ಸೈಬರ್‌ ವಂಚಕ ಬಲೆಗೆ ಬಿದ್ದು 25 ಲಕ್ಷ ರು. ಕಳೆದುಕೊಂಡ ಎಂಜಿನಿಯರ್‌

| Published : Nov 06 2024, 01:16 AM IST

ಸೈಬರ್‌ ವಂಚಕ ಬಲೆಗೆ ಬಿದ್ದು 25 ಲಕ್ಷ ರು. ಕಳೆದುಕೊಂಡ ಎಂಜಿನಿಯರ್‌
Share this Article
  • FB
  • TW
  • Linkdin
  • Email

ಸಾರಾಂಶ

ಸಾಮಾಜಿಕ ಜಾಲತಾಣದಲ್ಲಿ ಸಂಪರ್ಕಿಸಿದ ಸೈಬರ್‌ ವಂಚಕರ ಆಮಿಷಕ್ಕೆ ಒಳಗಾಗಿ ಸಾಫ್ಟ್‌ವೇರ್‌ ಎಂಜಿನಿಯರೊಬ್ಬರು ಬರೋಬ್ಬರಿ ₹25 ಲಕ್ಷ ಕಳೆದುಕೊಂಡಿರುವ ಘಟನೆ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಸಾಮಾಜಿಕ ಜಾಲತಾಣದಲ್ಲಿ ಸಂಪರ್ಕಿಸಿದ ಸೈಬರ್‌ ವಂಚಕರ ಆಮಿಷಕ್ಕೆ ಒಳಗಾಗಿ ಸಾಫ್ಟ್‌ವೇರ್‌ ಎಂಜಿನಿಯರೊಬ್ಬರು ಬರೋಬ್ಬರಿ ₹25 ಲಕ್ಷ ಕಳೆದುಕೊಂಡಿರುವ ಘಟನೆ ನಡೆದಿದೆ.

ರಿಚ್ಮಂಡ್‌ ಟೌನ್‌ ನಿವಾಸಿ ಎಚ್‌.ಕೆ.ಅನುರಾಗ್‌ (32) ವಂಚನೆಗೆ ಒಳಗಾದ ಟೆಕಿ. ಇವರು ನೀಡಿದ ದೂರಿನ ಮೇರೆಗೆ ಕೇಂದ್ರ ವಿಭಾಗದ ಸೈಬರ್‌ ಕ್ರೈಂ ಠಾಣೆ ಪೊಲೀಸರು ಅಪರಿಚಿತರ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಪ್ರಕರಣ?:

ವೃತ್ತಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್‌ ಆಗಿರುವ ದೂರುದಾರ ಅನುರಾಗ್‌ ನಗರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ಅಪರಿಚಿತ ವ್ಯಕ್ತಿಯೊಬ್ಬ ವಾಟ್ಸಾಪ್‌ ಮುಖಾಂತರ ಅನುರಾಗ್‌ ಅವರನ್ನು ಸಂಪರ್ಕಿಸಿದ್ದು, ಗೂಗಲ್‌ ರಿವೀವ್‌ ನೀಡಿದರೆ ಹಣ ಕೊಡುವುದಾಗಿ ಆಮಿಷವೊಡ್ಡಿದ್ದಾನೆ.

ಇದಕ್ಕೆ ಅನುರಾಗ್‌ ಒಪ್ಪಿದಾಗ ‘ಎ 26 ಗೂಗಲ್‌ ವರ್ಕಿಂಗ್‌ ಗ್ರೂಪ್‌ ಡಿಜಿಟೆಲ್‌ ಮಾರ್ಕೆಟ್‌’ ಎಂಬ ಟೆಲಿಗ್ರಾಂ ಗ್ರೂಪ್‌ಗೆ ಸೇರಿಸಿದ್ದಾನೆ. ಬಳಿಕ ಎಕನಾಮಿ ಟಾಸ್ಕ್ ಹೆಸರಿನಲ್ಲಿ ಕೆಲವು ಟಾಸ್ಕ್‌ಗಳನ್ನು ನೀಡಿದ್ದಾನೆ. ಬಳಿಕ ಈ ಟಾಸ್ಕ್‌ಗಳಲ್ಲಿ ಹಣ ಹೂಡಿಕೆ ಮಾಡಿದರೆ ಅಧಿಕ ಲಾಭ ಗಳಿಸಬಹುದು ಎಂದು ಅನುರಾಗ್‌ ಅವರನ್ನು ನಂಬಿಸಿದ್ದಾನೆ.

ವಿವಿಧ ಹಂತಗಳಲ್ಲಿ ₹25 ಲಕ್ಷ ವರ್ಗಾ:

ಬಳಿಕ ಅನುರಾಗ್‌ ಅಪರಿಚಿತ ವ್ಯಕ್ತಿ ನೀಡಿದ ಬ್ಯಾಂಕ್‌ ಖಾತೆಗೆ ಹಣ ವರ್ಗಾಯಿಸಿದ್ದಾರೆ. ಬಳಿಕ ಅಪರಿಚಿತ ವ್ಯಕ್ತಿಯು ನೀವು ತಪ್ಪನ್ನು ಮಾಡಿದ್ದೀರಾ. ನೀವು ಹೂಡಿಕೆ ಮಾಡಿರುವ ಹಣವನ್ನು ವಾಪಾಸ್‌ ಪಡೆಯಲು ಮತ್ತಷ್ಟು ಹಣವನ್ನು ವರ್ಗಾಯಿಸಬೇಕು ಎಂದಿದ್ದಾನೆ. ಅದರಂತೆ ಅನುರಾಗ್‌ ಮತ್ತಷ್ಟು ಹಣ ವರ್ಗಾಯಿಸಿದ್ದಾರೆ. ಬಳಿಕ ನಿಮ್ಮ ಕ್ರೆಡಿಟ್‌ ಸ್ಕೂರ್‌ ಹೆಚ್ಚು ಮಾಡಲು ಮತ್ತಷ್ಟು ಹಣ ವರ್ಗಾಯಿಸುವಂತೆ ಕೇಳಿದ್ದಾನೆ. ಅಪರಿಚಿತ ಹೇಳಿದಂತೆ ಆತ ನೀಡಿದ ವಿವಿಧ ಬ್ಯಾಂಕ್‌ ಖಾತೆಗಳಿಗೆ ವಿವಿಧ ಹಂತಗಳಲ್ಲಿ ಒಟ್ಟು ₹25 ಲಕ್ಷ ವರ್ಗಾಯಿಸಿದ್ದಾರೆ.

ಬಳಿಕ ದುಷ್ಕರ್ಮಿಯು ಸಂಪರ್ಕ ಕಡಿದುಕೊಂಡಿದ್ದು, ಅನುರಾಗ್‌ಗೆ ಯಾವುದೇ ಹಣ ನೀಡದೆ ವಂಚಿಸಿದ್ದಾನೆ. ಬಳಿಕ ಅನುರಾಗ್‌ ತಾನು ಸೈಬರ್‌ ವಂಚಕರ ಬಲೆಗೆ ಬಿದ್ದು ವಂಚನೆಗೆ ಒಳಗಾಗಿರುವುದು ಅರಿವಿಗೆ ಬಂದಿದೆ. ನಂತರ ಕೇಂದ್ರ ವಿಭಾಗದ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಸೈಬರ್‌ ವಂಚಕರ ಪತ್ತೆಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.