ಫೇಸ್‌ಬುಕ್‌ನ ಜಾಹೀರಾತಿಂದ ₹10.30 ಲಕ್ಷ ಕಳಕೊಂಡ : ಹುಷಾರ್!

| Published : May 10 2024, 01:31 AM IST / Updated: May 10 2024, 04:56 AM IST

ಫೇಸ್‌ಬುಕ್‌ನ ಜಾಹೀರಾತಿಂದ ₹10.30 ಲಕ್ಷ ಕಳಕೊಂಡ : ಹುಷಾರ್!
Share this Article
  • FB
  • TW
  • Linkdin
  • Email

ಸಾರಾಂಶ

ಫೇಸ್‌ಬುಕ್‌ನಲ್ಲಿ ಶೇರ್‌ ಟ್ರೇಡಿಂಗ್‌ ಜಾಹೀರಾತು ನೋಡಿ ಅಧಿಕ ಲಾಭದಾಸೆಯಿಂದ ₹10.30 ಲಕ್ಷ ಹೂಡಿಕೆ ಮಾಡಿ ವಂಚನೆಗೆ ಒಳಗಾದ ವ್ಯಕ್ತಿಯೊಬ್ಬರು ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

 ಬೆಂಗಳೂರು :  ಫೇಸ್‌ಬುಕ್‌ನಲ್ಲಿ ಶೇರ್‌ ಟ್ರೇಡಿಂಗ್‌ ಜಾಹೀರಾತು ನೋಡಿ ಅಧಿಕ ಲಾಭದಾಸೆಯಿಂದ ₹10.30 ಲಕ್ಷ ಹೂಡಿಕೆ ಮಾಡಿ ವಂಚನೆಗೆ ಒಳಗಾದ ವ್ಯಕ್ತಿಯೊಬ್ಬರು ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವಂಚನೆಗೆ ಒಳಗಾದ ತ್ಯಾಗರಾಜನಗರ ನಿವಾಸಿ ಕೆ.ಎಸ್‌.ರವಿಚಂದ್ರನ್‌ (62) ನೀಡಿದ ದೂರಿನ ಮೇರೆಗೆ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ದೂರುದಾರ ರವಿಚಂದ್ರನ್‌ ಅವರು ಇತ್ತೀಚೆಗೆ ಫೇಸ್‌ಬುಕ್‌ನಲ್ಲಿ ಟೇಡಿಂಗ್‌ಗೆ ಸಂಬಂಧಿಸಿದ ಜೈನ್‌ ಅಕಾಡೆಮಿ ಎನ್ನುವ ಜಾಹೀರಾತು ನೋಡಿದ್ದಾರೆ. ಅದರಲ್ಲಿನ ದೀಪಿಕಾ ಹೆಸರಿನ ಮೊಬೈಲ್‌ ಸಂಖ್ಯೆಗೆ ಕರೆ ಮಾಡಿದ್ದು, ಆಕೆ ಸೇಲಾ ಎಂಬ ಮಹಿಳೆಯನ್ನು ಸಂಪರ್ಕಿಸುವಂತೆ ಮೊಬೈಲ್‌ ಸಂಖ್ಯೆ ನೀಡಿದ್ದಾರೆ. ಈ ಸೇಲಾಗೆ ಕರೆ ಮಾಡಿದಾಗ ಈಕೆ ನೀತಾ ಎಂಬ ಮಹಿಳೆಯ ಮೊಬೈಲ್‌ ಸಂಖ್ಯೆ ನೀಡಿ ಸಂಪರ್ಕಿಸುವಂತೆ ಸೂಚಿಸಿದ್ದಾರೆ.

ಇಂಟರ್‌ ನ್ಯಾಷನಲ್‌ ಟ್ರೇಡಿಂಗ್‌ ಹೆಸರಿನಲ್ಲಿ ವಂಚನೆ:ಅದರಂತೆ ರವಿಚಂದ್ರನ್‌ ನೀತಾಗೆ ಕರೆ ಮಾಡಿದಾಗ ಆಕೆಯು ಇಂಟರ್‌ ನ್ಯಾಷನಲ್‌ ಟ್ರೇಡಿಂಗ್‌ ಬಗ್ಗೆ ಮಾಹಿತಿ ನೀಡಿದ್ದಾರೆ. ಟ್ರೇಡಿಂಗ್‌ ಮಾಡಲು ಟ್ರೇಡಿಂಗ್‌ ಖಾತೆ ತೆರೆಯುವಂತೆ ಸೂಚಿಸಿ, ಆಧಾರ್‌ ಮತ್ತು ಪಾನ್‌ ಕಾರ್ಡ್‌ ಸಂಖ್ಯೆ ಪಡೆದು ಖಾತೆಯನ್ನು ತೆರೆದಿದ್ದಾರೆ. ನಂತರ ರವಿಚಂದ್ರನ್‌ ಟ್ರೇಡಿಂಗ್‌ ಪ್ರಾರಂಭಿಸಿ ತಮ್ಮ ಸಿಟಿ ಬ್ಯಾಂಕ್‌ ಖಾತೆಯಿಂದ ಹಂತ ಹಂತವಾಗಿ ₹8.30 ಲಕ್ಷ ಹೂಡಿಕೆ ಮಾಡಿದ್ದಾರೆ.ಹೂಡಿಕೆ, ತೆರಿಗೆ ಹೆಸರಲ್ಲಿ ಹಣ ಪಡೆದು ಮೋಸ:

ಕೆಲ ದಿನಗಳ ಬಳಿಕ ನೀತಾ, ಲಾಭದ ಹಣ ಪಡೆಯಲು ₹2 ಲಕ್ಷ ತೆರಿಗೆ ಕಟ್ಟುವಂತೆ ರವಿಚಂದ್ರನ್‌ ಅವರಿಂದ ಹಣವನ್ನು ಪಡೆದುಕೊಂಡಿದ್ದಾರೆ. ಬಳಿಕ ಹೂಡಿಕೆ ಮಾಡಿದ್ದ ಹಣ ₹8.30 ಲಕ್ಷ ಹಾಗೂ ತೆರಿಗೆ ರೂಪದಲ್ಲಿ ಪಡೆದಿದ್ದ ₹2 ಲಕ್ಷ ಸೇರಿ ಒಟ್ಟು ₹10.30 ಲಕ್ಷ ವಾಪಾಸ್‌ ನೀಡದೆ ವಂಚಿಸಲಾಗಿದೆ. ಈ ಸಂಬಂಧ ರವಿಚಂದ್ರನ್‌ ಅವರು ಬಸವನಗುಡಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಪತ್ತೆಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.