ಶಿಕ್ಷಕರ ಕ್ಷೇತ್ರದ ಚುನಾವಣೆಗೆ 4 ದಿನ ಮದ್ಯ ನಿಷೇಧ: ಹೋಟೆಲ್‌ಗಳ ಬೇಸರ

| Published : Feb 11 2024, 01:48 AM IST / Updated: Feb 11 2024, 01:15 PM IST

liquor ban
ಶಿಕ್ಷಕರ ಕ್ಷೇತ್ರದ ಚುನಾವಣೆಗೆ 4 ದಿನ ಮದ್ಯ ನಿಷೇಧ: ಹೋಟೆಲ್‌ಗಳ ಬೇಸರ
Share this Article
  • FB
  • TW
  • Linkdin
  • Email

ಸಾರಾಂಶ

ಶಿಕ್ಷಕರ ಕ್ಷೇತ್ರದ ಚುನಾವಣೆಗೆ 4 ದಿನ ಮದ್ಯ ನಿಷೇಧ ಮಾಡಿರುವುದಕ್ಕೆ ಬೆಂಗಳೂರು ಹೋಟೆಲ್‌ ಸಂಘ ಆಕ್ಷೇಪಣೆ ವ್ಯಕ್ತಪಡಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ನಡೆಯಲಿರುವ ಉಪ ಚುನಾವಣೆ ಹಿನ್ನೆಲೆಯಲ್ಲಿ ಫೆ.14ರ ಸಂಜೆಯಿಂದ 17ರ ಬೆಳಗ್ಗೆ ಕ್ಷೇತ್ರದ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಿಸಿ ಆದೇಶ ಹೊರಡಿಸಿರುವುದಕ್ಕೆ ಬಾರ್ ಮತ್ತು ಹೋಟೆಲ್‌ ಮಾಲೀಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೇವಲ 16 ಸಾವಿರ ಮತದಾರರಿರುವ ಶಿಕ್ಷಕರ ಕ್ಷೇತ್ರಕ್ಕೆ ನಡೆಯಲಿರುವ ಉಪ ಚುನಾವಣೆಗೆ ನಾಲ್ಕು ದಿವಸ ಮದ್ಯ ಮಾರಾಟ ನಿಷೇಧಿಸಿ ಆದೇಶ ಹೊರಡಿಸುವ ಅಗತ್ಯವಿರಲಿಲ್ಲ. 

ಸುಶಿಕ್ಷಿತ ಮತದಾರರು ಇರುವುದರಿಂದ ಯಾವುದೇ ಅಹಿತಕರ ಘಟನೆ ನಡೆಯುವ ಸಾಧ್ಯತೆಯಿಲ್ಲ. ಆದ್ದರಿಂದ ಈ ಆದೇಶವನ್ನು ತಕ್ಷಣ ವಾಪಸ್‌ ಪಡೆಯಬೇಕು ಎಂದು ಬಾರ್ ಮತ್ತು ಹೋಟೆಲ್‌ ಮಾಲೀಕರು ಆಗ್ರಹಿಸಿದ್ದಾರೆ.

ಈ ಬಗ್ಗೆ ಕೆಲವು ಬಾರ್‌ ಮಾಲೀಕರು ಪ್ರತಿಕ್ರಿಯಿಸಿದ್ದು, ಈ ಆದೇಶದಿಂದ ಬಹಳ ಬೇಸರವಾಗಿದೆ. 4 ದಿವಸ ಮದ್ಯ ಮಾರಾಟ ಸ್ಥಗಿತ ಮಾಡುವುದರಿಂದ ಬೆಂಗಳೂರೊಂದರಲ್ಲೇ ಸುಮಾರು ₹300 ಕೊಟಿ ರಾಜಸ್ವ ಸಂಗ್ರಹ ನಷ್ಟ ಆಗುತ್ತದೆ. ಸರ್ಕಾರ ಈ ಬಗ್ಗೆ ಚಿಂತನೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಬೃಹತ್‌ ಬೆಂಗಳೂರು ಹೋಟೆಲ್‌ಗಳ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಮಾತನಾಡಿ, ಕೇವಲ 16 ಸಾವಿರ ಮತದಾರರಿರುವ ಶಿಕ್ಷಕರ ಕ್ಷೇತ್ರಕ್ಕೆ ಫೆ.16ರಂದು ಚುನಾವಣೆ ನಡೆಯುತ್ತಿದೆ. 

ಆದರೂ 14ರಿಂದ 17ರವರೆಗೂ ಮದ್ಯ ಮಾರಾಟ ನಿಷೇಧಿಸಿದ್ದಾರೆ. ಇದು ಸಂಪೂರ್ಣ ಅವೈಜ್ಞಾನಿಕವಾಗಿದೆ. ವಿಶೇಷವಾಗಿ ಫೆ.14ರಂದು ಪ್ರೇಮಿಗಳ ದಿನಾಚರಣೆ ಇದೆ. ಇದಕ್ಕಾಗಿ ಈಗಾಗಲೇ ಎಲ್ಲ ಹೋಟೆಲ್‌ಗಳಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ. 

ಮದ್ಯ ಮಾರಾಟ ನಿಷೇಧ ಮಾಡಿರುವುದರಿಂದ ₹450 ಕೋಟಿ ವ್ಯವಹಾರ ಸ್ಥಗಿತವಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.