ಶ್ರೀನಿವಾಸಪ್ರಸಾದ್ ತತ್ವ, ಆದರ್ಶ ಪಾಲನೆ ಮಾಡಿ

| Published : May 07 2024, 01:01 AM IST

ಸಾರಾಂಶ

, ಬಿ. ಬಸವಲಿಂಗಪ್ಪನವರ ಬೂಸಾ ಪ್ರಕರಣದ ಹೋರಾಟದ ಮೂಲಕ ಸಾರ್ವಜನಿಕ ಜೀವನಕ್ಕೆ ಬಂದ ಶ್ರೀನಿವಾಸಪ್ರಸಾದ್ ಆವರು ಕೊನೆಯವರೆಗೂ ತಾವು ನಂಬಿದ್ದ ತತ್ವ, ಸಿದ್ಧಾಂತಗಳ ಪರ ಹೋರಾಟ ನಡೆಸಿದರು. ಪಕ್ಷಾಂತರಿಯಾಗಿದ್ದರೇ ಹೊರತು ತತ್ವಾಂತರಿಯಾಗಿರಲಿಲ್ಲ

- ಗಾಂಧಿನಗರ ಉರಿಲಿಂಗಿಪೆದ್ದಿ ಮಠದಲ್ಲಿ ಭಾವನಮನ ಕಾರ್ಯಕ್ರಮ

- ಶ್ರೀ ಜ್ಞಾನಪ್ರಕಾಶ್ ಸ್ವಾಮೀಜಿ, ಪ್ರೊ.ನಾಗವಾರ ಸೇರಿದಂತೆ ಹಲವಾರು ಮಂದಿ ಭಾಗಿ

ಕನ್ನಡಪ್ರಭ ವಾರ್ತೆ ಮೈಸೂರು

ವಿ. ಶ್ರೀನಿವಾಸಪ್ರಸಾದ್ ಅವರ ತತ್ವ, ಆದರ್ಶ ಪಾಲನೆಯ ಜೊತೆಗೆ ಅವರಂಥ ಗಟ್ಟಿ ನಾಯಕತ್ವವನ್ನು ರೂಪಿಸಬೇಕು ಎಂದು ಗಣ್ಯರು ಸಲಹೆ ಮಾಡಿದರು.

ಗಾಂಧಿ ನಗರದ ಶ್ರೀ ಉರಿಲಿಂಗಿಪೆದ್ದಿ ಮಠದಲ್ಲಿ ಸೋಮವಾರ ನಡೆದ ವಿ. ಶ್ರೀನಿವಾಸಪ್ರಸಾದ್ ಅವರ ಭಾವನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಎಲ್ಲರೂ ಐದು ದಶಕಗಳ ರಾಜಕಾರಣದಲ್ಲಿ ಅವರು ನೀಡಿದ ಕೊಡುಗೆಯನ್ನು ಮೆಲಕು ಹಾಕಿದರು.

ಸಾಹಿತಿ ಪ್ರೊ.ಕಾಳೇಗೌಡ ನಾಗವಾರ ಮಾತನಾಡಿ, ಬಿ. ಬಸವಲಿಂಗಪ್ಪನವರ ಬೂಸಾ ಪ್ರಕರಣದ ಹೋರಾಟದ ಮೂಲಕ ಸಾರ್ವಜನಿಕ ಜೀವನಕ್ಕೆ ಬಂದ ಶ್ರೀನಿವಾಸಪ್ರಸಾದ್ ಆವರು ಕೊನೆಯವರೆಗೂ ತಾವು ನಂಬಿದ್ದ ತತ್ವ, ಸಿದ್ಧಾಂತಗಳ ಪರ ಹೋರಾಟ ನಡೆಸಿದರು. ಪಕ್ಷಾಂತರಿಯಾಗಿದ್ದರೇ ಹೊರತು ತತ್ವಾಂತರಿಯಾಗಿರಲಿಲ್ಲ ಎಂದರು.

ಬುದ್ಧ, ಬಸವ, ಅಂಬೇಡ್ಕರ್ ಅವರ ಆಶಯಗಳಿಗೆ ಅನುಗುವಾಗಿ ರಾಜಕಾರಣ ಮಾಡಿದರು ಎಂದು ಅವರು ಸ್ಮರಿಸಿದರು,

ಹಿರಿಯ ಪತ್ರಕರ್ತ ಕೆ. ಶಿವಕುಮಾರ್ ಮಾತನಾಡಿ, ಶ್ರೀನಿವಾಸಪ್ರಸಾದ್ ಅವರ ನಿಧನದಿಂದ ದೊಡ್ಡ ಶೂನ್ಯ ಸೃಷ್ಟಿಯಾಗಿದೆ. ಇದನ್ನು ತುಂಬಬೇಕಾದ ತುರ್ತು ಅಗತ್ಯವಿದೆ. ಸಾಮಾನ್ಯವಾಗಿ ನಾಯಕತ್ವ ರೂಪುಗೊಳ್ಳಬೇಕಾದರೆ ಹಲವಾರು ವರ್ಷಗಳ ಬೇಕಾಗುತ್ದವೆ. ಆದ್ದರಿಂದ ಈ ಬಗ್ಗೆ ಪ್ರತಿಯೊಬ್ಬರೂ ಆಲೋಚಿಸಿ, ತೀರ್ಮಾನ ಮಾಡಬೇಕು ಎಂದರು.

ಶ್ರೀನಿವಾಸಪ್ರಸಾದ್ ಅವರು ದಲಿತರು, ದಮನಿತರು ಸೇರಿದಂತೆ ಎಲ್ಲಾ ಶೋಷಿತ ವರ್ಗಕ್ಕೂ ಸ್ಫೂರ್ತಿ. ಅವರು ನೆನಪು ಉಳಿಯಬೇಕಾದರೆ ಮೈಸೂರಿನ ಪ್ರಮುಖ ಸ್ಥಳದಲ್ಲಿ ಅವರ ಸ್ಮಾರಕ ನಿರ್ಮಾಣವಾಗಬೇಕು. ಇದಕ್ಕಾಗಿ ಸರ್ಕಾರದ ನೆರವು ಬಯಸದೇ ಅವರ ಅಭಿಮಾನಿಗಳು, ಸರ್ಕಾರಿ ನೌಕರರು ದೇಣಿಗೆ ಹಾಕಿ ಮಾಡಬೇಕು ಎಂದು ಸಲಹೆ ಮಾಡಿದರು.

ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ಬುದ್ಧ, ಬಸವ, ಅಂಬೇಡ್ಕರ್ ಅವರ ತತ್ವದಲ್ಲಿ ನಂಬಿಕೆ ಇದ್ದ ಶ್ರೀನಿವಾಸಪ್ರಸಾದ್ ಅವರು ಐವತ್ತು ವರ್ಷಗಳ ಸಕ್ರಿಯ ರಾಜಕಾರಣದಲ್ಲಿ ಗಟ್ಟಿ ನಾಯಕರಾಗಿ ರೂಪುಗೊಂಡಿದ್ದರು. ಸ್ವಾಭಿಮಾನಕ್ಕೆ ಧಕ್ಕೆ ಬಂದಿದೆ ಎಂದರೇ ಯಾರದನ್ನಾದರೂ ಎದುರು ಹಾಕಿಕೊಳ್ಳುತ್ತಿದ್ದರು. ಸಂವಿಧಾನ ತಿದ್ದುಪಡಿಯ ವಿಷಯದಲ್ಲಿ ತಾವು ಸಂಸದರಾಗಿದ್ದ ಬಿಜೆಪಿಯ ನಾಯಕತ್ವದ ವಿರುದ್ಧ ತಿರುಗಿ ಬಿದ್ದಿದ್ದರು. ಜಗಜೀವನರಾಂ, ರಾಮವಿಲಾಸ್ ಪಾಸ್ವಾನ್ ಅವರಂತೆ ಹೆಚ್ಚು ಕಾಲ ಮಂತ್ರಿಯಾಗದಿದ್ದರೂ ಆರು ಬಾರಿ ಸಂಸದರಾಗಿ ಏಳು ಪ್ರಧಾನಿಗಳ ಕಾರ್ಯವೈಖರಿಯನ್ನು ಹತ್ತಿರದಿಂದ ಕಂಡವರು. ಎರಡು ಬಾರಿ ಶಾಸಕರಾಗಿ, ರಾಜ್ಯದಲ್ಲಿಯೂ ಮಂತ್ರಿಯಾಗಿ ಮನಸ್ವಿನಿ ಅಂತಹ ಯೋಜನೆ ರೂಪಿಸಿದರು ಎಂದರು.

ಶ್ರೀ ಜ್ಞಾನಪ್ರಕಾಶ್ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಮೇಯರ್ ಪುರುಷೋತ್ತಮ, ಮೈಸೂರು ವಿವಿ ಡಾ.ಬಿ.ಆರ್. ಅಂಬೇಡ್ಕರ್ ಸಂಶೋಧನ ಮತ್ತು ವಿಸ್ತರಣ ಕೇಂದ್ರದ ನಿರ್ದೇಶಕ ಪ್ರೊ.ಜೆ. ಸೋಮಶೇಖರ್, ಅಹಿಂದ ಜವರಪ್ಪ,

ಎಂಡಿಎ ಮಾಜಿ ಸದಸ್ಯ ಸಿ.ಜಿ. ಶಿವಕುಮಾರ್ ಪಾಲಿಕೆ ಮಾಜಿ ಸದಸ್ಯ ಸಿದ್ದಪ್ಪ, ರಾಮಸ್ವಾಮಿ, ಚಾ. ನಂಜುಂಡಮೂರ್ತಿ, ಅಮ್ಮ ರಾಮಚಂದ್ರ, ಚೇತನ್ ಕಾಂತರಾಜ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಇದ್ದರು. ಲೇಖಕ ಮಲ್ಕುಂಡಿ ಮಹದೇವಸ್ವಾಮಿ ಕಾರ್ಯಕ್ರಮ ನಿರೂಪಿಸಿದರು.