ಸಾರಾಂಶ
ಬೆಂಗಳೂರು : ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ನೆಪದಲ್ಲಿ ಸೈಬರ್ ವಂಚಕರು ಉದ್ಯಮಿಯಿಂದ ವಿವಿಧ ಹಂತಗಳಲ್ಲಿ ₹1.29 ಕೋಟಿ ಪಡೆದು ವಂಚಿಸಿದ ಆರೋಪದಡಿ ಕೇಂದ್ರ ವಿಭಾಗದ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅವೆನ್ಯೂ ರಸ್ತೆ ನಿವಾಸಿ ಎಚ್.ಶಾಲು ಇಸ್ರಾನಿ ವಂಚನೆಗೆ ಒಳಗಾದ ಉದ್ಯಮಿ. ಇವರು ನೀಡಿದ ದೂರಿನ ಮೇರೆಗೆ ಸೈಬರ್ ಅಪರಾಧ ಠಾಣೆ ಪೊಲೀಸರು ಅಪರಿಚಿತರ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ ವಂಚನೆ ಆರೋಪದಡಿ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏನಿದು ಪ್ರಕರಣ?: ದೂರುದಾರ ಶಾಲು ಇಸ್ರಾನಿ ಉದ್ಯಮಿಯಾಗಿದ್ದು, ಕಳೆದ ಎರಡು ವರ್ಷಗಳಿಂದ ಟ್ರೇಡಿಂಗ್ ವ್ಯವಹಾರ ಮಾಡಿಕೊಂಡಿದ್ದಾರೆ. ಇತ್ತೀಚೆಗೆ ಶಾಲು ಅವರ ವಾಟ್ಸಾಪ್ ಮುಖಾಂತರ ಪರಿಚಿತನಾದ ಅಪರಿಚಿತ ವ್ಯಕ್ತಿಯು ಟ್ರೇಡಿಂಗ್‌ನಲ್ಲಿ ಹಣ ಹೂಡಿಕೆ ಮಾಡುವ ಬದಲು ಕ್ರಿಪ್ಟೋ ಕರೆನ್ಸಿಯಲ್ಲಿ ಮಾಡುವಂತೆ ಹೇಳಿದ್ದಾನೆ. 15 ತಿಂಗಳ ಬಳಿಕ ಹೂಡಿಕೆ ಹಣಕ್ಕೆ ಶೇ.20ರಿಂದ 30ರಷ್ಟು ಲಾಭಾಂಶ ನೀಡುವುದಾಗಿ ಆಮಿಷವೊಡ್ಡಿದ್ದಾನೆ.
ವಿವಿಧ ಹಂತಗಳಲ್ಲಿ ಹಣ ವರ್ಗಾವಣೆ:
ಈತನ ಮಾತು ನಂಬಿದ ಉದ್ಯಮಿ ಶಾಲು, ಅಪರಿಚಿತ ವ್ಯಕ್ತಿ ನೀಡಿದ ಬ್ಯಾಂಕ್ ಖಾತೆಗಳಿಗೆ ವಿವಿಧ ಹಂತಗಳಲ್ಲಿ ₹1.29 ಕೋಟಿ ವರ್ಗಾಯಿಸಿದ್ದಾರೆ. ಬಳಿಕ ಅಪರಿಚಿತ ವ್ಯಕ್ತಿಯು ಸಂಪರ್ಕ ಕಡಿದುಕೊಂಡಿದ್ದಾನೆ. ಬಳಿಕ ಶಾಲುಗೆ ತಾನು ಸೈಬರ್ ವಂಚನೆಗೆ ಒಳಗಾಗಿರುವುದು ಅರಿವಿಗೆ ಬಂದಿದೆ.
ಈ ವಂಚನೆ ಸಂಬಂಧ ಉದ್ಯಮಿ ಶಾಲು ಸೈಬರ್ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಅಧಿಕ ಲಾಭದ ಆಮಿಷವೊಡ್ಡಿ ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ನೆಪದಲ್ಲಿ ಹಣ ಪಡೆದು ಬಳಿಕ ವಂಚಿಸಿರುವ ಅಪರಿಚಿತನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ದುಷ್ಕರ್ಮಿಯ ಪತ್ತೆಗೆ ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.