ಸಾರಾಂಶ
ಕನಕಪುರ : ಗ್ರಾಹಕರ ಖಾತೆಗಳಿಗೆ ಹಾಕಿದ್ದ ಸಾಲದ ಹಣವನ್ನು ಒಟಿಪಿ ಪಡೆದು ವರ್ಗಾವಣೆ ಮಾಡಿಕೊಂಡು ಗ್ರಾಹಕರಿಗೆ ವಂಚನೆ ಮಾಡಿರುವ ಆರೋಪದ ಮೇಲೆ ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಲಿಮಿಟೆಡ್‌ನ ಮೂವರು ಸಿಬ್ಬಂದಿ ಮೇಲೆ ರಾಮನಗರ ಜಿಲ್ಲೆಯ ಕನಕಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಲೂಕಿನ ಸಾತನೂರು ಹೋಬಳಿಯ ಅಚ್ಚಲು ಗ್ರಾಮದ ನಾಗಲಿಂಗ ಸ್ವಾಮಿ, ನಾಗರಸನಕೋಟೆಯ ಸಂತೋಷ್, ಕೆಂಪೇಗೌಡನ ದೊಡ್ಡಿ ನವೀನ್ 57 ಗ್ರಾಹಕರಿಗೆ ನೀಡಿದ್ದ ಸಾಲದ ₹16.08 ಲಕ್ಷವನ್ನು ಒಟಿಪಿ ಪಡೆದು ದುರ್ಬಳಕೆ ಮಾಡಿಕೊಂಡಿದ್ದಾರೆಂದು ನೀಡಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ನಗರದಲ್ಲಿರುವ ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಲಿಮಿಟೆಡ್‌ನಲ್ಲಿ ಕೆಲ ದಿನಗಳ ಹಿಂದೆ ವ್ಯವಸ್ಥಾಪಕರಾಗಿದ್ದ ಅಚ್ಚಲು ಗ್ರಾಮದ ನಾಗಲಿಂಗಸ್ವಾಮಿ ಹಾಗೂ ನಾಗರಸನಕೋಟೆ ಸಂತೋಷ್ ಮತ್ತು ಕೆಂಪೇಗೌಡನ ದೊಡ್ಡಿ ನವೀನ್ ಸಿಬ್ಬಂದಿ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ಈ ಮೂವರು ಸೇರಿ 57 ಗ್ರಾಹಕರಿಗೆ ನೀಡಿದ ಸಾಲ ತಿರಸ್ಕೃತ ಆಗಿದೆ. ಒಟಿಪಿ ಕೊಡಿ, ನಿಮ್ಮ ಸಾಲದ ಹಣ ವಾಪಸ್ ಪಡೆದು ಸಾಲದ ಖಾತೆಯನ್ನು ಮುಕ್ತಾಯ ಮಾಡುತ್ತೇವೆ ಎಂದು ಗ್ರಾಹಕರಿಗೆ ತಪ್ಪು ಮಾಹಿತಿ ನೀಡಿದ್ದಾರೆ. ಬಳಿಕ ಗ್ರಾಹಕರಿಂದ ಒಟಿಪಿ ಪಡೆದು ಗ್ರಾಹಕರ ಖಾತೆಗೆ ಹಾಕಿದ್ದ ಸಾಲದ ಹಣವನ್ನು ತಮ್ಮ ವೈಯಕ್ತಿಕ ಹಾಗೂ ಇತರೆ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡು ಗ್ರಾಹಕರು ಹಾಗೂ ಬ್ಯಾಂಕಿಗೆ ವಂಚನೆ ಮಾಡಿದ್ದಾರೆನ್ನಲಾಗಿದೆ.
ಆರೋಪಿ ಸಂತೋಷ್ 18 ಗ್ರಾಹಕರಿಂದ ₹3.43 ಲಕ್ಷ, ನವೀನ್ 25 ಗ್ರಾಹಕರಿಂದ ₹8.86 ಲಕ್ಷ ದುರ್ಬಳಕೆ, ನಾಗಲಿಂಗ ಸ್ವಾಮಿ 14 ಗ್ರಾಹಕರಿಂದ ₹3.79 ಲಕ್ಷ ಲಕ್ಷ ಹಣ ದುರ್ಬಳಕೆ ಮಾಡಿಕೊಂಡಿದ್ದು, ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸೂರ್ಯೋದಯ ಸ್ಮಾಲ್ ಪೈನಾನ್ಸ್ ಬ್ಯಾಂಕ್ ಲಿಮಿಟೆಡ್ ವ್ಯವಸ್ಥಾಪಕ ಸಾಗರ್ ಅವರು ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.