ಆಸೀಸ್‌ನಲ್ಲಿ ಭಾರತೀಯ ವಿದ್ಯಾರ್ಥಿಗೆ ಇರಿದು ಹತ್ಯೆ

| Published : May 07 2024, 01:03 AM IST / Updated: May 07 2024, 03:56 AM IST

ಸಾರಾಂಶ

ಆಸೀಸ್‌ನಲ್ಲಿ ಭಾರತೀಯ ವಿದ್ಯಾರ್ಥಿಗೆ ಇರಿದು ಹತ್ಯೆ ಮಾಡಲಾಗಿದ್ದು, ಬಾಡಿಗೆ ಜಗಳ ನಿಲ್ಲಿಸಲು ಹೋದಾಗ ಘಟನೆ ನಡೆದಿದೆ. ಈತನನ್ನು ಭಾರತೀಯರೇ ಇರಿದು ಕೊಂದ ಆರೋಪ ಕೇಳಿಬಂದಿದ್ದು, ಸ್ಥಳೀಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮೆಲ್ಬರ್ನ್‌/ಚಂಡೀಗಢ: ಆಸ್ಟ್ರೇಲಿಯಾದ ಮೆಲ್ಬರ್ನ್‌ ನಗರದಲ್ಲಿ ಎಂ.ಟೆಕ್‌ ವ್ಯಾಸಂಗ ಮಾಡುತ್ತಿದ್ದ ಭಾರತೀಯ ವಿದ್ಯಾರ್ಥಿಯೊಬ್ಬನನ್ನು ಭಾರತೀಯ ಯುವಕರೇ ಇರಿದು ಕೊಂದ ದಾರುಣ ಘಟನೆ ನಡೆದಿದೆ.

ಮೃತ ವಿದ್ಯಾರ್ಥಿಯನ್ನು ನವ್ಜೀತ್‌ ಸಂಧು ಎಂದು ಗುರುತಿಸಲಾಗಿದ್ದು, ತನ್ನ ಗೆಳೆಯನ ಕೋರಿಕೆಯ ಮೇರೆಗೆ ಬಾಡಿಗೆ ಇದ್ದ ಮನೆಯಿಂದ ಸಾಮಾನು ತುಂಬಿಸಿಕೊಂಡು ಬರಲು ಆತನ ಮನೆಗೆ ತೆರಳಿದ್ದಾಗ ಈ ಘಟನೆ ನಡೆದಿದೆ. ಮನೆಯ ಒಳಗೆ ಗಲಾಟೆ ನಡೆಯುತ್ತಿದ್ದುದನ್ನು ಕೇಳಿ ಒಳಹೋದ ನವ್ಜೀತ್‌ ಸಮಾಧಾನ ಪಡಿಸಲು ಯತ್ನಿಸಿದಾಗ ಅಲ್ಲಿದ್ದ ಇಬ್ಬರು ಭಾರತೀಯ ಯುವಕರು ಈತನ ಎದೆಗೆ ಚಾಕುವಿನಿಂದ ಇರಿದ ಪರಿಣಾಮ ಸಾವನ್ನಪ್ಪಿದ್ದಾನೆ. ಈ ಗಲಾಟೆಯಲ್ಲಿ ಮೃತನ ಗೆಳೆಯನಿಗೂ ಗಂಭೀರ ಗಾಯಗಳಾಗಿವೆ.

ಈ ಕುರಿತು ಸ್ಥಳೀಯ ಪೊಲೀಸರು ತನಿಖೆ ನಡೆಸುತ್ತಿದ್ದು, ಭಾರತೀಯ ಮೂಲದ ಅಭಿಜೀತ್‌ ಅಭಿಜೀತ್‌ ಮತ್ತು ರಾಬಿನ್‌ ಗಾರ್ಟನ್‌ ಎಂಬ ಸೋದರರ ಪತ್ತೆಗೆ ಬಲೆ ಬೀಸಿದ್ದಾರೆ. ಈ ನಡುವೆ ಮೃತರ ಕುಟುಂಬ ಹರ್ಯಾಣದ ಕರ್ನಾಲ್‌ನಲ್ಲಿದ್ದು, ಕಳೇಬರವನ್ನು ಶೀಘ್ರವಾಗಿ ಭಾರತಕ್ಕೆ ಹಸ್ತಾಂತರಿಸಲು ಭಾರತ ಸರ್ಕಾರವನ್ನು ವಿನಂತಿಸಿದೆ.