ಮಳೆಪೂರ್ವ ಸಿದ್ಧತೆಗೆ ಸುತ್ತೋಲೆ ಹೊರಡಿಸಿದ ಕಂದಾಯ ಇಲಾಖೆ

| Published : May 07 2024, 01:11 AM IST

ಸಾರಾಂಶ

ರಾಜ್ಯದಲ್ಲಿ ಪ್ರಸಕ್ತ ಮುಂಗಾರಿನಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಮಳೆ ಬೀಳುವ ಸಾಧ್ಯತೆ ಹಿನ್ನೆಲೆಯಲ್ಲಿ ಸಂಭವಿಸಬಹುದಾದ ದುಷ್ಪರಿಣಾಮಗಳನ್ನು ಸಮರ್ಥವಾಗಿ ಎದುರಿಸಲು ಹಾಗೂ ಹಾನಿಯನ್ನು ತಗ್ಗಿಸಲು ಜಿಲ್ಲಾಧಿಕಾರಿಗಳು ಪೂರ್ವಸಿದ್ಧತಾ ಕ್ರಮ ಕೈಗೊಳ್ಳಬೇಕು ಎಂದು ಕಂದಾಯ ಇಲಾಖೆ ಸುತ್ತೋಲೆ ಹೊರಡಿಸಿದೆ.

ಕನ್ನಡಪ್ರಭ ವಾರ್ತೆ, ಬೆಂಗಳೂರು

ಏಪ್ರಿಲ್‌ 15 ರಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಕರ್ನಾಟಕ ಸೇರಿದಂತೆ ದೇಶದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ (ಶೇ.104 ರಷ್ಟು) ಮಾನ್ಸೂನ್‌ ಮಳೆ ಬೀಳುವ ಸಾಧ್ಯತೆಯಿದೆ ಎಂದು ಹೇಳಿದೆ. ಹೀಗಾಗಿ ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಹಂತದ ಅಧಿಕಾರಿಗಳೊಂದಿಗೆ ಪೂರ್ವ ಸಿದ್ಧತೆ ಸಭೆಗಳನ್ನು ಏರ್ಪಡಿಸಿ ವಿವಿಧ ಜವಾಬ್ದಾರಿ ಹಂಚಿಕೆ ಮಾಡಬೇಕು ಎಂದು ಕಂದಾಯ ಇಲಾಖೆ ಸುತ್ತೋಲೆಯಲ್ಲಿ ತಿಳಿಸಿದೆ. ಜಿಲ್ಲೆಯಲ್ಲಿ ವಿಪತ್ತುಗಳಿಗೆ ತುತ್ತಾಗುವಂತಹ ಪ್ರದೇಶಗಳನ್ನು ಗುರುತಿಸಿ ಸ್ಥಳೀಯ ಸಮುದಾಯಗಳಿಗೆ ಅರಿವು ಮೂಡಿಸಬೇಕು.ಜಿಲ್ಲಾ ತುರ್ತು ನಿರ್ವಹಾ ಕೇಂದ್ರಗಳನ್ನು ಸುಸಜ್ಜಿತವಾಗಿ ದಿನದ 24 ಗಂಟೆಯೂ ಕಾರ್ಯನಿರ್ವಹಿಸುವಂತೆ ಕ್ರಮ ಕೈಗೊಳ್ಳಬೇಕು. ಮುಂಗಾರಿನಲ್ಲಿ ಆಗಾಗ್ಗೆ ಪ್ರವಾಹ, ಭೂಕುಸಿತದಂತಹ ವಿಪತ್ತುಗಳಿಗೆ ತುತ್ತಾಗುವ ತಾಲೂಕು ಕೇಂದ್ರದಲ್ಲಿ ತುರ್ತು ಕಾರ್ಯಾಚರಣೆ ಕೇಂದ್ರ ತೆರೆದು ಅಗತ್ಯ ವಾದರೆ 24/7 ಸಕ್ರಿಯಗೊಳಿಸಬೇಕು ಎಂದು ತಿಳಿಸಲಾಗಿದೆ. ವಿವಿಧ ಹಂತಗಳಲ್ಲಿ ವಿಪತ್ತು ನಿರ್ವಹಣೆಯಲ್ಲಿ ತೊಡಗಿರುವ ಅಧಿಕಾರಿಗಳ ಹೆಸರು, ದೂರವಾಣಿ ಸಂಖ್ಯೆಗಳನ್ನು ಒಳಗೊಂಡ ವಾಟ್ಸಾಪ್‌ ಗ್ರೂಪ್‌ ಮಾಡಬೇಕು. ಮುಂಗಾರು ಮಳೆ ಅವಧಿಯ ಮುಂಚಿತವಾಗಿ ಎಲ್ಲ ಇಲಾಖಾ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕರ್ತವ್ಯ, ಜವಾಬ್ದಾರಿ ಮನದಟ್ಟು ಮಾಡಬೇಕು. ಜಿಲ್ಲೆಯ ಎಲ್ಲ ಮೊಬೈಲ್ ಹಾಗೂ ಟೆಲಿಕಾಂ ಸೇವಾ ಪೂರೈಕೆದಾರರೊಂದಿಗೆ ಸಭೆಗಳನ್ನು ನಡೆಸಬೇಕು. ತುರ್ತು ಪರಿಸ್ಥಿತಿಯಲ್ಲಿ ಸಾಧ್ಯವಾದಷ್ಟು ತಕ್ಷಣವೇ ದೂರವಾಣಿ ಸಂಪರ್ಕವನ್ನು ಪುನರ್‌ಸ್ಥಾಪಿಸಲು ಪೂರೈಕೆದಾರರಿಗೆ ನಿರ್ದೇಶಿಸಬೇಕು.