ಬೆಂಗಳೂರಿನಲ್ಲಿ ಅಪರಾಧ ಕೃತ್ಯ ತಡೆಗಾಗಿ ಪೊಲೀಸರು ಹಗಲು ಗಸ್ತು : ಸ್ಮಾಟ್‌ ಇ-ಬೀಟ್‌ ವ್ಯವಸ್ಥೆಯಡಿ ರಾತ್ರಿ ಗಸ್ತು

| Published : Aug 02 2024, 01:32 AM IST / Updated: Aug 02 2024, 06:22 AM IST

ಸಾರಾಂಶ

ಬೆಂಗಳೂರಿನಲ್ಲಿ ಅಪರಾಧ ಕೃತ್ಯ ತಡೆಗಾಗಿ ಪೊಲೀಸರು ಹಗಲು ಗಸ್ತು ತಿರುಗಲು ಯೋಜಿಸಿದ್ದಾರೆ.

 ಬೆಂಗಳೂರು : ನಗರದಲ್ಲಿ ಅಪರಾಧ ಕೃತ್ಯಗಳನ್ನು ಮತ್ತಷ್ಟು ಪರಿಣಾಮಕಾರಿ ನಿಯಂತ್ರಣದ ನಿಟ್ಟಿನಲ್ಲಿ ಇನ್ನು ಮುಂದೆ ಪೊಲೀಸರು ನಗರದಲ್ಲಿ ‘ಹಗಲು ಗಸ್ತು’(ಡೇ ಬೀಟ್‌) ಆರಂಭಿಸಲಿದ್ದಾರೆ.

ಇತ್ತೀಚೆಗೆ ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ ನೇತೃತ್ವದಲ್ಲಿ ನಡೆದ ಅಪರಾಧ ಪ್ರಕರಣಗಳ ಸಾಪ್ತಾಹಿಕ ಪರಿಶೀಲನಾ ಸಭೆಯಲ್ಲಿ ಹಗಲು ಗಸ್ತಿನ ಬಗ್ಗೆ ಚರ್ಚಿಸಿದ್ದಾರೆ. ಪ್ರಸ್ತುತ ನಗರದಲ್ಲಿ ಸ್ಮಾಟ್‌ ಇ-ಬೀಟ್‌ ವ್ಯವಸ್ಥೆಯಡಿ ರಾತ್ರಿ ಗಸ್ತು (ನೈಟ್‌ ಬೀಟ್‌) ಚಾಲ್ತಿಯಲ್ಲಿದೆ. ಮುಂದುವರೆದು, ನಗರದ ಪೊಲೀಸ್‌ ವ್ಯಾಪ್ತಿಯ ಎಂಟು ಕಾನೂನು ಮತ್ತು ಸುವ್ಯವಸ್ಥೆ ವಿಭಾಗಗಳ ವ್ಯಾಪ್ತಿಯಲ್ಲಿ ಅಪರಾಧ ಕೃತ್ಯಗಳ ಮತ್ತಷ್ಟು ಪರಿಣಾಮಕಾರಿ ನಿಯಂತ್ರಿಸಲು ಇನ್ನು ಮುಂದೆ ಹಗಲು ಗಸ್ತು ಜಾರಿಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ನಗರದ ಎಂಟು ಕಾನೂನು ಮತ್ತು ಸುವ್ಯವಸ್ಥೆ ವಿಭಾಗಗಳ ಡಿಸಿಪಿಗಳು, ಎಸಿಪಿಗಳು ಹಾಗೂ ಇನ್‌ಸ್ಪೆಕ್ಟರ್‌ಗಳು ಚರ್ಚಿಸಿ ಎಲ್ಲ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ಬರುವ ಡೇ ಬೀಟ್‌ ಪಾಯಿಂಟ್ ಸ್ಥಳಗಳನ್ನು ಗುರುತಿಸಿ ಕಚೇರಿ ಮತ್ತು ಇ-ಮೇಲ್‌ ಮೂಲಕ ಮಾಹಿತಿ ನೀಡುವಂತೆ ನಗರದ ಹೆಚ್ಚುವರಿ ಪೊಲೀಸ್‌ ಆಯುಕ್ತ(ಅಪರಾಧ) ಚಂದ್ರಗುಪ್ತ ಸೂಚಿಸಿದ್ದಾರೆ.