29ನೇ ಮಹಡಿಯಿಂದ ಜಿಗಿದು 12 ವರ್ಷದ ಬಾಲಕಿ ಆತ್ಮಹತ್ಯೆ; ಬೇಗೂರು ರಸ್ತೆಯ ಅಪಾರ್ಟ್‌ಮೆಂಟ್‌ವೊಂದರಲ್ಲಿ ಘಟನೆ

| Published : Jan 24 2024, 02:00 AM IST

29ನೇ ಮಹಡಿಯಿಂದ ಜಿಗಿದು 12 ವರ್ಷದ ಬಾಲಕಿ ಆತ್ಮಹತ್ಯೆ; ಬೇಗೂರು ರಸ್ತೆಯ ಅಪಾರ್ಟ್‌ಮೆಂಟ್‌ವೊಂದರಲ್ಲಿ ಘಟನೆ
Share this Article
  • FB
  • TW
  • Linkdin
  • Email

ಸಾರಾಂಶ

29ನೇ ಮಹಡಿಯಿಂದ ಜಿಗಿದು 12 ವರ್ಷದ ಬಾಲಕಿ ಆತ್ಮಹತ್ಯೆ; ಬೇಗೂರು ರಸ್ತೆಯ ಅಪಾರ್ಟ್‌ಮೆಂಟ್‌ವೊಂದರಲ್ಲಿ ಘಟನೆ

ಕನ್ನಡಪ್ರಭ ವಾರ್ತೆ ಬೆಂಗಳೂರು

ಅಪಾರ್ಟ್‌ಮೆಂಟ್‌ವೊಂದರ 29ನೇ ಮಹಡಿಯ ಬಾಲ್ಕನಿಯಿಂದ ಜಿಗಿದು 12 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಳಿಮಾವು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಬೇಗೂರು ರಸ್ತೆಯ ಅಪಾರ್ಟ್‌ಮೆಂಟ್‌ವೊಂದರಲ್ಲಿ ಮಂಗಳವಾರ ಮುಂಜಾನೆ 5 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಜೋರು ಶಬ್ಧ ಕೇಳಿ ಬಂದ ಹಿನ್ನೆಲೆಯಲ್ಲಿ ಸೆಕ್ಯೂರಿ ಗಾರ್ಡ್‌ ಓಡಿ ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.

ಮೃತ ಬಾಲಕಿ ತಂದೆ ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್‌ ಆಗಿದ್ದು, ತಾಯಿ ಗೃಹಿಣಿಯಾಗಿದ್ದಾರೆ. ಬೇಗೂರು ರಸ್ತೆಯ ಖಾಸಗಿ ಅಪಾರ್ಟ್‌ಮೆಂಟ್‌ನ 29ನೇ ಮಹಡಿಯ ಫ್ಲ್ಯಾಟ್‌ನಲ್ಲಿ ಬಾಡಿಗೆಗೆ ನೆಲೆಸಿದ್ದಾರೆ. ದಂಪತಿಗೆ ಒಬ್ಬಳೇ ಮಗಳಿದ್ದು, ಬನ್ನೇರುಘಟ್ಟ ರಸ್ತೆಯ ಖಾಸಗಿ ಶಾಲೆಯಲ್ಲಿ ಆರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು.

ಮಂಗಳವಾರ ಮುಂಜಾನೆ 4.30ಕ್ಕೆ ಬಾಲಕಿ ಎದ್ದು ಮನೆಯ ಹಾಲ್‌ಗೆ ಬಂದಿದ್ದಳು. ಅದೇ ಸಮಯಕ್ಕೆ ತಾಯಿ ಎದ್ದು ಬಂದಿದ್ದು, ಇಷ್ಟು ಬೇಗ ಏಕೆ ಎದ್ದೆ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಬಾಲಕಿ ಅಸ್ಪಷ್ಟ ಉತ್ತರ ನೀಡಿದ್ದಾಳೆ. ಬಳಿಕ ಮತ್ತೆ ಮಲಗುವುದಾಗಿ ರೂಮ್‌ಗೆ ಹೋಗಿದ್ದಾಳೆ. ಬಳಿಕ ತಾಯಿ ಅಡುಗೆ ಮನೆ ಕಡೆಗೆ ತೆರಳಿದ್ದಾರೆ.

ಮುಂಜಾನೆ 5 ಗಂಟೆ ಸುಮಾರಿಗೆ ಸೆಕ್ಯೂರಿಟಿ ಗಾರ್ಡ್‌ ಜೋರಾದ ಶಬ್ಧ ಕೇಳಿ ಹೋಗಿ ನೋಡಿದಾಗ ಬಾಲಕಿ ಮೇಲಿಂದ ಬಿದ್ದು ಮೃತಪಟ್ಟಿರುವುದು ಕಂಡು ಬಂದಿದೆ. ತಕ್ಷಣ ಆತ ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ ಅಧ್ಯಕ್ಷರಿಗೆ ಮಾಹಿತಿ ನೀಡಿದ್ದಾನೆ. ತಕ್ಷಣ ಅಧ್ಯಕ್ಷರು ಹಾಗೂ ಅಪಾರ್ಟ್‌ಮೆಂಟ್‌ ನಿವಾಸಿಗಳು ಬಂದು ನೋಡಿದಾಗ ಬಾಲಕಿಯ ಗುರುತು ಸಿಕ್ಕಿದೆ. ಬಳಿಕ ಆಕೆಯ ಪೋಷಕರಿಗೆ ವಿಷಯ ತಿಳಿಸಿದ್ದಾರೆ.

ಬಾಲಕಿಯ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆಕೆಯ ರೂಮ್‌ನಲ್ಲಿ ಯಾವುದೇ ಮರಣಪತ್ರವೂ ಸಿಕ್ಕಿಲ್ಲ. ಈ ಸಂಬಂಧ ಹುಳಿಮಾವು ಪೊಲೀಸ್‌ ಠಾಣೆಯಲ್ಲಿ ಅಸಹಜ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.