ನು ಗಮನಿಸಿದಾಗ 32- 33 ಡಿಗ್ರಿ ಸೆ. ಉಷ್ಣಾಂಶ ದಾಖಲಾಗುತ್ತಿತ್ತು. ಈ ಬಾರಿ ತಾಪಮಾನ 36ರಿಂದ 40 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗಿದೆ. ಬಿಸಿಲಿನಲ್ಲಿ ಹೆಚ್ಚು ಓಡಾಡುತ್ತಿರುವವರಿಗೆ ತಲೆ ನೋವು, ಸುಸ್ತು, ನಿಶ್ಯಕ್ತಿ, ಚರ್ಮ ತುರಿಕೆ, ಜ್ವರ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿವೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್.ಆರ್.ತಿಮ್ಮಯ್ಯ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ದ.ಕ. ಜಿಲ್ಲೆಯಲ್ಲಿ ಹೆಚ್ಚುತ್ತಿರುವ ತಾಪಮಾನದ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ತುರ್ತು ಸಂದರ್ಭದಲ್ಲಿ ಚಿಕಿತ್ಸೆ ನೀಡಲು ಅನುಕೂಲವಾಗುವಂತೆ ಜಿಲ್ಲಾ ಮಟ್ಟದಲ್ಲಿ 6 ಬೆಡ್, ಪ್ರತಿ ತಾಲೂಕಿನಲ್ಲಿ ಎರಡು ಬೆಡ್, ಪ್ರತಿ ಆರೋಗ್ಯ ಕೇಂದ್ರಗಳಲ್ಲಿ ಒಂದು ಬೆಡ್‌ ಮೀಸಲಿರಿಸಲಾಗಿದೆ ಎಂದು ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್.ಆರ್. ತಿಮ್ಮಯ್ಯ ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ವತಿಯಿಂದ ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಸೋಮವಾರ ಮಾಧ್ಯಮ ಸಂವಾದದಲ್ಲಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಕಳೆದ ಹಲವು ದಶಕಗಳ ತಾಪಮಾನವನ್ನು ಗಮನಿಸಿದಾಗ 32- 33 ಡಿಗ್ರಿ ಸೆ. ಉಷ್ಣಾಂಶ ದಾಖಲಾಗುತ್ತಿತ್ತು. ಈ ಬಾರಿ ತಾಪಮಾನ 36ರಿಂದ 40 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗಿದೆ. ಬಿಸಿಲಿನಲ್ಲಿ ಹೆಚ್ಚು ಓಡಾಡುತ್ತಿರುವವರಿಗೆ ತಲೆ ನೋವು, ಸುಸ್ತು, ನಿಶ್ಯಕ್ತಿ, ಚರ್ಮ ತುರಿಕೆ, ಜ್ವರ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿವೆ. ಕೆಲವೊಮ್ಮೆ ಬಿಸಿಲಿನಾಘಾತ ಸಂಭವಿಸುವ ಸಾಧ್ಯತೆಯ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯಿಂದ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರು ಸಾಕಷ್ಟು ಮುಂಜಾಗ್ರತೆಯ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಹೇಳಿದರು.

ಏನು ಮಾಡಬೇಕು?:

ಬಿಸಿಲಿನ ಝಳ ಹೆಚ್ಚಿರುವ ಸಂದರ್ಭದಲ್ಲಿ ಹೊರಗೆ ಓಡಾಡದೆ ಇರುವುದು ಸೂಕ್ತ. ಶುದ್ಧ ನೀರಿನ ಸೇವನೆ, ಮಜ್ಜಿಗೆ ಸೇವನೆ, ಬಿಳಿ ಅಥವಾ ತಿಳಿ ಬಣ್ಣದ ಬಟ್ಟೆ ಧರಿಸುವುದು, ಬಿಸಿಲಿನ ನೇರ ಘಾತ ತಡೆಯಲು ಚಪ್ಪಲಿ ಧರಿಸುವುದು, ಕೊಡೆ ಬಳಸುವುದು ಉತ್ತಮ. ದೇಹದಲ್ಲಿ ನೀರಿನ ಅಂಶ ಕಡಿಮೆಯಾಗದಂತೆ, ನಿರ್ಜಲೀಕರಣವಾಗದಂತೆ ಎಚ್ಚರ ವಹಿಸಬೇಕು ಎಂದು ಡಾ.ತಿಮ್ಮಯ್ಯ ಸಲಹೆ ನೀಡಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1.4 ಡಿಗ್ರಿ ಸೆಲ್ಸಿಯಸ್ ತಾಪಮಾನ ಹೆಚ್ಚಾಗಿದೆ. ಮರಗಳ ನಾಶ, ವಾಹನಗಳ ದಟ್ಟಣೆ, ಇಂಗಾಲದ ಡೈ ಆಕ್ಸೈಡ್ ಪ್ರಮಾಣ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ತಾಪಮಾನದ ಏರಿಕೆಯಾಗುತ್ತಿದೆ ಎಂದು ಜಿಲ್ಲಾ ರೋಗ ವಾಹಕ ಮತ್ತು ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ನವೀನ್ ಚಂದ್ರ ಕುಲಾಲ್ ಹೇಳಿದರು.

ಮತ್ತೆ ಡೆಂಘೀ ಆತಂಕ!:

ತಾಪಮಾನ ಹೆಚ್ಚುತ್ತಿರುವುದು ಸೊಳ್ಳೆಗಳ ಹೆಚ್ಚಳಕ್ಕೂ ಮೂಲ. ಹೀಗಾಗಿ ಡೆಂಘೀ ಜ್ವರದ ಪ್ರಕರಣಗಳು ಹೆಚ್ಚುತ್ತಿವೆ. ಈ ವರ್ಷ ಜನವರಿಯಿಂದ ಈವರೆಗೆ 108 ಡೆಂಘೀ ಪ್ರಕರಣಗಳು ಪತ್ತೆಯಾಗಿವೆ. ಹೊರ ಜಿಲ್ಲೆಯವರು ಜಿಲ್ಲೆಗೆ ಭೇಟಿ ನೀಡುತ್ತಿರುವುದು, ನೀರಿನ ಸಂಗ್ರಹ ಮಾಡಿಡುತ್ತಿರುವುದರಿಂದ ಕೂಡ ಅಲ್ಪ ಪ್ರಮಾಣದಲ್ಲಿ ಡೆಂಘೀ ಪ್ರಕರಣ ಹೆಚ್ಚಾಗಿರುವ ಸಾಧ್ಯತೆ ಇದೆ ಎಂದವರು ತಿಳಿಸಿದರು.

ಮಸಾಲೆಯುಕ್ತ ಆಹಾರ ಪದಾರ್ಥಗಳು ಬೇಸಗೆಯಲ್ಲಿ ಸೂಕ್ತವಲ್ಲ ಎಂದು ಡಾ.ನವೀನ್ ಕುಲಾಲ್ ಸಲಹೆ ನೀಡಿದರು. ಇದೇ ಸಂದರ್ಭ ಬಿಸಿಲಿನ ತಾಪಮಾನದ ಸಂದರ್ಭದಲ್ಲಿ ಸಾರ್ವಜನಿಕರು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಆರೋಗ್ಯ ಇಲಾಖೆಯ ಮಾಹಿತಿ ಪತ್ರವನ್ನು ಬಿಡುಗಡೆಗೊಳಿಸಲಾಯಿತು.

ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ, ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್. ಇದ್ದರು.