ಬೆಂಗಳೂರಲ್ಲಿ ಅನಧಿಕೃತವಾಗಿ ನಿರ್ಮಾಣವಾಗುತ್ತಿರುವ 1500 ಕಟ್ಟಡ ಗುರುತು : ತುಷಾರ್‌ ಗಿರಿನಾಥ್‌

| Published : Nov 08 2024, 01:16 AM IST / Updated: Nov 08 2024, 04:39 AM IST

Tushar Girinath

ಸಾರಾಂಶ

ನಗರದಲ್ಲಿ ಅನಧಿಕೃತವಾಗಿ ನಿರ್ಮಾಣವಾಗುತ್ತಿರುವ ಸುಮಾರು 1,500ಕ್ಕೂ ಅಧಿಕ ಕಟ್ಟಡಗಳನ್ನು ಗುರುತಿಸಲಾಗಿದ್ದು, ಈ ಕಟ್ಟಡಗಳನ್ನು ನಿಯಮಾನುಸರ ತೆರವುಗೊಳಿಸಲು ಆದೇಶಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ತಿಳಿಸಿದ್ದಾರೆ.

 ಬೆಂಗಳೂರು : ನಗರದಲ್ಲಿ ಅನಧಿಕೃತವಾಗಿ ನಿರ್ಮಾಣವಾಗುತ್ತಿರುವ ಸುಮಾರು 1,500ಕ್ಕೂ ಅಧಿಕ ಕಟ್ಟಡಗಳನ್ನು ಗುರುತಿಸಲಾಗಿದ್ದು, ಈ ಕಟ್ಟಡಗಳನ್ನು ನಿಯಮಾನುಸರ ತೆರವುಗೊಳಿಸಲು ಆದೇಶಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ತಿಳಿಸಿದ್ದಾರೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಲ್ಲಿ ಶಾಲೆ, ಆಸ್ಪತ್ರೆ ಹಾಗೂ ವಸತಿಗೆ ಸಂಬಂಧಿಸಿದ ಅನಧಿಕೃತ ಕಟ್ಟಡವಾದರೂ ಅಧಿಕಾರಿಗಳು ಪತ್ತೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಪ್ರತಿ ವಲಯದಲ್ಲಿ 140 ರಿಂದ 180 ಅನಧಿಕೃತ ಕಟ್ಟಡಗಳಂತೆ ಒಟ್ಟಾರೆ 1500ಕ್ಕೂ ಅಧಿಕ ಅನಧಿಕೃತ ಕಟ್ಟಡ ಗುರುತಿಸಲಾಗಿದೆ. ಪಶ್ಚಿಮ ವಲಯದಲ್ಲಿ ಮಾತ್ರ ಕಡಿಮೆ ಸಂಖ್ಯೆಯ ಗುರುತಿಸುವ ಕಾರ್ಯವಾಗಿದೆ ಎಂದರು.

ತುರ್ತು ಹಾಗೂ ಅಪಾಯದ ಹಂತದ ಕಟ್ಟಡ ತೆರವುಗೊಳಿಸುವ ಅಧಿಕಾರ ಬಿಬಿಎಂಪಿಗೆ ಇದೆ. ಅಂತಹ ಕಟಡ್ಡಗಳನ್ನು ನೋಟಿಸ್‌ ನೀಡಿ 24 ಗಂಟೆಯಲ್ಲಿ ಕಟ್ಟಡ ತೆರವುಗೊಳಿಸಬಹುದಾಗಿದೆ. ಯಾವುದೇ ಅಪಾಯವಿಲ್ಲ ಎಂದರೆ ನಿಯಮಾನುಸಾರ ಸಮಯ ನೀಡಿ ಕಾನೂನು ಕ್ರಮ ಕೈಗೊಳ್ಳಬೇಕಾಗಲಿದೆ ಎಂದು ತಿಳಿಸಿದರು.

48 ರಸ್ತೆಗಳ ವೈಟ್‌ಟಾಪಿಂಗ್‌ಗೆ ಪೊಲೀಸ್‌ ಅನುಮತಿ: ನಗರದ ಸುಮಾರು 150ಕ್ಕೂ ಅಧಿಕ ರಸ್ತೆಗಳನ್ನು ವೈಟ್‌ಟಾಪಿಂಗ್‌ ಕಾಮಗಾರಿಯಡಿ ಅಭಿವೃದ್ಧಿ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಪೈಕಿ 48 ರಸ್ತೆಗಳಲ್ಲಿ ಕಾಮಗಾರಿ ನಡೆಸಲು ನಗರ ಸಂಚಾರಿ ಪೊಲೀಸರು ಅನುಮತಿ ನೀಡಿದ್ದಾರೆ ಎಂದು ಅವರು ತಿಳಿಸಿದರು.