ಸಾರಾಂಶ
ಬೆಂಗಳೂರು : ನಕಲಿ ಗ್ರಾಹಕರನ್ನು ಸೃಷ್ಟಿಸಿ ಪ್ರಖ್ಯಾತ ಇ-ಕಾಮರ್ಸ್ ಕಂಪನಿಗೆ ₹5.50 ಕೋಟಿ ವಂಚಿಸಿದ್ದ ಚಾಲಾಕಿ ಮೂವರನ್ನು ಸಿಸಿಬಿ ಸೈಬರ್ ಕ್ರೈಂ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ.
ಗುಜರಾತ್‌ನ ಸೂರತ್ ನಗರದ ಉತ್ತಮ್ ಕುಮಾರ್, ಪಾರ್ಥ್ ಭಾಯ್ ಮತ್ತು ಮೌಲಿಕ್ ಹರಿಭಾಯಿ ಬಂಧಿತರಾಗಿದ್ದು, ಆರೋಪಿಗಳಿಂದ 25 ಲಕ್ಷ ರು ನಗದು ಜಪ್ತಿಯಾಗಿದೆ. ತಲೆಮರೆಸಿಕೊಂಡಿರುವ ಉಳಿದ ಮೂವರ ಪತ್ತೆ ತನಿಖೆ ಮುಂದುವರೆದಿದೆ. ಮೀಶೋ ಕಂಪನಿಗೆ ನಕಲಿ ಗ್ರಾಹಕರ ಸೃಷ್ಟಿಸಿ ಆರೋಪಿಗಳು ವಂಚಿಸಿದ ಬಗ್ಗೆ ಕಂಪನಿ ನೀಡಿದ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ.
ನಕಲಿ ಕಂಪನಿ ಸೃಷ್ಟಿ: ಮೀಶೋ ಕಂಪನಿ ಮೂಲಕ ಗ್ರಾಹಕರಿಗೆ ವಸ್ತುಗಳ ಪೂರೈಕೆಗೆ ಕೆಲ ವ್ಯಾಪಾರಿಗಳ ಜತೆ ಒಪ್ಪಂದ ಮಾಡಿಕೊಂಡಿದೆ. ಆ್ಯಪ್ ಮೂಲಕ ವಸ್ತುಗಳನ್ನು ಖರೀದಿಸಬಹುದಾಗಿದೆ, ಕಳೆದ ಜನವರಿಯಲ್ಲಿ ಸೂರತ್ ನಗರದ ಉತ್ತಮ್, ಪಾರ್ಥ್ ಹಾಗೂ ಮೌಲಿಕ್ ಅವರ ಪಾಲುದಾರಿಕೆಯ ಓಂ ಸಾಯಿ ಫ್ಯಾಷನ್ ಎಂಬ ಹೆಸರಿನ ಕಂಪನಿ ಜತೆ ಮೀಶೋ ಒಡಂಬಡಿಕೆ ಮಾಡಿತ್ತು. ತಮ್ಮ ಕಂಪನಿ ಮೂಲಕ ಸಿದ್ಧಉಡುಪುಗಳನ್ನು ಗ್ರಾಹಕರಿಗೆ ಮಾರಾಟ ಮಾಡುವುದಾಗಿ ಆರೋಪಿಗಳು ಹೇಳಿಕೊಂಡಿದ್ದರು. ಆದರೆ ಆ ಕಂಪನಿಯೇ ನಕಲಿಯಾಗಿತ್ತು ಎಂಬುದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.
ಹೇಗೆ ವಂಚನೆ?: ಗ್ರಾಹಕರ ಸೋಗಿನಲ್ಲಿ ಮೀಶೋ ಆ್ಯಪ್‌ನಲ್ಲಿ ತಾವೇ ವಸ್ತುಗಳನ್ನು ಖರೀದಿಸಿ ಬಳಿಕ ತಪ್ಪು ವಿಳಾಸ ಕೊಡುತ್ತಿದ್ದರು. ಇದೇ ರೀತಿ ಪ್ರತಿ ದಿನ ಎರಡರಿಂದ ₹2500 ಮೌಲ್ಯದ ವಸ್ತುಗಳನ್ನು ಆರೋಪಿಗಳು ಖರೀದಿಸುತ್ತಿದ್ದರು. ಆದರೆ ಸುಳ್ಳು ವಿಳಾಸ ಕಾರಣಕ್ಕೆ ಆ ವಸ್ತುಗಳು ಮರಳಿ ಓಂ ಸಾಯಿ ಫ್ಯಾಷನ್ ಕಂಪನಿಗೆ ಬರುತ್ತಿದ್ದವು. ಹೀಗೆ ಬಂದ ಪಾರ್ಸಲ್‌ಗಳಲ್ಲಿರುವ ವಸ್ತುಗಳನ್ನು ಕೂಡಲೇ ಬದಲಾಯಿಸಿ ಅದರಲ್ಲಿ ನಕಲಿ ಅಥವಾ ಕಡಿಮೆ ಬೆಲೆಯ ವಸ್ತುಗಳನ್ನು ಇಡುತ್ತಿದ್ದರು. ನಂತರ ಪಾರ್ಸಲ್‌ಗಳನ್ನು ಆಗಷ್ಟೇ ತೆರೆದಂತೆ ವೀಡಿಯೊ ಮಾಡಿ ನಮಗೆ ನಕಲಿ ವಸ್ತುಗಳು ಪೂರೈಯಾಗಿದ್ದರಿಂದ ಮರಳಿ ಬಂದಿವೆ ಎಂದು ಮೀಶೋ ಕಂಪನಿಗೆ ಆ ವೀಡಿಯೊ ಕಳುಹಿಸಿ ಹಣ ಮರಳಿಸುವಂತೆ ಆರೋಪಿಗಳು ಕೇಳುತ್ತಿದ್ದರು.
ಮೋಸ ಬಯಲಾಗಿದ್ದು ಹೇಗೆ: ಸುಲಭವಾಗಿ ಹಣ ಸಂಪಾದಿಸಲು ಕಳೆದ ಜನವರಿಯಲ್ಲಿ ಓಂ ಸಾಯಿ ಫ್ಯಾಷನ್ ಕಂಪನಿ ತೆರೆದು ಮೀಶೋ ಕಂಪನಿಗೆ ಟೋಪಿ ಹಾಕಿ ಹಣ ಲಪಟಾಯಿಸುತ್ತಿದ್ದರು. ಹೀಗೆ ಏಳೆಂಟು ತಿಂಗಳಿಂದ ಒಂದೇ ಪೂರೈಕೆದಾರ ಕಂಪನಿಯಿಂದ ನಷ್ಟ ಉಂಟಾಗಿದ್ದರಿಂದ ಶಂಕೆಗೊಂಡ ಮೀಶೋ ಕಂಪನಿ, ದಾಖಲೆಗಳನ್ನು ಪರಿಶೀಲಿಸಿದಾಗ ಮೋಸ ಹೋಗಿರುವುದು ಗೊತ್ತಾಗಿದೆ. ಕೂಡಲೇ ಸಿಸಿಬಿ ಸೈಬರ್ ಕ್ರೈಂ ಠಾಣೆಗೆ ಕಂಪನಿ ನೋಡೆಲ್ ಅಧಿಕಾರಿ ದೂರು ಸಲ್ಲಿಸಿದ್ದರು.
ಸುಳಿವು ನೀಡಿದ ಆನ್‌ಲೈನ್ ಪೇಮೆಂಟ್: ಕಳೆದ ವರ್ಷ ವೈಟ್‌ಫೀಲ್ಡ್ ವಿಭಾಗದ ಸಿಇಎನ್ ಠಾಣೆಯಲ್ಲಿ ದಾಖಲಾಗಿದ್ದ ಇದೇ ರೀತಿ ವಂಚನೆ ಕೃತ್ಯದಲ್ಲೂ ಸೂರತ್ ತಂಡ ಎಸಗಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಈ ವಂಚನೆ ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರು, ಮೀಶೋ ಆ್ಯಪ್‌ನಲ್ಲಿ ಗ್ರಾಹಕರು ವಸ್ತುಗಳನ್ನು ಖರೀದಿಸಲು ಬಳಸಿದ್ದ ಮೊಬೈಲ್ ಸಂಖ್ಯೆಗಳ ಕುರಿತು ಪರಿಶೀಲಿಸಿದರು. ಆಗ ಆನ್‌ಲೈನ್ ಪೇಮೆಂಟ್ ಹಾಗೂ ಶಾಂಪಿಂಗ್ ಬಳಸಿದ್ದ ಮೊಬೈಲ್ ಸಂಖ್ಯೆಗಳ ಸಾಮ್ಯತೆ ಕಂಡು ಬಂದಿದೆ.