ಸಾರಾಂಶ
ಬೆಂಗಳೂರು : ಜ್ಯುವೆಲ್ಲರಿ ಅಂಗಡಿ ಮಾಲೀಕರೊಬ್ಬರ ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆಯ ಕಾವಲಿಗೆ ಇದ್ದ ನೇಪಾಳ ಮೂಲದ ಸೆಕ್ಯೂರಿಟಿ ಗಾರ್ಡ್ ₹40.80 ಲಕ್ಷ ನಗದು ಹಾಗೂ ₹14.75 ಕೋಟಿ ಮೌಲ್ಯದ 18 ಕೆ.ಜಿ. 470 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ವಿಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ವಿಜಯನಗರದ ಹೊಸಹಳ್ಳಿ ಎಕ್ಸ್‌ಟೆನ್ಷನ್ ನಿವಾಸಿ ಸುರೇಂದ್ರ ಕುಮಾರ್ ಜೈನ್ ಅವರ ಮನೆಯಲ್ಲಿ ಈ ಕಳವು ಕೃತ್ಯ ನಡೆದಿದೆ. ಈ ಸಂಬಂಧ ನೀಡಲಾದ ದೂರಿನ ಮೇರೆಗೆ ನೇಪಾಳ ಮೂಲದ ಸೆಕ್ಯೂರಿಟಿ ಗಾರ್ಡ್ ನಮ್ರಾಜ್ ಬಾತ ವಿರುದ್ಧ ಪ್ರಕರಣ ದಾಖಲಿಸಿ, ಆತನ ಬಂಧನಕ್ಕೆ ಶೋದ ಕಾರ್ಯ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏನಿದು ಪ್ರಕರಣ?:
ದೂರುದಾರ ಸುರೇಂದ್ರ ಕುಮಾರ್ ಜೈನ್ ಮಾಗಡಿ ರಸ್ತೆಯ ವಿದ್ಯಾರಣ್ಯನಗರದಲ್ಲಿ ಸುಮಾರು 30 ವರ್ಷಗಳಿಂದ ಅರಿಹಂತ್ ಜ್ಯುವೆಲ್ಲರಿ ಅಂಗಡಿ ಹೊಂದಿದ್ದು, ಚಿನ್ನಾಭರಣ ವ್ಯಾಪಾರ ಮಾಡುತ್ತಿದ್ದಾರೆ. ಇವರ ಜ್ಯುವೆಲ್ಲರಿ ಅಂಗಡಿಯಲ್ಲಿ 7 ಜನ ಹುಡುಗರು ಕೆಲಸ ಮಾಡಿಕೊಂಡಿದ್ದು, ಈ ಪೈಕಿ 6 ಮಂದಿ ಅವರ ಸ್ವಂತ ಮನೆಗಳಲ್ಲಿ ವಾಸವಾಗಿದ್ದಾರೆ. ಈ ಜ್ಯುವೆಲ್ಲರಿ ಅಂಗಡಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡಿಕೊಂಡಿದ್ದ ನೇಪಾಳ ಮೂಲದ ನಮ್ರಾಜ್‌ಗೆ ಮನೆ ಇಲ್ಲದ ಕಾರಣ ಮಾಲೀಕ ಸುರೇಂದ್ರ ಕುಮಾರ್ ಜೈನ್ ಅವರ ಮನೆಯ ಪಾರ್ಕಿಂಗ್ ಸ್ಥಳದಲ್ಲಿರುವ ಸೆಕ್ಯೂರಿಟಿ ರೂಮ್‌ನಲ್ಲಿ 6 ತಿಂಗಳಿನಿಂದ ಪತ್ನಿ ಜತೆಗೆ ವಾಸವಿದ್ದ. ಅಂತೆಯೇ ಮನೆಯ ತಾರಿಸಿಯ ಗಿಡಗಳಿಗೆ ನೀರು ಹಾಕುವುದು ಸೇರಿದಂತೆ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ.
ಮಾಲೀಕರು ಗುಜರಾತ್‌ಗೆ ತೆರಳಿದ್ದಾಗ ಕಳವು
ಜುವೆಲ್ಲರಿ ಅಂಗಡಿ ಮಾಲೀಕ ಸುರೇಂದ್ರಕುಮಾರ್ ಜೈನ್ ಅವರು ದೇವರ ಜಾತ್ರೆ ಪ್ರಯುಕ್ತ ನ.1ರಂದು ಕುಟುಂಬದ ಜತೆ ಗುಜರಾತ್‌ನ ಗಿರ್ನಾರ್‌ಗೆ ತೆರಳಿದ್ದರು. ಜಾತ್ರೆ ಮುಗಿಸಿಕೊಂಡು ನ.7ರಂದು ಮುಂಜಾನೆ ಮನೆಗೆ ವಾಪಾಸಾದಾಗ ಮನೆಯಲ್ಲಿದ್ದ ನಗದು ಹಣ ಹಾಗೂ ಚಿನ್ನಾಭರಣ, ಚಿನ್ನದ ಬಿಸ್ಕತ್ ಸೇರಿ ಒಟ್ಟು ಸುಮಾರು ₹15.15 ಕೋಟಿ ಮೌಲ್ಯದ ಮೌಲ್ಯದ ವಸ್ತುಗಳು ಕಳುವಾಗಿರುವುದು ಕಂಡು ಬಂದಿದೆ. ಬಳಿಕ ಸೆಕ್ಯೂರಿಟಿ ಗಾರ್ಡ್ ನಮ್ರಾಜ್‌ನನ್ನು ಹುಡುಕಿದಾಗ ಆತ ಪತ್ತೆಯಾಗಿಲ್ಲ. ಮೊಬೈಲ್‌ಗೆ ಕರೆ ಮಾಡಿದಾಗ ಸ್ಬಿಚ್ಡ್ ಆಫ್ ಬಂದಿದೆ.
ಹೀಗಾಗಿ ಮನೆಯಲ್ಲಿ ಯಾರು ಇಲ್ಲದ ಸಮಯವನ್ನು ಬಳಸಿಕೊಂಡು ಸೆಕ್ಯುರಿಟಿ ಗಾರ್ಡ್ ನಮ್ರಾಜ್ ನಗದು, ಚಿನ್ನಾಭರಣ ಕಳವು ಮಾಡಿ ಪತ್ನಿ ಜತೆಗೆ ಪರಾರಿಯಾಗಿದ್ದಾನೆ. ಈತನನ್ನು ಪತ್ತೆಹಚ್ಚಿ ಕಳವು ಮಾಲು ಹುಡುಕಿ ಕೊಡುವಂತೆ ಸುರೇಂದ್ರ ಕುಮಾರ್ ಜೈನ್ ವಿಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಯ ಬಂಧನಕ್ಕೆ ಶೋಧ ಕಾರ್ಯ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.