ಸಾರಾಂಶ
ಬೆಂಗಳೂರು : ಕ್ರಿಪ್ಟೋ ಕರೆನ್ಸಿ ಮತ್ತು ಷೇರುಗಳಲ್ಲಿ ಹೂಡಿಕೆ ಮಾಡಿದರೆ ಅಧಿಕ ಲಾಭ ಕೊಡಿಸುವ ಅಮಿಷವೊಡ್ಡಿ ₹25 ಲಕ್ಷ ವಂಚಿಸಿದ ಆರೋಪದಡಿ ಕೇಂದ್ರ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಂಚನೆಗೊಳಗಾದ ನಗರ್ತಪೇಟೆ ನಿವಾಸಿ ಆರ್.ಚೇತನ್ ಕುಮಾರ್ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಚೇತನ್ ಕುಮಾರ್ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಕಳೆದ ಡಿಸೆಂಬರ್‌ನಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ‘ಪ್ರಾಫಿಟಬಲ್ ಟ್ರೇಟರ್’ ಹೆಸರಿನ ಐಡಿ ಮುಖಾಂತರ ಅಪರಿಚಿತ ವ್ಯಕ್ತಿ ಚೇತನ್ ಕುಮಾರ್ ಅವರನ್ನು ಸಂಪರ್ಕಿಸಿದ್ದಾನೆ. ಕ್ರಿಪ್ಟೋ ಕರೆನ್ಸಿ ಮತ್ತು ಷೇರುಗಳಲ್ಲಿ ಹೂಡಿಕೆ ಮಾಡಿದರೆ ಅಧಿಕ ಲಾಭ ಕೊಡಿಸುವುದಾಗಿ ಆಮಿಷವೊಡ್ಡಿದ್ದಾನೆ. ಈತನ ಮಾತು ನಂಬಿದ ಚೇತನ್ ದುಷ್ಕರ್ಮಿ ನೀಡಿದ ವಿವಿಧ ಬ್ಯಾಂಕ್ ಖಾತೆಗಳಿಗೆ ವಿವಿಧ ಹಂತಗಳಲ್ಲಿ ಒಟ್ಟು ₹49.96 ಲಕ್ಷ ಹಣ ವರ್ಗಾಯಿಸಿದ್ದಾರೆ. ಕೆಲ ದಿನಗಳ ಬಳಿಕ ಲಾಭದ ರೂಪದಲ್ಲಿ ಚೇತನ್‌ಗೆ ₹24.83 ಲಕ್ಷ ವಾಪಾಸ್ ನೀಡಿದ್ದಾನೆ. ಉಳಿದ ₹25 ಲಕ್ಷ ವಾಪಾಸ್ ನೀಡದೆ, ಇನ್‌ಸ್ಟಾಗ್ರಾಮ್ ಖಾತೆಯನ್ನೇ ಡಿಲೀಟ್ ಮಾಡಿ ವಂಚಿಸಿದ್ದಾನೆ.