ಸಾರಾಂಶ
ಬೆಂಗಳೂರು : ಹೊರರಾಜ್ಯಗಳ ಡ್ರಗ್ಸ್ ಪೆಡ್ಲರ್‌ಗಳಿಂದ ಕಡಿಮೆ ಬೆಲೆಗೆ ಮಾದಕವಸ್ತು ಖರೀದಿಸಿ ನಗರದಲ್ಲಿ ಮಾರಾಟ ಮಾಡುತ್ತಿದ್ದ ವಿದೇಶಿ ಪ್ರಜೆ ಹಾಗೂ ಈತನ ಪ್ರೇಯಸಿಯನ್ನು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಮಾದಕದ್ರವ್ಯ ನಿಗ್ರಹ ದಳದ ಪೊಲೀಸರು ಬಂಧಿಸಿದ್ದಾರೆ.
ನೈಜಿರಿಯಾ ಮೂಲದ ಮೈಕಲ್ ಡಿಕೆ ಓಕೋಲಿ(41) ಮತ್ತು ಈತನ ಪ್ರೇಯಸಿ ಸಹನಾ(25) ಬಂಧಿತರು. ಆರೋಪಿಗಳಿಂದ ₹1.50 ಕೋಟಿ ಮೌಲ್ಯದ 1 ಕೆ.ಜಿ. 50 ಗ್ರಾಂ ತೂಕದ ಎಂಡಿಎಂಎ ಕ್ರಿಸ್ಟಲ್, 3 ಮೊಬೈಲ್ ಹಾಗೂ ತೂಕದ ಯಂತ್ರ ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಸಿಸಿಬಿ ಪೊಲೀಸರು ವಿದೇಶಿ ಡ್ರಗ್ಸ್ ಪೆಡ್ಲರೊಬ್ಬನನ್ನು ಬಂಧಿಸಿದ್ದರು. ವಿಚಾರಣೆ ವೇಳೆ ಈತ ನೀಡಿದ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಈ ಇಬ್ಬರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿ ಮೈಕಲ್ ಆರು ವರ್ಷದ ಹಿಂದೆ ವ್ಯವಹಾರಿಕಾ ವೀಸಾ ಪಡೆದು ನೈಜಿರಿಯಾದಿಂದ ಭಾರತಕ್ಕೆ ಬಂದಿದ್ದಾನೆ. ಬೆಂಗಳೂರಿನ ಗ್ರಾಮಾಂತರ ವ್ಯಾಪ್ತಿಯ ಯರಪ್ಪನಹಳ್ಳಿಯ ಬಾಲಾಜಿ ಲೇಔಟ್‌ನ ಬಾಡಿಗೆ ಮನೆಯಲ್ಲಿ ನೆಲೆಸಿದ್ದ. ವೀಸಾ ಅವಧಿ ಮುಗಿದಿದ್ದರೂ ಅಕ್ರಮವಾಗಿ ನೆಲೆಸಿದ್ದ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಮುಂಬೈ, ದೆಹಲಿಯಿಂದ ಡ್ರಗ್ಸ್ ಖರೀದಿ:
ಆರೋಪಿಯು ಮುಂಬೈ ಮತ್ತು ದೆಹಲಿಯಲ್ಲಿ ನೆಲೆಸಿರುವ ವಿದೇಶಿ ಡ್ರಗ್ಸ್ ಪೆಡ್ಲರ್‌ಗಳಿಂದ ಕಡಿಮೆ ಬೆಲೆಗೆ ಮಾದಕವಸ್ತುಗಳನ್ನು ಖರೀದಿಸಿ ನಗರದ ಟೆಕ್ಕಿಗಳು, ವಿದ್ಯಾರ್ಥಿಗಳು ಹಾಗೂ ವ್ಯಸನಿಗಳಿಗೆ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.
ಲಿವಿಂಗ್ ಟುಗೇದರ್
ಆರೋಪಿ ಮೈಕಲ್ ಈ ಹಿಂದೆ ಕೆ.ಆರ್.ಪುರದ ಬಾಡಿಗೆ ಮನೆಯೊಂದರಲ್ಲಿ ನೆಲೆಸಿದ್ದ ವೇಳೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸಹನಾ ಪಕ್ಕದ ಮನೆಯಲ್ಲಿ ನೆಲೆಸಿದ್ದಳು. ಈ ವೇಳೆ ಇಬ್ಬರಿಗೂ ಪರಿಚಯವಾಗಿ ಪರಸ್ಪರ ಪ್ರೀತಿಸುತ್ತಿದ್ದರು. ಕಳೆದ ಒಂದೂವರೆ ವರ್ಷದಿಂದ ಇಬ್ಬರೂ ಯರಪ್ಪನಹಳ್ಳಿಯ ಬಾಲಾಜಿ ಲೇಔಟ್‌ನ ಬಾಡಿಗೆ ಮನೆಯಲ್ಲಿ ಸಹಜೀವನ ನಡೆಸುತ್ತಿದ್ದರು. ಪ್ರಿಯಕರ ಮೈಕಲ್ ಡ್ರಗ್ಸ್ ಮಾರಾಟ ದಂಧೆಗೆ ಸಹನಾ ಕೈ ಜೋಡಿಸಿದ್ದಳು. ತನಗೆ ಪರಿಚಿತವಿರುವ ಸಾಫ್ಟ್‌ವೇರ್ ಎಂಜಿನಿಯರ್‌ಗಳು, ವಿದ್ಯಾರ್ಥಿಗಳು ಹಾಗೂ ಗಿರಾಕಿಗಳಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದಳು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.