ಇತ್ತೀಚೆಗೆ ಉಪ ಲೋಕಾಯುಕ್ತ ನ್ಯಾಯಾಮೂರ್ತಿ ಬಿ.ವೀರಪ್ಪ ಅವರು ನಾಗಮಂಗಲಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಹಲವು ನ್ಯೂನ್ಯತೆಗಳು ಕಂಡುಬಂದ ಹಿನ್ನೆಲೆಯಲ್ಲಿ ಲಕ್ಷ್ಮೀ ವೆಂಕಟೇಶ್ವರ ಸ್ಟೋನ್ ಕ್ರಷರ್ ಸೇರಿ ೨೨ ಸ್ವಯಂ ಪ್ರೇರಿತ ಪ್ರಕರಣವನ್ನು ಲೋಕಾಯುಕ್ತ ಇಲಾಖೆ ದಾಖಲು ಮಾಡಿದೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಇತ್ತೀಚೆಗೆ ಉಪ ಲೋಕಾಯುಕ್ತ ನ್ಯಾಯಾಮೂರ್ತಿ ಬಿ.ವೀರಪ್ಪ ಅವರು ನಾಗಮಂಗಲಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಹಲವು ನ್ಯೂನ್ಯತೆಗಳು ಕಂಡುಬಂದ ಹಿನ್ನೆಲೆಯಲ್ಲಿ ಲಕ್ಷ್ಮೀ ವೆಂಕಟೇಶ್ವರ ಸ್ಟೋನ್ ಕ್ರಷರ್ ಸೇರಿ ೨೨ ಸ್ವಯಂ ಪ್ರೇರಿತ ಪ್ರಕರಣವನ್ನು ಲೋಕಾಯುಕ್ತ ಇಲಾಖೆ ದಾಖಲು ಮಾಡಿದೆ.ತಾಲೂಕಿನ ಕರಡಹಳ್ಳಿ ಗ್ರಾಮ ವ್ಯಾಪ್ತಿಯಲ್ಲಿ ಶ್ರೀಲಕ್ಷ್ಮೀ ವೆಂಕಟೇಶ್ವರ ಸ್ಟೋನ್ ಕ್ರಷರ್‌ಗೆ ಭೇಟಿ ನೀಡಿದಾಗ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿಯಮಗಳನ್ನು ಪಾಲಿಸದೆ ಕಲ್ಲು ಕ್ವಾರಿಯನ್ನು ನಡೆಸುತ್ತಿರುವುದು ಕಂಡು ಬಂದಿತು. ಗಣಿಗಾರಿಕೆ ನಡೆಸುವ ಸ್ಥಳದಿಂದ ೫೦೦ ಮೀಟರ್ ಅಂತರದಲ್ಲಿ ಯಾವುದೇ ಮನೆಗಳು, ಗ್ರಾಮಗಳು ಇರಬಾರದೆಂಬ ಆದೇಶವಿದ್ದರೂ ಸ್ಟೋನ್ ಕ್ರಷರ್ ನಡೆಸಲು ಕಾನೂನು ಬಾಹಿರವಾಗಿ ಫಾರ್ಮ್-ಸಿ ನೀಡಿರುವುದು ಕಂಡುಬಂದಿದೆ.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ೭ ನಿಯಮಗಳು ಸೇರಿ ಯಾವುದೇ ನಿಯಮಗಳನ್ನು ಕ್ರಷರ್ ಮಾಲೀಕರು ಪಾಲಿಸಿಲ್ಲ. ಮಾಲೀಕರನ್ನು ಕೇಳಿದರೆ ಸ್ಪಷ್ಟ ಉತ್ತರವಿಲ್ಲ. ದಾಖಲೆಗಳನ್ನು ನೀಡಿಲ್ಲ. ಗಣಿ ಮತ್ತು ಭೂ ವಿಜ್ಞಾನ ಕಾಯ್ದೆ ನಿಯಮ ೪೩ ಅನ್ನು ಪಾಲಿಸಿಲ್ಲ. ಕ್ರಷರ್ ವಾಹನಗಳನ್ನು ಜಿಪಿಎಸ್‌ಗೆ ಟ್ಯಾಗ್ ಮಾಡಿಲ್ಲ. ಗಡಿಕಲ್ಲು ಕ್ರಮಬದ್ಧವಾಗಿಲ್ಲ. ಯಾವುದೇ ನಾಮಫಲಕ ಅಳವಡಿಸಿಲ್ಲದಿರುವುದನ್ನು ಪರಿಗಣಿಸಿದ್ದಾರೆ.ಪರವಾನಗಿ ಪಡೆಯದೆ ಹೆಚ್ಚು ಪ್ರದೇಶದಲ್ಲಿ ಗಣಿಗಾರಿಕೆ ನಡೆಸಿ ಅಕ್ರಮವಾಗಿ ಗಣಿ ಸಾಮಗ್ರಿಗಳ ಸಾಗಾಟ ನಡೆಸಿ ರಾಜಧನವನ್ನು ಪಾವತಿಸದೆ ನಿಯಮವನ್ನು ಉಲ್ಲಂಘಿಸಿದವರ ವಿರುದ್ಧ ನೊಟೀಸ್ ನೀಡಿ ಅವರ ವಿರುದ್ಧ ಕ್ರಮ ಕೈಗೊಂಡು ಒಂದು ತಿಂಗಳೊಳಗಾಗಿ ವರದಿ ಸಲ್ಲಿಸುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ, ತಹಸೀಲ್ದಾರ್, ಪರಿಸರ ಅಧಿಕಾರಿ, ಭೂ ದಾಖಲೆಗಳ ಸಹಾಯಕ ನಿರ್ದೇಶಕ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ಲೋಕಾಯುಕ್ತ ನ್ಯಾಯಾಮೂರ್ತಿ ಬಿ.ವೀರಪ್ಪ ಸೂಚಿಸಿದ್ದಾರೆ.
ಅದೇ ರೀತಿ ಪರವಾನಗಿ ಪಡೆಯದೆ ಸರ್ಕಾರಿ ಗೋಮಾಳ ಜಮೀನಿನಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿರುವವರನ್ನು ಗುರುತಿಸಿ ಸಂಬಂಧಪಟ್ಟವರಿಗೆ ನೊಟೀಸ್ ನೀಡಿ ಅಕ್ರಮ ಗಣಿಗಾರಿಕೆ ಸ್ಥಗಿತಗೊಳಿಸಿ ಪೂರಕ ದಾಖಲಾತಿಗಳೊಂದಿಗೆ ಒಂದು ತಿಂಗಳೊಳಗೆ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.೬೨೮೭ ಅರ್ಜಿ ಬಾಕಿ:
ತಾಲೂಕು ಕಚೇರಿಯ ಆರ್‌ಆರ್‌ಟಿ ವಿಭಾಗದಲ್ಲಿ ಆನ್‌ಲೈನಲ್ಲಿ ೩೯೦೦ ಹಾಗೂ ಆಫ್‌ಲೈನ್‌ನಲ್ಲಿ ೨೩೮೭ ಅರ್ಜಿಗಳು ಬಾಕಿ ಇದ್ದು, ಒಟ್ಟು ೬೨೮೭ ಅರ್ಜಿಗಳು ಬಾಕಿ ಇರುವುದು ಕಂಡು ಬಂದಿದೆ.ಕಂದಾಯ ದಾಖಲೆಗಳನ್ನು ಕಡ್ಡಾಯವಾಗಿ ಕಂದಾಯ ನ್ಯಾಯಾಲಯದ ಪ್ರಕರಣಗಳ ಮೇಲ್ವಿಚಾರಣಾ ವ್ಯವಸ್ಥೆಯ ಮೂಲಕ ಮಾತ್ರ ಸ್ವೀಕರಿಸಬೇಕೆಂದು ಸರ್ಕಾರ ಸುತ್ತೋಲೆ ಹೊರಡಿಸಿದರೂ ಈವರೆಗೂ ಜಾರಿಗೆ ತಂದಿಲ್ಲದಿರುವುದು ಕಂಡು ಬಂದಿದೆ. ತಹಸೀಲ್ದಾರ್‌ಗೆ ನೋಟಿಸ್ ಜಾರಿ
ತಾಲೂಕು ಕಚೇರಿಯ ಅಭಿಲೇಖಾಲಯದಲ್ಲಿರಬೇಕಾಗಿದ್ದ ವಿವಿಧ ಗ್ರಾಮಗಳಿಗೆ ಸಂಬಂಧಿಸಿದ ಮೂಲ ಕಡತಗಳ ಎರಡು ಕಟ್ಟುಗಳು (ಆರ್‌ಟಿಸಿ, ಎಂ.ಆರ್, ಆರ್ ಆರ್ ಇಂಡೆಕ್ಸ್, ಖಾತೆ ದಾಖಲೆಗಳು, ಸಾಗುವಳಿ ಚೀಟಿಗಳ ನಕಲಿ ಪತ್ರಗಳು, ಮ್ಯುಟೇಷನ್ ರಿಜಿಸ್ಟರ್‌ಗಳು ೨೦೨೬ ಸೆಪ್ಟೆಂಬರ್ ೧೫ ರಂದು ತಾಲೂಕು ಆಡಳಿತದ ಸಂಕೀರ್ಣದ ಆವರಣದ ಕಸದ ತೊಟ್ಟಿಯಲ್ಲಿ ಪತ್ತೆಯಾಗಿದ್ದವು. ಕಾರಣ ಕೇಳಿ ತಹಸೀಲ್ದಾರ್ ಅವರಿಗೆ ನೊಟೀಸ್ ಜಾರಿ ಮಾಡಿರುವುದಾಗಿ ತಿಳಿಸಿದ್ದಾರೆ. ಯಾರ್‍ಯಾರ ಮೇಲೆ ಸ್ವಯಂ ಪ್ರಕರಣ ದಾಖಲುತಹಸೀಲ್ದಾರ್ ಕಚೇರಿ, ಜಿಲ್ಲಾ ಖಜಾನೆ, ಭೂ ದಾಖಲೆಗಳ ಸಹಾಯಕ ನಿರ್ದೇಶಕ ಕಚೇರಿ, ಲಕ್ಷ್ಮಿ ವೆಂಕಟೇಶ್ವರ್ ಸ್ಟೋನ್ ಕ್ರಷರ್, ಮೀನುಗಾರಿಕೆ ಇಲಾಖೆ, ಮಹಿಳೆಯರ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಬೆಳ್ಳೂರು ನಾಡ ಕಚೇರಿ, ಬೆಳ್ಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬೆಳ್ಳೂರು ಪಟ್ಟಣ ಪಂಚಾಯ್ತಿ, ಬೆಳ್ಳೂರು ಸಮುದಾಯ ಆರೋಗ್ಯ ಕೇಂದ್ರ ಮತ್ತು ೧೪ ಪಿಹೆಚ್‌ಸಿ, ನೆಲ್ಲಿಗೆರೆ ಗ್ರಾಮ ಪಂಚಾಯ್ತಿ, ತಾಲೂಕು ಪಂಚಾಯ್ತಿ, ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ವಿದ್ಯಾರ್ಥಿ ನಿಲಯ, ಸಹಾಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಸಹಾಯಕ ಕಾರ್ಯಪಾಲಕ ಅಭಿಯಂತರರ ಕಚೇರಿ, ಪುರಸಭೆ, ಬುಡುಬುಡುಕೆ ಕಾಲೋನಿ ಅಂಗನವಾಡಿ ಕೇಂದ್ರ ಹಾಗೂ ಎಪಿಎಂಸಿ ವಿರುದ್ಧ ಸ್ವಯಂ ಪ್ರಕರಣ ದಾಖಲಿಸಿಕೊಂಡಿದ್ದಾರೆ.