ಹಣ ಡಬಲ್‌ ಮಾಡ್ತೀನಿ ಎಂದು ಮಹಿಳೆತನ್ನು ನಂಬಿಸಿ ₹ 70 ಲಕ್ಷ ದೋಚಿ ಪರಾರಿ

| Published : Feb 23 2024, 01:48 AM IST

ಸಾರಾಂಶ

ಹಣ ದ್ವಿಗುಣಗೊಳಿಸುವುದಾಗಿ ನಂಬಿಸಿ ಮಹಿಳೆಯಿಂದ 70 ಲಕ್ಷ ರು. ದೋಚಿದ್ದ ಆರೋಪಿಯನ್ನು ಬಂಧಿಸಿ 43,88,500 ರು ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರು ಮತ್ತು 7 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಎಸ್ಪಿ ಎನ್ ಯತೀಶ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯ ಹಣ ದ್ವಿಗುಣಗೊಳಿಸುವುದಾಗಿ ನಂಬಿಸಿ ಮಹಿಳೆಯಿಂದ 70 ಲಕ್ಷ ರು. ದೋಚಿದ್ದ ಆರೋಪಿಯನ್ನು ಬಂಧಿಸಿ 43,88,500 ರು ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರು ಮತ್ತು 7 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಎಸ್ಪಿ ಎನ್ ಯತೀಶ್ ತಿಳಿಸಿದರು.

ಜಿಲ್ಲಾ ಎಸ್ಪಿ ಕಚೇರಿ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಂಧ್ರಪ್ರದೇಶದ ಕುಪ್ಪಂ ನಿವಾಸಿ ಶಿವ. ಬಿ. ಅಲಿಯಾಸ್ ಶಿವಬುಡ್ಡಪ್ಪ ಅಲಿಯಾಸ್ ಸೂರ್‍ಯ ಆಲಿಯಾಸ್ ಅಜಯ್ ಅಲಿಯಾಸ್ ಗೋವರ್ಧನ್ ಅಲಿಯಾಸ್ ಸಾಂಭಶಿವ (42) ಬಂಧಿತ ಆರೋಪಿಯಾಗಿದ್ದಾನೆ ಎಂದರು.

ಆಂಧ್ರದ ಕುಪ್ಪಂ ನಿವಾಸಿ ಶಿವ ಚಾಮರಾಜನಗರ ಸಿಂಗನಲ್ಲೂರು ಗ್ರಾಮದ ಮಹಿಳೆಯನ್ನು ಮದುವೆಯಾಗಿ ವಾಸವಾಗಿದ್ದನು. ಈತ ಬೆಳಕವಾಡಿ ಪೊಲೀಸ್ ಠಾಣಾ ವ್ಯಾಪ್ತಿ ಶಿಂಷಾಪುರ ಗ್ರಾಮದ ಎಸ್. ಮೇರಿ ಎಂಬಾಕೆಯನ್ನು ನಂಬಿಸಿ ವಂಚಿಸಿದ್ದನು ಎಂದು ತಿಳಿಸಿದರು. ಶಿವ ಅಲಿಯಾಸ್ ಸಾಂಭಶಿವ ಮಳವಳ್ಳಿ ತಾಲೂಕು ಹೆಬ್ಬಣಿ ಗ್ರಾಮದ ಶ್ರೀ ನಿರ್ವಾಣೇಶ್ವರ ವಿರಕ್ತ ಮಠದ ಶ್ರೀ ಶಂಭುಲಿಂಗ ಸ್ವಾಮೀಜಿಯನ್ನು ಪರಿಚಯ ಮಾಡಿಕೊಂಡ ನಂತರ ಶಿಂಷಾಪುರ ಗ್ರಾಮದ ಶ್ಯಾಲೋಮ್ ಎಜುಕೇಷನಲ್ ಅಂಡ್ ಚಾರಿಟೇಬಲ್ ಟ್ರಸ್ಟ್‌ಗೆ ಸೇರಿದ ಎಸ್. ಮೇರಿ ಅವರನ್ನು ಭೇಟಿ ಮಾಡಿ ಪರಿಚಯಿಸಿಕೊಂಡಿದ್ದನು. ಬಳಿಕ ಮಹಿಳೆಗೆ ನೀವು 1 ಕೋಟಿ ರು. ನೀಡಿದರೆ ನಾನು 25 ಕೋಟಿಯಾಗಿ ದುಪ್ಪಟ್ಟು ಹಣ ಮಾಡಿಕೊಡುವುದಾಗಿ ನಂಬಿಸಿದ್ದನು. ಈ ವೇಳೆ ನೋಟಿನ ಅಳತೆಗೆ ಬಿಳಿ ಪೇಪರ್‌ಗಳನ್ನು ಕಟ್ ಮಾಡಿ ಸಿದ್ಧಪಡಿಸಿಕೊಂಡು ಒಂದು ಚೀಲದಲ್ಲಿ ತಂದು ಜಾದೂ ಪ್ರದರ್ಶನದ ಮಾದರಿ ಹಣ ತೋರಿಸಿ ನಂಬಿಸಿದ್ದನು ಮಾಹಿತಿ ನೀಡಿದರು.

ಈತನನ್ನು ನಂಬಿದ ಎಸ್. ಮೇರಿ ಅವರು ತನ್ನ ಸ್ನೇಹಿತರು, ಬಂಧುಗಳಿಂದ ಹಣವನ್ನು ಸಾಲ ಪಡೆದು ಸುಮಾರು 70 ಲಕ್ಷ ರು.ಸಂಗ್ರಹಿಸಿದ್ದರು. ಬಳಿಕ ಕಳೆದ ಜ.1 ರಂದು ಹಣ ಕೊಡುವುದಾಗಿ ಹೇಳಿ ಮನೆಗೆ ಕರೆಸಿಕೊಂಡಿದ್ದರು. 70 ಲಕ್ಷ ಹಣವನ್ನು ಆತನಿಗೆ ತೋರಿಸಿದರು. ಮನೆಗೆ ಬರುವ ಮುನ್ನ ಆರೋಪಿ ಸಿಹಿ ಪೊಂಗಲ್ ಮತ್ತು ಜ್ಯೂಸ್‌ನ್ನು ತಂದಿದ್ದ. ಜ್ಯೂಸ್‌ನಲ್ಲಿ ಪ್ರಜ್ಞೆ ತಪ್ಪಿಸುವ ಪೌಡರ್ ಹಾಕಿ ಮೇರಿ ಅವರಿಗೆ ಕುಡಿಯಲು ಕೊಟ್ಟಿದ್ದನು. ಆಕೆ ಕುಡಿದ ಸ್ವಲ್ಪ ಹೊತ್ತಿನಲ್ಲೇ ಮೂರ್ಚೆ ಹೋಗಿದ್ದರು. ಆರೋಪಿ ಶಿವ ಅಲಿಯಾಸ್ ಸಾಂಭಶಿವ ತಕ್ಷಣ 70 ಲಕ್ಷ ರು. ಹಣವಿದ್ದ ಬ್ಯಾಗನ್ನು ತೆಗೆದುಕೊಂಡು ಪರಾರಿಯಾಗಿದ್ದನು ಎಂದು ತಿಳಿಸಿದರು.

ತಾನು ಮೋಸ ಹೋಗಿರುವುದಾಗಿ ಅರಿತ ಎಸ್. ಮೇರಿ ಜ.26 ರಂದು ಬೆಳಕವಾಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆರೋಪಿ ಪತ್ತೆಗೆ ಮಳವಳ್ಳಿ ಡಿವೈಎಸ್ಪಿ ಹಾಗೂ ಹಲಗೂರು ಸಿಪಿಐ ನೇತೃತ್ವದಲ್ಲಿ ತಂಡಗಳನ್ನು ರಚಿಸಲಾಗಿತ್ತು. ಈ ತಂಡ ಕಾರ್‍ಯಾಚರಣೆ ನಡೆಸಿ ಮೈಸೂರಿನಲ್ಲಿ ಪತ್ತೆ ಹಚ್ಚಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯಾಂಶ ಬೆಳಕಿಗೆ ಬಂದಿತು ಎಂದು ಹೇಳಿದರು.ಆರೋಪಿಯಿಂದ 43,88,500 ರು ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರು ಮತ್ತು 7 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಉಳಿದ ಹಣವನ್ನು ವಶಪಡಿಸಿಕೊಳ್ಳಲು ಮುಂದಾಗಿರುವುದಾಗಿ ತಿಳಿಸಿದರು. ಆರೋಪಿ ದೋಚಿದ್ದ ಹಣದಿಂದ ಮೈಸೂರಿನಲ್ಲಿ ಮನೆಯನ್ನು ಬೋಗ್ಯಕ್ಕೆ ಪಡೆದಿದ್ದಾನೆ. ಜೊತೆಗೆ ಮನೆಗೆ ಅಗತ್ಯವಾದ ಪೀಠೋಪಕರಣಗಳು, ಇತರೆ ಸಾಮಗ್ರಿಗಳನ್ನೂ ಖರೀದಿಸಿದ್ದಾನೆ. ಈ ಪ್ರಕರಣ ಸೇರಿದಂತೆ ಈತನ ಮೇಲೆ ವಿವಿಧೆಗಳಲ್ಲಿ 11 ಪ್ರಕರಣ ಇರುವುದಾಗಿ ಹೇಳಿದರು. ಆರೋಪಿ ಪತ್ತೆಗೆ ಶ್ರಮಿಸಿದ ಸಿಪಿಐ ಬಿ.ಎಸ್. ಶ್ರೀಧರ್, ಬೆಳಕವಾಡಿ ಪೊಲೀಸ್ ಠಾಣೆಯ ಪಿಎಸ್‌ಐ ಅಶೋಕ್ ವಿ.ಸಿ., ಅಪರಾಧ ಪತ್ತೆ ದಳದ ಸಿಬ್ಬಂದಿಗಳಾದ ನಾಗೇಂದ್ರ, ರಿಯಾಜ್‌ಪಾಷ, ನಿಂಗರಾಜು, ಸಿದ್ದರಾಜು, ಮಹೇಶ, ಅವಿನಾಶ್, ಚೇತನ್, ರವಿಕಿರಣ್, ಲೋಕೇಶ್ ಅವರನ್ನು ಜಿಲ್ಲಾ ಎಸ್ಪಿ ಯತೀಶ್ ಅಭಿನಂದಿಸಿದರು. ಸುದ್ದಿಗೋಷ್ಠಿಯಲ್ಲಿ ಅಪರ ಪೊಲೀಸ್ ಅಧೀಕ್ಷಕ ತಿಮ್ಮಯ್ಯ, ಮಳವಳ್ಳಿ ಡಿವೈಎಸ್ಪಿ ಕೃಷ್ಣಪ್ಪ ಇದ್ದರು.