ಪ್ರಜ್ವಲ್‌ ವಿರುದ್ಧ 2ನೇ ರೇಪ್‌ ಕೇಸ್‌

| Published : May 08 2024, 01:30 AM IST

ಸಾರಾಂಶ

ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧ ಸಿಐಡಿ ಪೊಲೀಸ್‌ ಠಾಣೆಯಲ್ಲಿ ಮತ್ತೊಂದು ಅತ್ಯಾಚಾರ ಆರೋಪದ ಪ್ರಕರಣ ದಾಖಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧ ಸಿಐಡಿ ಪೊಲೀಸ್‌ ಠಾಣೆಯಲ್ಲಿ ಮತ್ತೊಂದು ಅತ್ಯಾಚಾರ ಆರೋಪದ ಪ್ರಕರಣ ದಾಖಲಾಗಿದೆ.

ಈ ಮೂಲಕ ಪ್ರಜ್ವಲ್‌ ವಿರುದ್ಧ ಒಟ್ಟು ಮೂರು ಪ್ರಕರಣಗಳು ದಾಖಲಾದಂತಾಗಿದೆ.

ಅಪಹರಣದಿಂದ ರಕ್ಷಿಸಲಾಗಿರುವ ಮಹಿಳೆ ಎಸ್ಐಟಿ ವಿಚಾರಣೆ ವೇಳೆ ಶಾಸಕ ಎಚ್‌.ಡಿ.ರೇವಣ್ಣ ತನ್ನ ಮೇಲೆ ಯಾವುದೇ ಲೈಂಗಿಕ ದೌರ್ಜನ್ಯ ನಡೆಸಿಲ್ಲ. ಆದರೆ, ಅವರ ಪುತ್ರ ಸಂಸದ ಪ್ರಜ್ವಲ್‌ ರೇವಣ್ಣ ತನ್ನನ್ನು ಬೆದರಿಸಿ ಅತ್ಯಾಚಾರ ಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಈ ಸಂಬಂಧ ಸಿಐಡಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಈ ದೂರಿನ ಮೇರೆಗೆ ಪ್ರಜ್ವಲ್‌ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಶೀಘ್ರವೇ ಸಿಆರ್‌ಪಿಸಿ 164 ಅಡಿ ಹೇಳಿಕೆ ದಾಖಲು:

ತನ್ನ ಮೇಲೆ ನಡೆದಿರುವ ಅತ್ಯಾಚಾರದ ಬಗ್ಗೆ ನ್ಯಾಯಾಧೀಶರ ಎದುರು ಹೇಳಿಕೆ ನೀಡಲು ಸಂತ್ರಸ್ತೆ ಒಪ್ಪಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಎಸ್‌ಐಟಿ ಅಧಿಕಾರಿಗಳು ಶೀಘ್ರದಲ್ಲೇ ಆಕೆಯನ್ನು ನ್ಯಾಯಾಧೀಶರ ಎದುರು ಹಾಜರುಪಡಿಸಿ ಸಿಆರ್‌ಪಿಸಿ ಸೆಕ್ಷನ್‌ 164 ಅಡಿ ಹೇಳಿಕೆ ದಾಖಲಿಸಲು ಸಿದ್ಧತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಈ ಸಂತ್ರಸ್ತೆಯನ್ನು ಅಪಹರಣ ಮಾಡಿದ ಆರೋಪದಡಿ ಈಗಾಗಲೇ ಎಚ್‌.ಡಿ.ರೇವಣ್ಣ ಮತ್ತು ಸತೀಶ್‌ ಬಾಬು ಎಂಬುವವರನ್ನು ಎಸ್ಐಟಿ ಬಂಧಿಸಿ ವಿಚಾರಣೆಗೆ ಒಳಪಡಿಸಿದೆ. ಇದೀಗ ಸಂತ್ರಸ್ತೆ ನೀಡಿದ ಹೇಳಿಕೆ ಆಧರಿಸಿ ಸಂಸದ ಪ್ರಜ್ವಲ್‌ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ. ಇದರಿಂದ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಪ್ರಜ್ವಲ್‌ಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ.