ಮತದಾರರ ಗಮನ ಸೆಳೆಯುವ ವಿಶೇಷ ಮತಗಟ್ಟೆಗಳು

| Published : May 06 2024, 12:34 AM IST

ಸಾರಾಂಶ

ತಾಲೂಕಿನಲ್ಲಿ ಕೆಲವು ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸುವ ಮೂಲಕ ಲೋಕಸಭಾ ಚುನಾವಣೆಯಲ್ಲಿ ಮತದಾರರನ್ನು ಆಕರ್ಷಿಸಲು ಚುನಾವಣಾ ಆಯೋಗ ಹಾಗೂ ಸ್ವೀಪ್ ಸಮಿತಿಯು ಮುಂದಾಗಿದೆ.

ಮಾದರಿ ಮತಗಟ್ಟೆ, ಸಖಿ ಮತಗಟ್ಟೆ, ವಿಶೇಷ ಚೇತನರ ಮತಗಟ್ಟೆ, ಯುವ ಜನರ ಮತಗಟ್ಟೆ ಸ್ಥಾಪನೆಪರಶಿವಮೂರ್ತಿ ದೋಟಿಹಾಳ

ಕನ್ನಡಪ್ರಭವಾರ್ತೆ ಕುಷ್ಟಗಿ

ತಾಲೂಕಿನಲ್ಲಿ ಕೆಲವು ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸುವ ಮೂಲಕ ಲೋಕಸಭಾ ಚುನಾವಣೆಯಲ್ಲಿ ಮತದಾರರನ್ನು ಆಕರ್ಷಿಸಲು ಚುನಾವಣಾ ಆಯೋಗ ಹಾಗೂ ಸ್ವೀಪ್ ಸಮಿತಿಯು ಮುಂದಾಗಿದೆ.

ಮುಖ್ಯ ಚುನಾವಣಾಧಿಕಾರಿಗಳ ಆದೇಶದಂತೆ ಜಿಲ್ಲಾ ಸ್ವೀಪ್ ಸಮಿತಿ ಹಾಗೂ ತಾಲೂಕು ಸ್ವೀಪ್ ಸಮಿತಿ ವತಿಯಿಂದ ಕುಷ್ಟಗಿ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ 268 ಮತಗಟ್ಟೆಗಳಲ್ಲಿ ಎಂಟು ವಿಶೇಷವಾದ ಮತಗಟ್ಟೆ ಸ್ಥಾಪನೆ ಮಾಡಲಾಗಿದ್ದು, ಈ ಪೈಕಿ 1 ಮಾದರಿ ಮತಗಟ್ಟೆ, 5 ಸಖಿ ಮತಗಟ್ಟೆ, 1 ವಿಶೇಷಚೇತನ ಸ್ನೇಹಿ ಮತಗಟ್ಟೆ, 1 ಯುವ ಮತಗಟ್ಟೆ ಒಟ್ಟು 8 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದೆ.

ಮಾದರಿ ಮತಗಟ್ಟೆ, ಸಖಿ ಮತಗಟ್ಟೆ, ವಿಶೇಷ ಚೇತನರ ಮತಗಟ್ಟೆ, ಯುವ ಜನರ ಮತಗಟ್ಟೆ ಸ್ಥಾಪಿಸಲಾಗುತ್ತಿದ್ದು ಈ ಎಲ್ಲ ಮತಗಟ್ಟೆಗಳಲ್ಲಿ ವಿವಿಧ ಬಗೆಯ ಬಣ್ಣ ಬಣ್ಣದ ಚಿತ್ರಗಳನ್ನು ಬಿಡಿಸಲಾಗಿದೆ. ಮತದಾನದ ಜಾಗೃತಿಯ ಕುರಿತು ಹತ್ತು ಹಲವಾರು ಚಿತ್ರಗಳನ್ನು ಬರೆಯುವ ಮೂಲಕ ಮತಗಟ್ಟೆಗಳ ಅಂದ ಹೆಚ್ಚಿಸುವುದರೊಂದಿಗೆ ಮತದಾರರ ಗಮನ ಸೆಳೆಯುವಂತೆ ಮಾಡಲಾಗಿದೆ.

ವಿಶೇಷ ಮತಗಟ್ಟೆಗಳ ವಿವರ:

ತಾಲೂಕಿನ ಹಿರೇಮನ್ನಾಪುರ ಗ್ರಾಮ ಪಂಚಾಯಿತಿಯ ಹಂಚಿನಾಳ ಗ್ರಾಮದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾದರಿಯ ಮತಗಟ್ಟೆ, ಸಖಿ ಮತಗಟ್ಟೆಯಾಗಿ ತಾಲೂಕಿನ ದೋಟಿಹಾಳ ಗ್ರಾಮ ಪಂಚಾಯಿತಿಯ ದೋಟಿಹಾಳ ಗ್ರಾಮದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ, ಹನುಮನಾಳ ಗ್ರಾಮದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ, ಹನುಮಸಾಗರದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಮತಗಟ್ಟೆ, ತಾವರಗೇರಾ ಪಟ್ಟಣದ ಸರ್ಕಾರಿ ಮಾಧ್ಯಮಿಕ ಶಾಲಾ ಮತಗಟ್ಟೆ, ಕುಷ್ಟಗಿ ಪಟ್ಟಣದ ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ ಶಾಲಾ ಮತಗಟ್ಟೆ ಹಾಗೂ ಕುಷ್ಟಗಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೃಷ್ಣಗಿರಿ ಕಾಲನಿಯಲ್ಲಿ ವಿಶೇಷಚೇತನ ಸ್ನೇಹಿ ಮತಗಟ್ಟೆ, ತಾಲೂಕಿನ ಶಿರಗುಂಪಿ ಗ್ರಾಪಂಯ ಬಳೂಟಗಿಯ ಸರ್ಕಾರಿ ಉನ್ನತೀಕರಣದ ಪ್ರಾಥಮಿಕ ಶಾಲೆಯ ಹೊಸ ಕಟ್ಟಡದಲ್ಲಿ ಯುವಮತಗಟ್ಟೆಯನ್ನು ಸ್ಥಾಪನೆ ಮಾಡಲಾಗಿದೆ.

ಕುಷ್ಟಗಿ ವಿಧಾನಸಭಾ ಕ್ಷೇತ್ರದ ಮತಗಟ್ಟೆಗಳಲ್ಲಿ ಸಿಸಿ ಕ್ಯಾಮೆರಾ, ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಹಾಗೂ ವಿದ್ಯುತ್, ನೆರಳು ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಲಾಗುತ್ತಿದೆ. ತಾಲೂಕು ಸ್ವೀಪ್ ಸಮಿತಿ ಹಾಗೂ ಗ್ರಾಮ ಪಂಚಾಯಿತಿಗಳು ಮತದಾನದ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿವೆ.

ಸುಭದ್ರ ಪ್ರಜಾಪ್ರಭುತ್ವದಲ್ಲಿ ಮತದಾನ ಹೆಚ್ಚಳವಾಗುವಂತೆ ನೋಡಿಕೊಳ್ಳಲು ಈ ಸಲ ತಾಲೂಕಿನಲ್ಲಿ ಎಂಟು ವಿಶೇಷ ಮತಗಟ್ಟೆಗಳನ್ನು ಮಾಡಿದ್ದು, ಸಖಿ ಮತಗಟ್ಟೆಗಳು, ಯುವ, ವಿಶೇಷಚೇತನರ ಮತಗಟ್ಟೆಯಂತೆ ಮಾಡಲಾಗಿದೆ. ಎಲ್ಲ ಮೂಲಭೂತ ಸೌಕರ್ಯ ಒದಗಿಸಲಾಗುತ್ತಿದೆ ಎಂದು ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ ನಿಂಗಪ್ಪ ಮಸಳಿ ತಿಳಿಸಿದ್ದಾರೆ.