ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಮನೆಗೆ ಭೋಗ್ಯ ಕೊಡಿಸುವ ನೆಪದಲ್ಲಿ ಕೋಟ್ಯಂತರ ರು. ವಂಚಿಸಿದ ಆರೋಪದ ಮೇರೆಗೆ ಖಾಸಗಿ ಕಂಪನಿಯ ಮೂವರು ಏಜೆಂಟ್‌ಗಳನ್ನು ಎಲೆಕ್ಟ್ರಾನಿಕ್ ಸಿಟಿ ಠಾಣೆ ಪೊಲೀಸರು ಬಂಧಿಸಿದ್ದಾರೆ.ವೈಟ್‌ಫೀಲ್ಡ್ ನಿವಾಸಿಗಳಾದ ರಮಣ, ನವೀನ್ ಹಾಗೂ ಸುಧೀರ್ ಬಂಧಿತರಾಗಿದ್ದು, ಈ ಕೃತ್ಯದಲ್ಲಿ ದುಬೈನಲ್ಲಿ ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ವಿವೇಕ್ ಕೇಶವನ್ ಸೇರಿ ಇತರರ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಹೇಗೆ ವಂಚನೆ?:ಮನೆ ಭೋಗ್ಯ ಕೊಡುವ ವ್ಯವಹಾರಕ್ಕೆ ಕೆಟಿನಾ ಹೋಮ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಹೆಸರಿನ ಕಂಪನಿಯನ್ನು ವಿವೇಕ್ ಸ್ಥಾಪಿಸಿದ್ದು, ಬಾಣಸವಾಡಿ, ಮಾರತ್ತಹಳ್ಳಿ, ವೈಟ್‌ಫೀಲ್ಡ್ ಹಾಗೂ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಆ ಕಂಪನಿಯ ಶಾಖೆಗಳಿದ್ದವು. ಕಟ್ಟಡದ ಮಾಲೀಕರಿಂದ ಕಡಿಮೆ ಬೆಲೆಗೆ ಮನೆ ಭೋಗ್ಯಕ್ಕೆ ಪಡೆದು ಬಳಿಕ ತಮ್ಮ ಕಂಪನಿ ಮೂಲಕ ಸಾರ್ವಜನಿಕರಿಗೆ ಆ ಮನೆಗಳನ್ನು ಆರೋಪಿಗಳು ಬಾಡಿಗೆಗೆ ಕೊಡುತ್ತಿದ್ದರು. ಇಲ್ಲಿ ಮನೆ ಕಟ್ಟಡದ ಮಾಲೀಕರು ಹಾಗೂ ಬಾಡಿಗೆದಾರರ ಮಧ್ಯೆ ಮಧ್ಯವರ್ತಿಗಳಾಗಿ ಈ ಕಂಪನಿ ಕಾರ್ಯನಿರ್ವಹಿಸುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಕೊರೋನಾ ತಂದ ಸಂಕಟಇದೇ ರೀತಿ ನಗರದ ಹಲವು ಕಡೆ ನೂರಾರು ಮನೆಗಳನ್ನು ಕಂಪನಿ ಭೋಗ್ಯಕ್ಕೆ ಪಡೆದಿತ್ತು. ಐದಾರು ವರ್ಷಗಳಿಂದ ಉತ್ತಮ ವಹಿವಾಟು ನಡೆಸಿ ಗ್ರಾಹಕರ ವಿಶ್ವಾಸವನ್ನು ಆರೋಪಿಗಳು ಸಂಪಾದಿಸಿದ್ದರು. ಆದರೆ ಕೊರೋನಾ ಕಾಲದಲ್ಲಿ ಕಂಪನಿ ಆರ್ಥಿಕ ವಹಿವಾಟಿಗೆ ಸಂಕಷ್ಟ ಎದುರಾಯಿತು. ಅದೇ ವೇಳೆ ತೆರಿಗೆ ವಂಚನೆ ಆರೋಪದ ಮೇರೆಗೆ ಕೆಟಿನಾ ಕಂಪನಿ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿ ಪ್ರಕರಣ ದಾಖಲಿಸಿತು. ಅಲ್ಲದೆ ಆ ಕಂಪನಿಯ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡಿತು. ಇದರಿಂದ ಹಣಕಾಸು ವಹಿವಾಟಿಲ್ಲದೆ ಆರೋಪಿಗಳು ತೊಂದರೆಗೆ ಸಿಲುಕಿದರು. ಆಗ ಮನೆ ಮಾಲೀಕರಿಗೆ ಭೋಗ್ಯದ ಹಣ ಪಾವತಿಸಲಾಗದೆ ಆರೋಪಿಗಳು ವಂಚಿಸಿದ್ದಾರೆ. ಇದೇ ರೀತಿ ಎಲೆಕ್ಟ್ರಾನಿಕ್ ಸಿಟಿ, ಸಂಪಿಗೆಹಳ್ಳಿ, ವೈಟ್ ಫೀಲ್ಡ್ ಹಾಗೂ ಬಾಣಸವಾಡಿ ಪೊಲೀಸ್ ಠಾಣೆಗಳಲ್ಲಿ ವಂಚನೆ ಪ್ರಕರಣಗಳು ದಾಖಲಾಗಿವೆ ಎಂದು ಮೂಲಗಳು ಹೇಳಿವೆ.
25 ಕೋಟಿ ರು. ವಂಚನೆ:ಭೋಗ್ಯದ ಹೆಸರಿನಲ್ಲಿ ಸುಮಾರು ಜನರಿಗೆ 25 ಕೋಟಿ ರು. ಅಧಿಕ ಹಣ ವಂಚಿಸಿರುವ ಬಗ್ಗೆ ತನಿಖೆಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ತನಿಖೆ ನಡೆದಿದ್ದು, ವಂಚನೆ ಮೊತ್ತ ಸಹ ಅಧಿಕವಾಗಬಹುದು ಎಂದು ಮೂಲಗಳು ಹೇಳಿವೆ.
ಗಣ್ಯರ ಜತೆ ಫೋಟೋ:ಪ್ರಮುಖ ರಾಜಕಾರಣಿಗಳು ಹಾಗೂ ಚಲನಚಿತ್ರ ನಟ-ನಟಿಯರ ಜತೆ ಕಂಪನಿಯ ಮಾಲೀಕ ವಿವೇಕ್ ಪೋಟೋ ತೆಗೆಸಿಕೊಳ್ಳುತ್ತಿದ್ದ. ಗಣ್ಯರ ಜೊತೆ ಇರುವ ಪೋಟೋಗಳನ್ನು ಬಳಸಿಕೊಂಡು ತಾನೊಬ್ಬ ಪ್ರಭಾವಿ ವ್ಯಕ್ತಿ ಎಂದು ಆತ ಬಿಂಬಿಸಿಕೊಳ್ಳುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಸಿಐಡಿಗೆ ವಂಚನೆ ಪ್ರಕರಣ ವರ್ಗ?:ಬಹುಕೋಟಿ ವಂಚನೆ ಪ್ರಕರಣದ ತನಿಖೆಯನ್ನು ರಾಜ್ಯ ಅಪರಾಧ ತನಿಖಾ ಇಲಾಖೆಗೆ (ಸಿಐಡಿ) ವರ್ಗವಾಗುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.
ವಂಚನೆ ಜಾಲವು ವಿಸ್ತಾರವಾಗಿದ್ದು, ಪ್ರಮುಖ ಆರೋಪಿ ವಿದೇಶಕ್ಕೆ ಪರಾರಿಯಾಗಿದ್ದಾನೆ. ಹೀಗಾಗಿ ಸಿಐಡಿಗೆ ಪ್ರಕರಣ ವರ್ಗಾವಣೆ ಆಗಲಿದೆ. ಅಲ್ಲದೆ 10 ಕೋಟಿ ರು. ಅಧಿಕ ಮೊತ್ತದ ವಂಚನೆ ಪ್ರಕರಣಗಳು ನಿಯಮಾನುಸಾರ ಸಿಐಡಿ ಗೆ ತನಿಖೆ ಬರಲಿವೆ ಎಂದು ತಿಳಿದು ಬಂದಿದೆ.