ಷೇರು ವ್ಯಾಪಾರ ಹೆಸರಲ್ಲಿ ₹44.72 ಲಕ್ಷ ವಂಚನೆ

| Published : Nov 05 2024, 01:32 AM IST

ಸಾರಾಂಶ

ಸೈಬರ್‌ ವಂಚಕರು ಷೇರು ವ್ಯಾಪಾರದ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬರನ್ನು ಸಂಪರ್ಕಿಸಿ ಅಧಿಕ ಲಾಭದ ಆಮಿಷವೊಡ್ಡಿ ಹೂಡಿಕೆ ನೆಪದಲ್ಲಿ ವಿವಿಧ ಹಂತಗಳಲ್ಲಿ ₹44.72 ಲಕ್ಷ ಪಡೆದು ವಂಚಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಸೈಬರ್‌ ವಂಚಕರು ಷೇರು ವ್ಯಾಪಾರದ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬರನ್ನು ಸಂಪರ್ಕಿಸಿ ಅಧಿಕ ಲಾಭದ ಆಮಿಷವೊಡ್ಡಿ ಹೂಡಿಕೆ ನೆಪದಲ್ಲಿ ವಿವಿಧ ಹಂತಗಳಲ್ಲಿ ₹44.72 ಲಕ್ಷ ಪಡೆದು ವಂಚಿಸಿದ್ದಾರೆ.

ಮಲ್ಲೇಶ್ವರ ನಿವಾಸಿ ಉಮಾಪತಿ ಬಸಣ್ಣ ರಡ್ಡೇರ್‌ ವಂಚನೆಗೆ ಒಳಗಾದವರು. ಇವರು ನೀಡಿದ ದೂರಿನ ಮೇರೆಗೆ ಕೇಂದ್ರ ವಿಭಾಗದ ಸೈಬರ್‌ ಕ್ರೈಂ ಠಾಣೆ ಪೊಲೀಸರು ಅಪರಿಚಿತರ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಎಫ್‌ಐಆರ್‌ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಪ್ರಕರಣ?: ಕಳೆದ ಸೆಪ್ಟೆಂಬರ್‌ನಲ್ಲಿ ಜೆರೋಧಾ ಟ್ರೇಡಿಂಗ್‌ ಕಂಪನಿ ಪ್ರತಿನಿಧಿ ಎಂದು ಹೇಳಿಕೊಂಡು ಅಪರಿಚಿತರು ಮಾರ್ಕೆಟ್‌ ಮಾಸ್ಟರ್‌ ಎಂಬ ವಾಟ್ಸಾಪ್‌ ಗ್ರೂಪ್‌ನಲ್ಲಿ ದೂರುದಾರ ಉಮಾಪತಿ ಅವರನ್ನು ಸಂಪರ್ಕಿಸಿದ್ದಾರೆ. ಷೇರು ವ್ಯಾಪಾರದ ಬಗ್ಗೆ ಮಾಹಿತಿ ನೀಡಿದ್ದು, ಷೇರುಗಳಲ್ಲಿ ಹೂಡಿಕೆ ಮಾಡಿದರೆ ಅಧಿಕ ಲಾಭ ಗಳಿಸುವ ಆಮಿಷವೊಡ್ಡಿದ್ದಾರೆ. ಸಣ್ಣ ಮತ್ತು ಮಧ್ಯಮ ಕಂಪನಿಗಳ ಷೇರು ಖರೀದಿಸಿ ಹಾಗೂ ಮಾರಾಟ ಮಾಡುವ ಸಂಬಂಧ ಓವರ್‌ ಟ್ರೇಡ್‌ ಕೌಂಟರ್‌(ಒಟಿಸಿ) ಖಾತೆ ತೆರೆದು, ಆ ಖಾತೆಯಲ್ಲಿ ಷೇರು ಟ್ರೇಡಿಂಗ್‌ ಮಾಡುವಂತೆ ಸೂಚಿಸಿ ವಾಟ್ಸಾಪ್‌ ಮುಖಾಂತರ ಆ್ಯಪ್‌ವೊಂದರ ಲಿಂಕ್‌ ಕಳುಹಿಸಿದ್ದಾರೆ. ಒಟಿಸಿ ಖಾತೆಯಲ್ಲಿ ಷೇರುಗಳ ವ್ಯಾಪಾರ ಮತ್ತು ಹೂಡಿಕೆ ಮಾಡುವ ಬಗ್ಗೆ ಮಾಹಿತಿ ನೀಡಿದ್ದಾರೆ.

ವಿವಿಧ ಹಂತಗಳಲ್ಲಿ ₹44.72 ಲಕ್ಷ ವರ್ಗಾವಣೆ: ಅಪರಿಚಿತರ ಮಾತು ನಂಬಿದ ಉಮಾಪತಿ, ತಮ್ಮ ಬ್ಯಾಂಕ್‌ ಖಾತೆಗಳಿಗೆ ಅಪರಿಚಿತರು ನೀಡಿದ ಬ್ಯಾಂಕ್‌ ಖಾತೆಗಳಿಗೆ ವಿವಿಧ ಹಂತಗಳಲ್ಲಿ ಒಟ್ಟು ₹44.72 ಲಕ್ಷ ವರ್ಗಾಯಿಸುವ ಮುಖಾಂತರ ಷೇರುಗಳ ಮೇಲೆ ಹೂಡಿಕೆ ಮಾಡಿದ್ದಾರೆ. ಕೆಲ ದಿನಗಳ ಬಳಿಕ ಉಮಾಪತಿ ಅವರು ಅಪರಿಚಿತ ವ್ಯಕ್ತಿಗಳ ಸಂಪರ್ಕಕ್ಕೆ ಪ್ರಯತ್ನಿಸಿದ್ದಾರೆ. ಆದರೆ, ದುಷ್ಕರ್ಮಿಗಳು ಸಂಪರ್ಕ ಸಿಕ್ಕಿಲ್ಲ.

ಬಳಿಕ ತಾನು ಸೈಬರ್‌ ವಂಚನೆಗೆ ಒಳಗಾಗಿರುವುದು ಉಮಾಪತಿ ಅವರ ಅರಿವಿಗೆ ಬಂದಿದೆ. ತಮಗಾದ ವಂಚನೆ ಸಂಬಂಧ ಕೇಂದ್ರ ವಿಭಾಗದ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಪತ್ತೆಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.