ಸಾರಾಂಶ
ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾ ವಲಸಿಗರನ್ನು ಪತ್ತೆ ಮಾಡಿ ಗಡಿಪಾರು ಮಾಡುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ. ಈಗಾಗಲೇ 200ಕ್ಕೂ ಹೆಚ್ಚು ಅಕ್ರಮ ವಲಸಿಗರನ್ನು ಗಡಿಪಾರು ಮಾಡಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು
ಬೆಂಗಳೂರು: ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾ ವಲಸಿಗರನ್ನು ಪತ್ತೆ ಮಾಡಿ ಗಡಿಪಾರು ಮಾಡುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ. ಈಗಾಗಲೇ 200ಕ್ಕೂ ಹೆಚ್ಚು ಅಕ್ರಮ ವಲಸಿಗರನ್ನು ಗಡಿಪಾರು ಮಾಡಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ವಿದೇಶಿಗರ ಪ್ರಾದೇಶಿಕ ನೋಂದಣಿ ಕಚೇರಿ(ಎಫ್‌ಆರ್‌ಆರ್‌ಒ) ಅಧಿಕಾರಿಗಳು ಅಕ್ರಮ ವಲಸಿಗರನ್ನು ಗುರುತಿಸಿ ಮಾಹಿತಿ ನೀಡುತ್ತಾರೆ. ಅವರನ್ನು ಪತ್ತೆ ಮಾಡಿ ಗಡಿಪಾರು ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ. ಇದು ನಿರಂತರ ಪ್ರಕ್ರಿಯೆಯಾಗಿದ್ದು, ಒಂದು ದಿನದಲ್ಲಿ ಮಾಡಿ ನಿಲ್ಲಿಸಲು ಸಾಧ್ಯವಿಲ್ಲ. ಕಟ್ಟಡ ಕಾರ್ಮಿಕರಾಗಿ ಹೆಚ್ಚಿನ ಜನ ಇದ್ದಾರೆ ಎಂಬ ಆರೋಪವಿದ್ದು, ಅಂಥವರು ಕಂಡುಬಂದರೆ ವಶಕ್ಕೆ ತೆಗೆದುಕೊಂಡು ಗಡಿಪಾರು ಮಾಡುತ್ತೇವೆ ಎಂದು ತಿಳಿಸಿದರು. ಅಕ್ರಮ ನುಸುಳುಕೋರರ ಬಗ್ಗೆ ಮೃದು ಧೋರಣೆ ತೋರುವುದರಿಂದ ಏನು ಉಪಯೋಗ? ಬಾಂಗ್ಲಾ ದೇಶದವರನ್ನು ಕರೆಸಿಕೊಂಡು ಮತ ಹಾಕಿಸಿಕೊಳ್ಳುವಂತಹ ಸ್ಥಿತಿ ಕಾಂಗ್ರೆಸ್ ಪಕ್ಷಕ್ಕೆ ಬಂದಿಲ್ಲ ಎಂದರು.
ಎಫ್‌ಆರ್‌ಆರ್‌ಒ ಅಧಿಕಾರಿಗಳ ಸಹಕಾರದಲ್ಲಿ ಅಕ್ರಮ ವಲಸಿಗರನ್ನು ಪತ್ತೆ ಮಾಡಿ ಗಡಿಪಾರು ಮಾಡಲು ಹಿಂದು-ಮುಂದು ನೋಡುವುದಿಲ್ಲ ಎಂದರು.
ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಬೇಕು ಎಂಬ ಬಾಳೆಹೊನ್ನೂರು ಮಠದ ರಂಭಾಪುರಿ ಸ್ವಾಮೀಜಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸಚಿವರು, ಅವರ ಅಭಿಪ್ರಾಯ ತಿಳಿಸಿದ್ದಾರೆ. ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.