₹15 ಲಕ್ಷ ಕೋಟಿಯ ಕತೆ ಕಟ್ಟಿ ₹37 ಲಕ್ಷ ಟೋಪಿ: ಐವರ ಸೆರೆ

| Published : Feb 12 2025, 01:30 AM IST

ಸಾರಾಂಶ

ರಿವರ್ಸ್ ಬ್ಯಾಂಕ್ ಆಫ್‌ ಇಂಡಿಯಾ (ಆರ್‌ಬಿಐ) ಜಪ್ತಿ ಮಾಡಿರುವ ಪ್ರಾಚೀನ ಕಾಲದ ಕಂಚಿನ ಪಾತ್ರೆ ಮಾರಾಟದಿಂದ ಗಳಿಸಿದ ₹15 ಲಕ್ಷ ಕೋಟಿಯನ್ನು ಪಡೆಯಲು ತೆರಿಗೆ ಪಾವತಿಸಿದರೆ ದುಪ್ಪಟ್ಟು ಲಾಭ ಸಿಗಲಿದೆ ಎಂದು ನಂಬಿಸಿ ಉದ್ಯಮಿಯೊಬ್ಬರಿಗೆ ವಂಚಿಸಿ ಹಣ ಸುಲಿಗೆ ಮಾಡಿದ್ದ ಐವರು ಚಾಲಾಕಿ ಮೋಸಗಾರರು ಸಿಸಿಬಿ ಬಲೆಗೆ ಬಿದ್ದಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಿವರ್ಸ್ ಬ್ಯಾಂಕ್ ಆಫ್‌ ಇಂಡಿಯಾ (ಆರ್‌ಬಿಐ) ಜಪ್ತಿ ಮಾಡಿರುವ ಪ್ರಾಚೀನ ಕಾಲದ ಕಂಚಿನ ಪಾತ್ರೆ ಮಾರಾಟದಿಂದ ಗಳಿಸಿದ ₹15 ಲಕ್ಷ ಕೋಟಿಯನ್ನು ಪಡೆಯಲು ತೆರಿಗೆ ಪಾವತಿಸಿದರೆ ದುಪ್ಪಟ್ಟು ಲಾಭ ಸಿಗಲಿದೆ ಎಂದು ನಂಬಿಸಿ ಉದ್ಯಮಿಯೊಬ್ಬರಿಗೆ ವಂಚಿಸಿ ಹಣ ಸುಲಿಗೆ ಮಾಡಿದ್ದ ಐವರು ಚಾಲಾಕಿ ಮೋಸಗಾರರು ಸಿಸಿಬಿ ಬಲೆಗೆ ಬಿದ್ದಿದ್ದಾರೆ.

ಹುಬ್ಬಳ್ಳಿ ನಗರದ ಇದಾಯತ್ ವುಲ್ಲಾ ಖಾನ್, ನಾಗರಬಾವಿಯ ಪ್ರತೀಕ್‌ಗೌಡ, ಉಮೇಶ್ ಕುಮಾರ್, ಸುರ್ಕೀತ್ ಹಾಗೂ ತಮಿಳುನಾಡಿನ ಜಾಕೀರ್ ಬಂಧಿತರಾಗಿದ್ದು, ಆರೋಪಿಗಳಿಂದ 2 ಕಾರು, 5 ಮೊಬೈಲ್, 2 ನಕಲಿ ಆರ್‌ಬಿಐ ಫೈಲ್ ಮತ್ತು ₹1 ಲಕ್ಷ ನಗದು ಜಪ್ತಿ ಮಾಡಲಾಗಿದೆ. ತಲೆಮರೆಸಿಕೊಂಡಿರುವ ಪ್ರತೀಕ್ ಪತ್ನಿ ಯವನಿಕಾ ಹಾಗೂ ಬಿಂದು ಪತ್ತೆಗೆ ತನಿಖೆ ಮುಂದುವರೆಸಿದೆ.

ಕೆಲ ದಿನಗಳ ಹಿಂದೆ ಹುಬ್ಬಳ್ಳಿಯ ಉದ್ಯಮಿ ಪ್ರವೀಣ್ ಕುಮಾರ್ ಹೂಗಾರ್‌ ಅವರಿಗೆ ₹37 ಲಕ್ಷ ವಂಚನೆ ಬಗ್ಗೆ ನೀಡಿದ ದೂರಿನ ಮೇರೆಗೆ ಆರೋಪಿಗಳನ್ನು ಸಿಸಿಬಿ ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೇಗೆ ವಂಚನೆ?:

ಶೇಷಾದ್ರಿಪುರದಲ್ಲಿ ಮಯಾಂಕ್ ಕನ್‌ಸ್ಟ್ರಕ್ಷನ್ ಆ್ಯಂಡ್‌ ಸಪ್ಲೈಯರ್ ಹೆಸರಿನ ಕಚೇರಿಯನ್ನು ಹೊಂದಿದ್ದ ಉದ್ಯಮಿ ಪ್ರವೀಣ್‌ ಅವರಿಗೆ ತಮ್ಮ ಸ್ನೇಹಿತ ನಾಗರಾಜ್‌ ಮೂಲಕ ಸುಕೀರ್ತಿ ಮತ್ತು ಇದಾಯತ್ ಉಲ್ಲಾ ಪರಿಚಯವಾಗಿದ್ದರು. ಆಗ ತಮ್ಮ ಹಣಕಾಸು ವ್ಯವಹಾರದ ಬಗ್ಗೆ ಸ್ನೇಹಿತರ ಜತೆ ಪ್ರವೀಣ್ ಔಪಚಾರಿಕವಾಗಿ ಮಾತನಾಡಿದ್ದರು. ಆಗ ಪಶ್ಚಿಮ ಬಂಗಾಳದ ಕೊಲ್ಕತ್ತಾ ನಗರದ ಬ್ಯಾಂಕ್‌ನಲ್ಲಿ ₹5 ಕೋಟಿ ಸಾಲ ಕೊಡಿಸುವುದಾಗಿ ಪ್ರವೀಣ್‌ ಅವರಿಗೆ ಇದಾಯತ್ ಹಾಗೂ ಸುಕೀರ್ತಿ ಹೇಳಿದ್ದರು. ಅಲ್ಲದೆ ಇದಕ್ಕಾಗಿ ₹25 ಲಕ್ಷ ಕಮಿಷನ್ ಕೊಡಬೇಕಿದೆ ಎಂದು ಆರೋಪಿಗಳು ತಿಳಿಸಿದ್ದರು. ಈ ಮಾತು ನಂಬಿದ ಬಳಿಕ ಪ್ರವೀಣ್ ಅವರಿಂದ ಹಂತ ಹಂತವಾಗಿ ₹17.50 ಲಕ್ಷ ಸುಲಿಗೆ ಮಾಡಿದ್ದರು ಎಂದು ಸಿಸಿಬಿ ಹೇಳಿದೆ.

ಆದರೆ ಪ್ರವೀಣ್ ಅವರಿಗೆ ಹೇಳಿದ ಸಮಯಕ್ಕೆ ಸಾಲ ಮಂಜೂರಾಗಲಿಲ್ಲ. ಈ ವಿಳಂಬಕ್ಕೆ ಏನೇನೋ ಸಬೂಬು ಹೇಳಿದ ಆರೋಪಿಗಳು, ನಿಮಗೆ ತುರ್ತು ಸಾಲ ತೀರಿಸಲು ಬೇರೊಂದು ಉಪಾಯವಿದೆ. ಅಮೆರಿಕದಲ್ಲಿ ಪುರಾತನ ಕಾಲದ ಕಂಚಿನ ಪಾತ್ರೆ ಮಾರಾಟದಿಂದ ಯವನಿಕಾ ಎಂಬಾಕೆಗೆ ₹15 ಲಕ್ಷ ಕೋಟಿ ಬಂದಿದೆ. ಆದರೆ ಈ ಹಣವನ್ನು ಕೊಲ್ಕತ್ತಾದಲ್ಲಿರುವ ಆರ್‌ಬಿಐ ಪ್ರಾದೇಶಿಕ ಕಚೇರಿಗೆ ಜಪ್ತಿ ಮಾಡಿದ್ದು, ಆ ಹಣ ಪಡೆಯಲು ₹20 ಲಕ್ಷ ತೆರಿಗೆ ಪಾವತಿಸಬೇಕಿದೆ. ತಕ್ಷಣ ಹಣ ನೀಡಿದರೆ ದೊಡ್ಡ ಮೊತ್ತದ ನಗದು ಸಿಗಲಿದೆ ಎಂದು ಪ್ರವೀಣ್‌ಗೆ ವಂಚಕರು ಆಫರ್ ಕೊಟ್ಟಿದ್ದರು. ಈ ಆಮಿಷಕ್ಕೆ ಬಲಿಯಾದ ಅವರಿಂದ ಮತ್ತೆ ₹20 ಲಕ್ಷವನ್ನು ಆರೋಪಿಗಳು ವಸೂಲಿ ಮಾಡಿದ್ದರು. ಆದರೆ ಇದಾದ ನಂತರ ಕೊಲ್ಕತ್ತಾ ನಗರದ ಆರ್‌ಬಿಐ ಕಚೇರಿಗೆ ಕರೆದೊಯ್ದು ವಂಚಕರು, ಆ ಕಚೇರಿ ಬಾಗಿಲಿನಲ್ಲಿ ಪ್ರವೀಣ್‌ ಅವರನ್ನು ನಿಲ್ಲಿಸಿ ಹಣ ಬಿಡುಗಡೆಯಾಗಲಿದೆ ಎಂದು ನಕಲಿ ದಾಖಲೆ ಪತ್ರಗಳನ್ನು ತೋರಿಸಿ ಮರಳಿ ಕರೆತಂದಿದ್ದರು. ಇದಾದ ನಂತರ ಆರೋಪಿಗಳ ವರಸೆ ಬದಲಾಯಿತು. ಇದರಿಂದ ಶಂಕೆಗೊಂಡ ಪ್ರವೀಣ್‌, ತಮ್ಮ ಹಣ ಮರಳಿಸುವಂತೆ ಕೇಳಿದ್ದಕ್ಕೆ ಇದಾಯತ್ ತಂಡಕ್ಕೆ ಬೆದರಿಕೆ ಹಾಕಿತು. ಕೊನೆಗೆ ತಾವು ಮೋಸ ಹೋಗಿರುವುದು ಅರಿವಾಗಿ ಸಿಸಿಬಿ ಪೊಲೀಸರಿಗೆ ಅವರು ದೂರು ನೀಡಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.