ಹಳೇ ಪ್ರಕರಣದಲ್ಲಿ ಕೋರ್ಟ್‌ಗೆಬಾರದ 3 ರೌಡಿಗಳು ಜೈಲಿಗೆ

| Published : Jan 25 2024, 02:01 AM IST

ಸಾರಾಂಶ

ಕೊಲೆ, ಕೊಲೆ ಯತ್ನ, ಡಕಾಯಿತಿ ಪ್ರಕರಣದಲ್ಲಿ ಕೋರ್ಟ್‌ಗೆ ಹಾಜರಾದ ಮೂವರು ರೌಡಿಗಳನ್ನು ಬೆಂಗಳೂರು ಪೊಲೀಸರು ಜೈಲಿಗೆ ಅಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಹಳೇ ಪ್ರಕರಣಗಳಲ್ಲಿ ನ್ಯಾಯಾಲಯ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಕುಖ್ಯಾತ ಮೂವರು ರೌಡಿಗಳು ಮತ್ತೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾರೆ.

ವಿವೇಕನಗರದ ರೌಡಿ ಮುತ್ತುರಾಜ್‌ ಅಲಿಯಾಸ್‌ ಅಮರೇನ್‌, ಪೀಣ್ಯದ ರವಿಕುಮಾರ್ ಹಾಗೂ ಮ್ಯಾಥ್ಯೂ ಬಂಧಿತರಾಗಿದ್ದು, ಈ ಮೂವರ ವಿರುದ್ಧ ನ್ಯಾಯಾಲಯಗಳು ಪ್ರತ್ಯೇಕವಾಗಿ ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಿದ್ದವು. ಈ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು, ಆರೋಪಿಗಳನ್ನು ಪತ್ತೆ ಹಚ್ಚಿ ಪತ್ತೆ ಹಚ್ಚಿ ಜೈಲಿಗೆ ಅಟ್ಟಿದ್ದಾರೆ.

ವಿವೇಕನಗರ ರೌಡಿ ಮುತ್ತುರಾಜ್ ಮೇಲೆ ಎರಡು ಕೊಲೆ, ನಾಲ್ಕು ಕೊಲೆ ಯತ್ನ, 1 ಹಲ್ಲೆ ಪ್ರಕರಣ, 2 ಎನ್‌ಡಿಪಿಎಸ್‌ ಹಾಗೂ ಮೂರು ದರೋಡೆ ಸೇರಿದಂತೆ ಒಟ್ಟು 13 ಪ್ರಕರಣಗಳು ದಾಖಲಾಗಿದ್ದವು. ಅವುಗಳಲ್ಲಿ 8 ಪ್ರಕರಣಗಳು ವಿಚಾರಣಾ ಹಂತದಲ್ಲಿದ್ದು, ಈತ 6 ಪ್ರಕರಣಗಳಲ್ಲಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ.

ಅದೇ ರೀತಿ ಆರ್‌.ಆರ್‌.ನಗರ ಠಾಣೆ ರೌಡಿ ಲೋಕೇಶ್ ಅಲಿಯಾಸ್‌ ಮುಲಾಮನ ಸಹಚರ ರವಿಕುಮಾರ್ ವಿರುದ್ಧ ಕೊಲೆ, ಹಲ್ಲೆ, ಕೊಲೆ ಯತ್ನ ಹಾಗೂ ದರೋಡೆ ಸೇರಿದಂತೆ ನಾಲ್ಕು ಪ್ರಕರಣಗಳು ದಾಖಲಾಗಿದ್ದವು. ಇನ್ನು ವಿವೇಕನಗರದ ರೌಡಿ ಜಾರ್ಜ್ ಅಲಿಯಾಸ್ ಮೈಕಲ್ ಜಾರ್ಜ್ ಸಹಚರ ರಘುವರನ್ ಅಲಿಯಾಸ್ ಮ್ಯಾಥ್ಯೂ ಮೇಲೆ ಎರಡು ಪ್ರಕರಣಗಳು ದಾಖಲಾಗಿದ್ದವು. ಕಳೆದ ನಾಲ್ಕು ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಆತ ತಲೆಮರೆಸಿಕೊಂಡಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.