ಸರಗಳಲೆ ಕೂಗು ರಾಮನಾಥ ದೇವರ ಸರಳ ಸುಗ್ಗಿಹಬ್ಬ

| Published : May 06 2024, 12:34 AM IST

ಸರಗಳಲೆ ಕೂಗು ರಾಮನಾಥ ದೇವರ ಸರಳ ಸುಗ್ಗಿಹಬ್ಬ
Share this Article
  • FB
  • TW
  • Linkdin
  • Email

ಸಾರಾಂಶ

ಬಾಳೆಹೊನ್ನೂರು ಅಡಿಗೆಬೈಲು ಗ್ರಾಮದ ಸರಗಳಲೆ ರಾಮಾಂಜನೇಯ, ಕೂಗು ರಾಮನಾಥ ಭೂತೇಶ್ವರ ಹಾಗೂ ಪರಿವಾರ ದೇವತೆಗಳ ಸುಗ್ಗಿಹಬ್ಬ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಿತು.

ಕನ್ನಡಪ್ರಭ ವಾರ್ತೆ ಬಾಳೆಹೊನ್ನೂರು

ಸಮೀಪದ ಅಡಿಗೆಬೈಲು ಗ್ರಾಮದ ಸರಗಳಲೆ ಕೂಗು ರಾಮನಾಥ ಭೂತೇಶ್ವರ, ರಾಮಾಂಜನೇಯ ಹಾಗೂ ಪರಿವಾರ ದೇವರುಗಳ ವಾರ್ಷಿಕ ಸುಗ್ಗಿಹಬ್ಬ, ಕೆಂಡಾರ್ಚನೆ ಶನಿವಾರ, ಭಾನುವಾರ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು.

ಶನಿವಾರ ದೇವಸ್ಥಾನ ಹಾಗೂ ಸುಗ್ಗಿ ಗದ್ದೆಯಲ್ಲಿ ಸುಗ್ಗಿ ಉತ್ಸವ ನಡೆಯಿತು. ಭಾನುವಾರ ಧಾರ್ಮಿಕ ಕಾರ್ಯದಲ್ಲಿ ಮಂಗಳ ವಾದ್ಯಗಳೊಂದಿಗೆ ಹೊಂತೆ ಹೊತ್ತಿಸಿ, ಆರತಿ ಎತ್ತಿಸಿ ಕೂಗು ರಾಮನಾಥ, ರಾಮಾಂಜನೇಯ, ಭೂತೇಶ್ವರ ಹಾಗೂ ಪರಿವಾರದೇವತೆಗಳ ಉತ್ಸವ ಮೂರ್ತಿಯನ್ನು ಹೊತ್ತುಕೆಂಡ ಹಾಯಲಾಯಿತು. ಬಳಿಕ ನೂರಾರು ಭಕ್ತರು ಕೆಂಡ ಹಾಯ್ದು ಭಕ್ತಿ ಸಮರ್ಪಿಸಿದರು.

ರಾಮಾಂಜನೇಯ, ಕೂಗು ರಾಮನಾಥ, ಭೂತೇಶ್ವರ, ದುರ್ಗಾಪರಮೇಶ್ವರಿ ಅಮ್ಮನವರು, ಜಟ್ಟಿಗೇಶ್ವರ ಹಾಗೂ ಹುಲಿಚೌಡೇಶ್ವರಿ ಅಮ್ಮನವರ ದೇವರ ಉತ್ಸವ ಮೂರ್ತಿಗಳು ದೇವಸ್ಥಾನದ ಸುತ್ತಲೂ ವಿವಿಧ ವಾದ್ಯಗೋಷ್ಠಿಯೊಂದಿಗೆ ಉತ್ಸವ ನಡೆಸಲಾಯಿತು. ಕೆಂಡಾರ್ಚನೆಯ ನಂತರ ದರ್ಶನ ಪಾತ್ರಿಯಿಂದ ಹೇಳಿಕೆ, ಕೇಳಿಕೆ, ಮಹಾಮಂಗಳಾರತಿ, ಹಣ್ಣುಕಾಯಿ ಹರಕೆ ಒಪ್ಪಿಸುವುದು ಮತ್ತು ಹರಕೆ ಇಟ್ಟುಕೊಳ್ಳುವ ಕಾರ್ಯಕ್ರಮ ನಡೆಯಿತು.

ಅರ್ಚಕ ಎಸ್.ಪಿ.ಶ್ರೀನಿವಾಸಮೂರ್ತಿ ಸಂಗಡಿಗರು ಧಾರ್ಮಿಕ ಕಾರ್ಯಗಳ ನೇತೃತ್ವ ವಹಿಸಿದ್ದರು. ಸುಗ್ಗಿಹಬ್ಬದಲ್ಲಿ ಸ್ಥಳೀಯ ಭಕ್ತರು ಭಾಗವಹಿಸಿದ್ದರು. ಭಕ್ತರಿಗೆ ಅನ್ನ ಸಂತರ್ಪಣೆ ನೆರವೇರಿಸಲಾಯಿತು.