ಸಾರಾಂಶ
ಟ್ರಸ್ಟ್‌ಗೆ ದೇಣಿಗೆ ನೀಡುವುದಾಗಿ ನಂಬಿಸಿ 1 ಕೋಟಿ 10 ಲಕ್ಷ ಹಣದೊಂದಿಗೆ ಪರಾರಿಯಾಗಿದ್ದ ಆರೋಪಿಯನ್ನು ಬೆಳಕವಾಡಿ ಪೊಲೀಸರು ಬಂಧಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಮಳವಳ್ಳಿ
ಟ್ರಸ್ಟ್‌ಗೆ ದೇಣಿಗೆ ನೀಡುವುದಾಗಿ ನಂಬಿಸಿ 1 ಕೋಟಿ 10 ಲಕ್ಷ ಹಣದೊಂದಿಗೆ ಪರಾರಿಯಾಗಿದ್ದ ಆರೋಪಿಯನ್ನು ಬೆಳಕವಾಡಿ ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶದ ವೆಲ್ಲೂರು ಜಿಲ್ಲೆ ಕುಪ್ಪಂ ಗ್ರಾಮದ ಸೂರ್ಯ ಬಂಧಿತ ಆರೋಪಿ. ಆತನಿಂದ 43,88,500 ಹಣ ಹಾಗೂ ಕೃತ್ಯಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ತಾಲೂಕಿನ ಹೆಬ್ಬಣಿ ಗ್ರಾಮದ ವಿರಕ್ತ ಮಠದ ಪೀಠಾಧ್ಯಕ್ಷ ಶಂಭುಲಿಂಗ ಸ್ವಾಮೀಜಿ ಮತ್ತೊಬ್ಬ ಆರೋಪಿಯಾಗಿದ್ದು ತಲೆಮರೆಸಿಕೊಂಡಿದ್ದಾರೆ. ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಕಳೆದ ಮೂರು ತಿಂಗಳ ಹಿಂದೆ ಶಂಭುಲಿಂಗ ಸ್ವಾಮೀಜಿಯೇ ಸೂರ್ಯನೊಬ್ಬ ದೊಡ್ಡ ಉದ್ಯಮಿ ಅವರು ನಿಮ್ಮ ಟ್ರಸ್ಟ್ ಗೆ 25 ಕೋಟಿ ರು. ದೇಣಿಗೆ ನೀಡುವರು. ಅವರಿಗೆ ತೆರಿಗೆ ಕಟ್ಟಲು 1 ಕೋಟಿ 10 ಲಕ್ಷ ರು. ಹಣವನ್ನು ನೀಡಬೇಕೆಂದು ಶ್ಯಾಲೋಮ್ ಎಜುಕೇಷನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಮೇರಿನ್ ಪಿಂಟೋ ಹಾಗೂ ಖಜಾಂಚಿ ಎಸ್.ಮೇರಿ ಇಬ್ಬರಿಗೂ ಪರಿಚಯಿಸಿದ ಎನ್ನಲಾಗಿದೆ.
ಅದರಂತೆ 1 ಕೋಟಿ 10 ಲಕ್ಷ ರು. ಹಣವನ್ನು ಹೊಂದಿಸಿಕೊಂಡು ಶಿಂಷಾಪುರದ ಮನೆಯಲ್ಲಿದ್ದಾಗ ಸೂರ್ಯ 25 ಕೋಟಿ ರು. ನಕಲಿ ಹಣವನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಕೊಂಡು ಮನೆಗೆ ಬಂದು ತಾನು ತಂದಿದ್ದ ಜೂಸ್ ಅನ್ನು ಟ್ರಸ್ಟ್ ನ ಇಬ್ಬರಿಗೂ ಕುಡಿಸಿ ಪ್ರಜ್ಞೆ ತಪ್ಪಿಸಿ ಅವರ ಬಳಿ ಇದ್ದ ಹಣವನ್ನು ವಂಚಿಸಿ ಕದ್ದು ಪರಾರಿಯಾಗಿದ್ದ ಎಂದು ಠಾಣೆಯಲ್ಲಿ ದೂರು ನೀಡಲಾಗಿತ್ತು.
ಆ ಹಿನ್ನೆಲೆಯಲ್ಲಿ ಕಾರ್ಯಚರಣೆ ಕೈಕೊಂಡು ಪಿಎಸ್ಐ ವಿ.ಸಿ.ಆಶೋಕ್ ಹಾಗೂ ಸಿಬ್ಬಂದಿ ಮೈಸೂರಿನಲ್ಲಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.