ಗೋವಾದಿಂದ ತರಿಸಿ ನಗರದಲ್ಲಿ ಮಾರುತ್ತಿದ್ದ 5 ಲಕ್ಷದ ಮದ್ಯ ವಶ

| Published : Oct 31 2024, 02:09 AM IST

ಸಾರಾಂಶ

ಗೋವಾದಿಂದ ಮದ್ಯ ತರಿಸಿಕೊಂಡು ನಗರದಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಅಬಕಾರಿ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಗೋವಾದಿಂದ ಮದ್ಯ ತರಿಸಿಕೊಂಡು ನಗರದಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಅಬಕಾರಿ ಪೊಲೀಸರು ಬಂಧಿಸಿದ್ದಾರೆ.

ಕತ್ರಿಗುಪ್ಪೆಯ ಪುರುಷೋತ್ತಮ್‌ ಬಂಧಿತನಾಗಿದ್ದು, ಈತನಿಂದ ₹5 ಲಕ್ಷ ಮೌಲ್ಯದ 151 ಲೀಟರ್ ಮದ್ಯದ 144 ಬಾಟಲ್ ವಶಕ್ಕೆ ಪಡೆಯಲಾಗಿದೆ. ಗೋವಾದಲ್ಲಿ ಮದ್ಯದ ಅಂಗಡಿಗಳಲ್ಲಿ ಇರುವವರ ಸಂಪರ್ಕ ಹೊಂದಿದ್ದ ಈತ ಬಸ್‌ಗಳ ಮೂಲಕ ಮದ್ಯ ತರಿಸಿಕೊಂಡು ಮಾರಾಟ ಮಾಡುತ್ತಿದ್ದ.

ಅ.27ರಂದು ಬನಶಂಕರಿ ಎರಡನೇ ಹಂತದಲ್ಲಿ ದ್ವಿಚಕ್ರ ವಾಹನ ನಿಲ್ಲಿಸಿಕೊಂಡು ಪುರುಷೋತ್ತಮ್‌ ನಿಂತಿದ್ದಾಗ ಆತನ ಚಲನ ವಲನದಿಂದ ಅಬಕಾರಿ ಸಿಬ್ಬಂದಿಗೆ ಅನುಮಾನ ಬಂದು ಬ್ಯಾಗ್ ತೆಗೆದು ಪರಿಶೀಲಿಸಿದಾಗ ಮದ್ಯದ ಬಾಟಲಿಗಳು ಪತ್ತೆಯಾಗಿವೆ. ನಂತರ ಮನೆಗೆ ಕರೆದೊಯ್ದು ಶೋಧಿಸಿದಾಗ ಇನ್ನಷ್ಟು ಬಾಟಲ್‌ಗಳು ಸಿಕ್ಕಿವೆ. ಬಾಟಲ್‌ಗಳ ಮೇಲೆ ಗೋವಾದಲ್ಲಿ ಮಾತ್ರ ಮಾರಾಟ ಎಂದು ನಮೂದಾಗಿರುವುದು ಕಂಡುಬಂದಿದೆ.

ದಕ್ಷಿಣ ವಿಭಾಗದ ಅಬಕಾರಿ ಜಂಟಿ ಆಯುಕ್ತ ಜೆ.ಗಿರಿ, ನಗರ ಜಿಲ್ಲೆ ಉಪ ಆಯುಕ್ತ ಎಂ.ರಂಗಪ್ಪ, ಡಿವೈಎಸ್ಪಿ ರವಿಕುಮಾರ ಮಾರ್ಗದರ್ಶನದಲ್ಲಿ ಬನಶಂಕರಿ ಅಬಕಾರಿ ನಿರೀಕ್ಷಕ ಪಿ.ಜೆ.ಜಾನ್, ಉಪ ನಿರೀಕ್ಷಕ ಪ್ರಶಾಂತ ಹಾಗೂ ಸಿಬ್ಬಂದಿ ಮದ್ಯ ವಶಪಡಿಸಿಕೊಂಡಿಸಿದ್ದಾರೆ.