ಕೆಲಸಕ್ಕೆ ಹುಡುಕುತ್ತಿದ್ದ ಮಹಿಳೆಗೆ ಆನ್‌ಲೈನ್‌ ಟಾಸ್ಕ್‌ನಲ್ಲಿ ಲಾಭದಾಸೆ ತೋರಿಸಿ 10.77 ಲಕ್ಷ ರು. ವಂಚನೆ

| Published : Jan 18 2025, 01:46 AM IST / Updated: Jan 18 2025, 04:23 AM IST

ಸಾರಾಂಶ

ಪಾರ್ಟ್‌ ಟೈಮ್‌ ಕೆಲಸಕ್ಕೆ ಹುಡುಕುತ್ತಿದ್ದ ಮಹಿಳೆಗೆ ಅಪರಿಚಿತ ವ್ಯಕ್ತಿ ಆನ್‌ಲೈನ್‌ ಟಾಸ್ಕ್‌ ಹೆಸರಿನಲ್ಲಿ ಅಧಿಕ ಲಾಭದ ಆಸೆ ತೋರಿಸಿ ಬರೋಬ್ಬರಿ ₹10.77 ಲಕ್ಷ ಪಡೆದು ವಂಚನೆ ಮಾಡಿರುವ ಆರೋಪದಡಿ ಕೇಂದ್ರ ವಿಭಾಗದ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ಬೆಂಗಳೂರು : ಪಾರ್ಟ್‌ ಟೈಮ್‌ ಕೆಲಸಕ್ಕೆ ಹುಡುಕುತ್ತಿದ್ದ ಮಹಿಳೆಗೆ ಅಪರಿಚಿತ ವ್ಯಕ್ತಿ ಆನ್‌ಲೈನ್‌ ಟಾಸ್ಕ್‌ ಹೆಸರಿನಲ್ಲಿ ಅಧಿಕ ಲಾಭದ ಆಸೆ ತೋರಿಸಿ ಬರೋಬ್ಬರಿ ₹10.77 ಲಕ್ಷ ಪಡೆದು ವಂಚನೆ ಮಾಡಿರುವ ಆರೋಪದಡಿ ಕೇಂದ್ರ ವಿಭಾಗದ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಲ್ಲೇಶ್ವರ ನಿವಾಸಿ ಎ.ಎಂ.ಸುನೀತಾ ವಂಚನೆಗೆ ಒಳಗಾದವರು. ಇವರು ನೀಡಿದ ದೂರಿನ ಮೇರೆಗೆ ಮಾಹಿತಿ ತಂತ್ರಜ್ಞಾನ ಕಾಯ್ದೆ ಕಲಂ 66(ಡಿ) ಮತ್ತು ಬಿಎನ್‌ಎಸ್‌ ಕಲಂ 318(2) ಅಡಿ ಎಫ್‌ಐಆರ್‌ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಪ್ರಕರಣ?:

ದೂರುದಾರೆ ಸುನೀತಾ ಅವರು ಪಾರ್ಟ್‌ ಟೈಮ್‌ ಜಾಬ್‌ಗಾಗಿ ಹುಡುಕುತ್ತಿದ್ದರು. ಈ ವೇಳೆ ಅಪರಿಚಿತ ವ್ಯಕ್ತಿ ವಾಟ್ಸಾಪ್‌ ಮುಖಾಂತರ ಸುನೀತಾ ಅವರನ್ನು ಸಂಪರ್ಕಿಸಿ ಆನ್‌ಲೈನ್‌ ಟಾಸ್ಕ್‌ಗಳನ್ನು ಮುಗಿಸಿದರೆ ಹೆಚ್ಚಿನ ಹಣ ಗಳಿಸಬಹುದು ನಂಬಿಸಿದ್ದಾನೆ. ಇದಕ್ಕೆ ಸುನೀತಾ ಒಪ್ಪಿದಾಗ ಟೆಲಿಗ್ರಾಂ ಗ್ರೂಪ್‌ವೊಂದಕ್ಕೆ ಸೇರಿಸಿದ್ದಾನೆ. ಬಳಿಕ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಗಳಿಸಬಹುದು ಹೇಳಿದ್ದಾನೆ.

ಅಪರಿಚಿತನ ಮಾತು ನಂಬಿದ ಸುನೀತಾ, ಆತ ನೀಡಿದ ವಿವಿಧ ಬ್ಯಾಂಕ್‌ ಖಾತೆಗಳಿಗೆ ವಿವಿಧ ಹಂತಗಳಲ್ಲಿ ಒಟ್ಟು ₹10.77 ಲಕ್ಷ ವರ್ಗಾವಣೆ ಮಾಡಿದ್ದಾರೆ. ಬಳಿಕ ಹಲವು ದಿನ ಕಳೆದರೂ ಯಾವುದೇ ಲಾಭ ಬಂದಿಲ್ಲ. ಅಪರಿಚಿತ ವ್ಯಕ್ತಿಗೆ ಕರೆ ಮಾಡಿದರೆ ಕರೆ ಸ್ವೀಕರಿಸಿಲ್ಲ. ಬಳಿಕ ತಾನು ಸೈಬರ್‌ ವಂಚನೆಗೆ ಒಳಗಾಗಿರುವುದು ಅರಿವಿಗೆ ಬಂದಿದೆ. ಹೀಗಾಗಿ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿ, ಸೈಬರ್‌ ವಂಚಕರ ಪತ್ತೆಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಹೂಡಿಕೆ ನೆಪದಲ್ಲಿ ₹30.70 ಲಕ್ಷ ವಂಚಿಸಿದ ಸೈಬರ್‌ ಕಳ್ಳಕನ್ನಡಪ್ರಭ ವಾರ್ತೆ ಬೆಂಗಳೂರು

ಸೈಬರ್‌ ವಂಚಕರು ವ್ಯಕ್ತಿಯೊಬ್ಬರಿಗೆ ಅಧಿಕ ಲಾಭದ ಆಸೆ ತೋರಿಸಿ ಹೂಡಿಕೆ ನೆಪದಲ್ಲಿ ಬರೋಬ್ಬರಿ ₹30.70 ಲಕ್ಷ ಪಡೆದು ಬಳಿಕ ವಂಚಿಸಿದ ಆರೋಪದಡಿ ದಕ್ಷಿಣ ವಿಭಾಗದ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಿಕಾಸಿಪುರ ನಿವಾಸಿ ಮಜರುಲ್‌ ಹಕ್‌ ಖಾನ್‌ ವಂಚನೆಗೆ ಒಳಗಾದವರು. ಇವರು ನೀಡಿದ ದೂರಿನ ಮೇರೆಗೆ ಮಾಹಿತಿ ತಂತ್ರಜ್ಞಾನ ಕಾಯ್ದೆ ಕಲಂ 60(ಡಿ), ಬಿಎನ್‌ಎಸ್‌ ಕಲಂ 318(4), 319(2) ಅಡಿ ಎಫ್‌ಐಆರ್‌ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ವಂಚನೆ?:

ದೂರುದಾರ ಮಜರುಲ್‌ ಹಕ್‌ ಖಾನ್‌ಗೆ ಅಪರಿಚಿತ ವ್ಯಕ್ತಿ ಕಳೆದ ನವೆಂಬರ್‌ 20ರಂದು ವಾಟ್ಸಾಪ್‌ ಕರೆ ಮಾಡಿದ್ದಾನೆ. ಟ್ರೇಡಿಂಗ್‌ ವ್ಯವಹಾರದ ಬಗ್ಗೆ ಮಾಹಿತಿ ನೀಡಿ ಹಣ ಹೂಡಿಕೆ ಮಾಡಿದರೆ ಅಧಿಕ ಲಾಭ ಗಳಿಸಬಹುದು ಆಸೆ ಹುಟ್ಟಿಸಿದ್ದಾನೆ. ಈತನ ಮಾತು ನಂಬಿದ ಮಜರುಲ್‌ ಹಕ್‌ ಟ್ರೇಡಿಂಗ್‌ ವ್ಯವಹಾರದಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರಿಸಿದ್ದಾರೆ. ಈ ವೇಳೆ ಅಪರಿಚಿತ ವ್ಯಕ್ತಿಯ ‘ಎಸಿಐ ವೆಲ್ತ್‌ ಕಮ್ಯೂನಿಟಿ ಎ-604’ ಎಂಬ ವಾಟ್ಸಾಪ್‌ ಗ್ರೂಪ್‌ಗೆ ಮಜರುಲ್‌ ಹಕ್‌ ಅವರನ್ನು ಸೇರಿಸಿದ್ದಾನೆ. ಬಳಿಕ ವೆಬ್‌ ಲಿಂಕ್‌ವೊಂದನ್ನು ನೀಡಿ ಟ್ರೇಡಿಂಗ್‌ ಮಾಡುವಂತೆ ಸೂಚಿಸಿದ್ದಾರೆ. ಬಳಿಕ ಹೂಡಿಕೆ ಹೆಸರಿನಲ್ಲಿ ಅಪರಿಚಿತರು ನೀಡಿದ ವಿವಿಧ ಬ್ಯಾಂಕ್‌ ಖಾತೆಗಳಿಗೆ ಮಜರುಲ್‌ ಹಕ್‌ ವಿವಿಧ ಹಂತಗಳಲ್ಲಿ ಒಟ್ಟು ₹30.70 ಲಕ್ಷ ವರ್ಗಾಯಿಸಿದ್ದಾರೆ.

ಹಣ ವರ್ಗಾವಣೆ ಬಳಿಕ ಸಂಪರ್ಕ ಕಡಿತ:

ಬಳಿಕ ಅಪರಿಚಿತ ಯಾವುದೇ ಟ್ರೇಡಿಂಗ್‌ ಮಾಡಿಲ್ಲ. ಹಣ ಅಥವಾ ಲಾಭ ಯಾವುದನ್ನೂ ವಾಪಾಸ್‌ ನೀಡಿಲ್ಲ. ಮಜರುಲ್‌ ಹಕ್‌ ಹಲವು ಬಾರಿ ಕರೆ ಮಾಡಿದರೂ ಸಂಪರ್ಕಕ್ಕೆ ಸಿಕ್ಕಿಲ್ಲ. ಹೀಗಾಗಿ ತಾನು ಸೈಬರ್‌ ವಂಚನೆಗೆ ಒಳಗಾಗಿರುವುದು ಮಜರುಲ್‌ ಹಕ್‌ಗೆ ಖಚಿತವಾಗಿದೆ. ಬಳಿಕ ಸೈಬರ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿ, ಸೈಬರ್‌ ವಂಚಕರ ಪತ್ತೆಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.