ಬಿಸಿಲ ತಾಪಕ್ಕೆ ತತ್ತರಿಸಿದ ರೇಷ್ಮೆ ಉತ್ಪಾದನೆ

| Published : May 07 2024, 01:07 AM IST

ಸಾರಾಂಶ

ರೇಷ್ಮೆ ಸಾಗಾಣಿಕೆಯಿಂದ ಬೆಳೆಗಾರರು ಹಿಂದೆ ಸರಿಯುತ್ತೀದ್ದಾರೆ. ವರ್ಷಕ್ಕೆ 6 ರಿಂದ 8 ಬೆಳೆಗಳನ್ನು ಸಾಕಾಣಿಕೆ ಮಾಡುತ್ತಿದ್ದವರು ಸುಡು ಬಿಸಿಲಿನ ಹಿನ್ನೆಲೆ ಕೇವಲ 4 ರಿಂದ 5 ಬೆಳೆಗಳನ್ನು ಮಾತ್ರ ಬೆಳೆಯುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಮಿಲ್ಕ್ ಮತ್ತು ಸಿಲ್ಕ್‌ಗೆ ಹೆಸರುವಾಸಿಯಾಗಿರುವ ತಾಲೂಕಿನಲ್ಲಿ ಬಿಸಿಲಿನ ಬೇಗೆ ಹೆಚ್ಚಾಗಿರುವ ಕಾರಣ ಒಂದು ಕಡೆ ಹಾಲು ಉತ್ಪಾದನೆ ಕುಂಠಿತವಾಗಿದ್ದರೆ ಮತ್ತೊಂದು ಕಡೆ ರೇಷ್ಮೆ ಉತ್ಪಾದನೆಗೂ ಕಂಟಕ ಎದುರಾಗಿದೆ. ರೇಷ್ಮೆ ಬೆಳೆಗಾರರಿಗೆ ಬೆಳೆ ತೆಗೆಯುವುದು ಸವಾಲಿನ ಪ್ರಶ್ನೆಯಾಗಿದೆ.

ಸಾಮಾನ್ಯವಾಗಿ ರೇಷ್ಮೆಗೆ ಬೆಳಗ್ಗೆ 26 ರಿಂದ 28 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಸೂಕ್ತವಾಗಿರುತ್ತದೆ. ಆದರೆ ಸದ್ಯ ಜಿಲ್ಲೆಯಲ್ಲಿ ಬಿಸಿಲ ತಾಪಮಾನ 36 ರಿಂದ 40 ಡಿಗ್ರಿ ಸೆಲ್ಸಿಯಸ್ ಮೀರಿ ದಾಖಲಾಗುತ್ತಿದೆ. ರೇಷ್ಮೆ ಹುಳುಗಳನ್ನು ರಕ್ಷಿಸುವುದು ಬೆಳೆಗಾರರಿಗೆ ದೊಡ್ಡ ಸವಾಲಾಗಿದೆ, ಬಿಸಿಲಿನ ಬೇಗೆಯಿಂದ ರೇಷ್ಮೆ ಉತ್ಪಾದನೆಯಲ್ಲಿ ಶೇ. 50 ರಷ್ಟು ಇಳಿಕೆ ಕಂಡಿದೆ.

ಹುಳುಗಳು ಸೊಪ್ಪು ತಿನ್ನುತ್ತಿಲ್ಲ

ತಾಲೂಕಿನ ಸುಮಾರು ಮೂರು ಸಾವಿರ ಕುಟುಂಬಗಳು ರೇಷ್ಮೆ ಬೆಳೆಯನ್ನೇ ಜೀವನಾಧಾರವಾಗಿ ನಂಬಿಕೊಂಡಿವೆ. ಶೀತ ರಕ್ತ ಕೀಟವಾದ ರೇಷ್ಮೆ ಹುಳುಗಳಿಗೆ ಹೆಚ್ಚಿನ ತಾಪಮಾನ ತಡೆಯುವ ಸಾಮರ್ಥ್ಯ ಕಡಿಮೆ. ಬಿಸಿಲಿನ ಬೇಗೆ ಹೆಚ್ಚಾದ ಕಾರಣ 9 ದಿನಗಳು ಹಿಪ್ಪುನೆರಳೆ ಸೊಪ್ಪು ತಿನ್ನುತ್ತಿದ್ದ ರೇಷ್ಮೆ ಹುಳುಗಳು ಕೇವಲ 5 ರಿಂದ 6 ದಿನಗಳು ಮಾತ್ರ ತಿನ್ನುತ್ತಿವೆ. ಇನ್ನೊಂದೆಡೆ ಬಿಸಿಲ ತಾಪ ಹೆಚ್ಚಾಗಿದ್ದು, ಹಿಪ್ಪು ನೇರಳೆ ಸೊಪ್ಪಿನಲ್ಲಿ ತೇವಾಂಶ ಇಲ್ಲದಂತಾಗಿ ಹುಳುಗಳಿಗೆ ನೀರಿನಾಂಶ ಸಿಗದೆ ರೇಷ್ಮೆ ಗೂಡಿನ ಉತ್ಪಾದನೆ ಕಡಿಮೆಯಾಗುತ್ತಿದೆ.

ಇದರಿಂದಾಗಿ ರೇಷ್ಮೆ ಗೂಡುಗಳ ಗುಣಮಟ್ಟ ಕುಸಿದಿದೆ. ಮಾರುಕಟ್ಟೆಗೆ ಈ ಹಿಂದೆಗಿಂತ ಶೇ. 50ಕ್ಕಿಂತ ಕಡಿಮೆ ಪ್ರಮಾಣದಲ್ಲಿ ರೇಷ್ಮೆ ಗೂಡುಗಳು ಪೂರೈಕೆಯಾಗುತ್ತಿವೆ. ಬಿಸಿಲನ ತಾಪ ಹೆಚ್ಚಳವಾಗಿರುವುದುದರಿಂದ ರೇಷ್ಮೆಯ ಬೆಲೆಯನ್ನು ಉಳಿಸಿಕೊಳ್ಳಲು ಬೆಳೆಗಾರರು ರೇಷ್ಮೆ ಮನೆಗಳಿಗೆ ಸುತ್ತ ಚಪ್ಪರ ಹಾಕುವುದು, ರೇಷ್ಮೆಯ ಮನೆ ಮೇಲೆ ತುಂತುರು ನೀರಾವರಿಯ ವ್ಯವಸ್ಥೆ ಮಾಡಿ ಆಗಾಗ ನೀರನ್ನು ಸಿಂಪಡಿಸುವುದು, ತಂಪು ಪೆಟ್ಟಿಗೆಯ ಅಳವಡಿಕೆ ಮಾಡಿ ಬೆಳೆ ಉಳಿಸಿಕೊಳ್ಳಲು ಅನೇಕ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.

ಇನ್ನೂ ಕೆಲವು ರೈತರು ರೇಷ್ಮೆ ಸಾಗಾಣಿಕೆಯಿಂದ ಬೆಳೆಗಾರರು ಹಿಂದೆ ಸರಿಯುತ್ತೀದ್ದಾರೆ. ವರ್ಷಕ್ಕೆ 6 ರಿಂದ 8 ಬೆಳೆಗಳನ್ನು ಸಾಕಾಣಿಕೆ ಮಾಡುತ್ತಿದ್ದವರು ಸುಡು ಬಿಸಿಲಿನ ಹಿನ್ನೆಲೆ ಕೇವಲ 4 ರಿಂದ 5 ಬೆಳೆಗಳನ್ನು ಮಾತ್ರ ಬೆಳೆಯುತ್ತಿದ್ದಾರೆ. ಇದರಿಂದ ಹೀಪ್ಪು ನೇರಳೆ ಸೊಪ್ಪನ್ನು ಕೇಳುವರು ಇಲ್ಲದಂತಾಗಿದೆ,

ರೇಷ್ಮೆಬೆಳೆ ರಕ್ಷಣಗೆ ತಜ್ಞರ ಸಲಹೆರೇಷ್ಮೆ ಹುಳು ಸಾಕಾಣಿಕೆ ಮನೆಯ ಸುತ್ತಲೂ ಗೋಡೆಗಳ ಮೇಲೆ ಬಿಸಿಲು ಬೀಳದಂತೆ ತೆಂಗಿನ ಗರಿಯಿಂದ ಚಪ್ಪರ ಹಾಕಬೇಕು. ಅದರಲ್ಲೂ ದಕ್ಷಿಣ ಮತ್ತು ಪಶ್ಚಿಮದ ಗೋಡೆಗಳಿಗೆ ಬಿಸಿಲು ಬೀಳದಂತೆ ಎಚ್ಚರವಹಿಸಿ ಚಪ್ಪರ ಹಾಕಬೇಕು ಹಾಗೂ ಕಿಟಕಿಗಳಿಗೆ ಗೋಣಿ ತಾಟುಗಳನ್ನು ಹಾಕಿ ಆಗಿಂದಾಗ್ಗೆ ನೀರಿನಿಂದ ನೆನೆಸಬೇಕು.

ಹುಳು ಸಾಕಾಣಿಕೆ ಮನೆಗಳ ಮೇಲೆ ಕೂಲ್ ಸಮ್ ಬಳಿಯಬೇಕು. ಇದರಿಂದ ಮೇಲ್ಛಾವಣಿ ಬಿಸಿಲಿಗೆ ಕಾಯುವುದಿಲ್ಲ. ಹುಳು ಸಾಕಾಣಿಕೆ ಮನೆಗೆ ಹಿಪ್ಪುನೇರಳೆ ಸೊಪ್ಪನ್ನು ತಂಪು ಹೊತ್ತಿನಲ್ಲಿ ತರಬೇಕು. ಕಟಾವು ಮಾಡಿದ ಸೊಪ್ಪನ್ನು ತೇವಾಂಶ ಆರದಂತೆ ಸೊಪ್ಪನ್ನು ಗೋಣಿ ತಾಟಿನಿಂದ ಮುಚ್ಚಿ ನೀರನ್ನು ಸಿಂಪರಣೆ ಮಾಡಬೇಕೆಂದು ರೇಷ್ಮೆ ತಜ್ಙರು ಬೆಳೆಗಾರರಿಗೆ ಸಲಹೆ ನೀಡಿದ್ದಾರೆ.