ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ರೌಡಿಶೀಟರ್‌ವೊಬ್ಬನ ಹುಟ್ಟುಹಬ್ಬದ ಆಚರಣೆಯ ಔತಣಕೂಟದ ನೆಪದಲ್ಲಿ ರೇವ್‌ ಪಾರ್ಟಿ (ಮಾದಕ ವಸ್ತು ಪಾರ್ಟಿ) ನಡೆಯುತ್ತಿದ್ದ ತೋಟದ ಮನೆಯ ಮೇಲೆ ಪೊಲೀಸರು ದಾಳಿ ನಡೆಸಿ 16 ಮಂದಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಔತಣಕೂಟದ ನೆಪದಲ್ಲಿ ಮಾದಕ ವಸ್ತುಗಳನ್ನು ಅಕ್ರಮ ದಾಸ್ತಾನು ಮಾಡಿಕೊಂಡು ರೇವ್‌ ಪಾರ್ಟಿ ಮಾಡುತ್ತಿದ್ದ ಕೊಳ್ಳೇಗಾಲ ತಾಲೂಕಿನ ಮೂವರು ಸ್ಥಳೀಯರು, ಚನ್ನಪಟ್ಟಣ, ಬೆಂಗಳೂರು ನಿವಾಸಿಗಳು ಸೇರಿದಂತೆ 16 ಮಂದಿಯನ್ನು ಬಂಧಿಸಲಾಗಿದೆ. ಓರ್ವ ನಾಪತ್ತೆಯಾಗಿದ್ದು, ಆತನಿಗಾಗಿ ಬಲೆ ಬೀಸಲಾಗಿದೆ.

16 ಮಂದಿ ಬಂಧಿತರು:

ಬೆಂಗಳೂರಿನ ಜೆಜೆನಗರ ಗೋರಿಪಾಳ್ಯ ನಿವಾಸಿ, ರೌಡಿ ಸೀಟರ್‌ ಜಹೀರ್‌, ಬನ್ನೇರುಘಟ್ಟದ ಶೇಖ್ ಮೆಹಬೂಬ್, ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣದ ನಿಸಾರ್‌ ಖಾನ್, ಜಿಟಿಆರ್‌ ನಗರದ ಸಯ್ಯದ್ ಯುನಸ್, ಚಾಮರಾಜಪೇಟೆಯ ಸಾರ್ಧುಲಾ (ಸದ್ರುಲ ಬೇಗ್), ಬೊಮ್ಮನಹಳ್ಳಿಯ ಇಲಿಯಾಸ್ ಖಾನ್, ಬಿಎಂಟಿ ಮೊದಲ ಹಂತದ ಶಬ್ಬಾಜ್‌, ಚನ್ನಪಟ್ಟಣದ ಶರ್ಫುದ್ದೀನ್‌, ಸುಧಾಮನಗರದ ಪವನ್, ಬನಶಂಕರಿ ವಾಸಿ ಸಾದಿಕ್ ಪಾಷ, ಗುರಪ್ಪನಪಾಳ್ಯದ ಅಫ್ಜಲ್‌ ಬೇಗ್, ಮಡಿವಾಳದ ಮಹಮ್ಮದ್ ಶಕೀಲ್, ಸಮೀರ್‌, ಮಧುವನಹಳ್ಳಿಯ ಕುಮಾರಸ್ವಾಮಿ, ಕೊಳ್ಳೇಗಾಲದ ಸಾಯಿಬಾಬಾ ದೇವಸ್ಥಾನ ಬಳಿಯ ನಿವಾಸಿ ಉಮೇರ್‌ ಖಾನ್, ರಾಜೀವ್‌ನಗರ ನಿವಾಸಿ ನವೀನ್ ರಾಜ್, ಆರ್‌ಎಂಸಿ ಬಡಾವಣೆ ನಿವಾಸಿ ಫಯಾಜ್ ಖಾನ್ ಎಂಬುವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ. ಮತ್ತೊಬ್ಬ ತಪ್ಪಿಸಿಕೊಂಡಿದ್ದಾನೆ. ರೇವ್‌ ಪಾರ್ಟಿಯಲ್ಲಿದ್ದ ಗಾಂಜಾ, ಅಫೀಮು, ಚರಸ್ ಇನ್ನಿತರೆ ಪದಾರ್ಥಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.


ಆರೋಪಿಗಳ ಬಂಧನದ ವೇಳೆ ಪಿಎಸ್‌ಐ ಒಬ್ಬರು ಆರೋಪಿಯೊಬ್ಬನನ್ನು ರಕ್ಷಿಸಲು ಮುಂದಾಗಿ ಸಾಕಷ್ಟು ವಿವಾದಕ್ಕೀಡಾದರು ಎಂದು ಬಲ್ಲ ಮೂಲಗಳು ಖಚಿತಪಡಿಸಿವೆ. ಈ ವಿಚಾರ ಪೊಲೀಸ್ ಇಲಾಖೆಯಲ್ಲಿ ಸಾಕಷ್ಟು ಸದ್ದು ಮಾಡಿದೆ ಎನ್ನಲಾಗಿದೆ.

ತಾಲೂಕಿನ ಮಧುವನಹಳ್ಳಿ ಸಮೀಪದ ಲಕ್ಷ್ಮಿಪುರದ ಗುತ್ತಿಗೆದಾರ ಫಯಾಜ್ ಖಾನ್ ಎಂಬುವರ ಸರ್ವೆ ನಂಬರ್‌ 127ರ ತೋಟದ ಮನೆಯಲ್ಲಿ ಬೆಂಗಳೂರಿನ ಗೌರಿಪಾಳ್ಯದ ಜಹೀರ್‌ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಮಧ್ಯರಾತ್ರಿ ಪಾರ್ಟಿ ಭರ್ಜರಿಯಾಗಿ ನಡೆಸಲಾಗುತ್ತಿತ್ತು. ಪಾರ್ಟಿಯಲ್ಲಿ 80ಕ್ಕೂ ಹೆಚ್ಚು ಮಂದಿ ಹೊರಗಿವರು, ಸ್ಥಳೀಯರು ಹಾಗೂ ಕೆಲ ರೌಡಿಗಳು ಪಾಲ್ಗೊಂಡಿದ್ದಾರೆ ಎಂಬುದು ಖಚಿತವಾಗುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸೂಚನೆ ಮೇರೆಗೆ ಡಿವೈಎಸ್ಪಿ ಧರ್ಮೇಂಧರ್‌, ಸಿಪಿಐ ಶಿವಮಾದಯ್ಯ, ಪಿಎಸ್‌ಐ ಸುಪ್ರೀತ್, ವರ್ಷಾ ಸೇರಿದಂತೆ ಪೊಲೀಸರ ತಂಡ ದಿಢೀರ್‌ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿ ಪಾರ್ಟಿಯಲ್ಲಿ ಬಳಕೆಯಾಗುತ್ತಿದ್ದ ಮಾದಕ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

17 ಮಂದಿ ಬಂಧಿತರಿಂದ 157.15 ಗ್ರಾಂನ 17 ಪೀಸ್ (ಉಂಡೆ) ಚರಸ್, 43.24 ಗ್ರಾಂ ಬ್ರೌನ್ ಕಲರ್‌ ಶುಗರ್, 43.24 ಗ್ರಾಂ ಬ್ರೌನ್ ಕಲರ್‌ ಪೌಡರ್‌, ವೈಟ್ ಪೌಡರ್‌ 6.26 ಗ್ರಾಂ, ಲೈಟ್ ಬ್ರೌನ್ ಕಲರ್‌ ಕ್ರೈಸ್ಟಲ್ ಪೌಡರ್‌ 22.54 ಗ್ರಾಂ, 95.70 ಗ್ರಾಂ ಗಾಂಜಾ ಪೌಡರ್‌, 1.4 ಗ್ರಾಂ ಬೀರು, ಹೊಂಡಾ, ಶೈನ್ ಕಾರ್‌ ಸೇರಿದಂತೆ ಇನ್ನಿತರೆ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ರೇವ್ ಪಾರ್ಟಿಯಲ್ಲಿದ್ದ 60ಕ್ಕೂ ಹೆಚ್ಚು ಮಂದಿ ಗಾಂಜಾ, ಡ್ರಗ್ಸ್ (ಮಾದಕ ದ್ರವ್ಯ) ಸೇವಿಸಿದ್ದರು ಎಂಬುದು ವೈದ್ಯಾಧಿಕಾರಿಗಳಾದ ಅರುಣ್ ರಾಟೆ ಮತ್ತು ಲ್ಯಾಬ್ ಟೆಕ್ನಿಷಿಯನ್ ದೊರೆಬಾಬು ಅವರ ಪರಿಶೀಲನಾ ವರದಿಯಿಂದ ದೃಢಪಟ್ಟಿದೆ. ಶ್ವಾನದಳ, ಬೆರಳಚ್ಚು ತಜ್ಞರು, ನುರಿತ ಅಧಿಕಾರಿಗಳ ತಂಡ, ಅರಣ್ಯಾಧಿಕಾರಿಗಳು ಸೇರಿದಂತೆ ನುರಿತ ಪೊಲೀಸ್ ಸಿಬ್ಬಂದಿ ಸಹ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

---

ಹುಟ್ಟುಹಬ್ಬಕ್ಕೆ ಡ್ರಗ್ಸ್‌ ಗಿಫ್ಟ್‌!

ನನ್ನ ಸ್ನೇಹಿತ ಬೆಂಗಳೂರಿನ ಸಮೀರ್‌ ಎಂಬಾತ ಮಾದಕ ವಸ್ತುಗಳನ್ನು ನನ್ನ ಹುಟ್ಟುಹಬ್ಬದ ಪಾರ್ಟಿ ಮಾಡಲು ಉಡುಗೊರೆಯಾಗಿ ನೀಡಿದ್ದ ಎಂದು ಪ್ರಮುಖ ಆರೋಪಿ ಜಹೀರ್‌ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ. ಇಷ್ಟೇ ಅಲ್ಲದೇ, ಪಾರ್ಟಿಗಾಗಿ ಉಮೇರ್‌ ಖಾನ್ ಮೂಲಕ ಗಾಂಜಾ ತರಿಸಲಾಗಿತ್ತು. ಈ ಗಾಂಜಾವನ್ನು ಬೈಕಿನ ಪೆಟ್ರೋಲ್‌ ಟ್ಯಾಂಕ್‌ ಕವರ್‌ನಿಂದ ಹೂವಿನ ಗೊಂಡೆ ಸಮೇತ ಬೀಜ ಮಿಶ್ರಿತ 95.70 ಗ್ರಾಂ ಗಾಂಜಾ ವಶಕ್ಕೆ ಪಡೆದಿದ್ದಾರೆ.