ಕನ್ನಡಪ್ರಭ ವಾರ್ತೆ ಬೆಂಗಳೂರು

ಪ್ರವಾಸಿಗರ ಸೋಗಿನಲ್ಲಿ ವಿದೇಶದಿಂದ ರಾಜ್ಯಕ್ಕೆ ಡ್ರಗ್ಸ್ ಕಳ್ಳ ಸಾಗಾಣಿಕೆಗೆ ಯತ್ನಿಸಿದ ಪ್ರತ್ಯೇಕ ಪ್ರಕರಣದಲ್ಲಿ ನಾಲ್ವರು ಮಹಿಳೆಯರು ಸೇರಿ ಆರು ಮಂದಿಯನ್ನು ಬಂಧಿಸಿ ಎಂಟು ಕೋಟಿ ರು. ಮೌಲ್ಯದ ಡ್ರಗ್ಸ್‌ ಅನ್ನು ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಮೂರು ದಿನಗಳ ಅವಧಿಯಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಕಾರ್ಯಾಚರಣೆ ನಡೆಸಿ ಎಂಟು ಕೋಟಿ ರು ಮೌಲ್ಯದ 23.36 ಕೆಜಿ ಹೈಡ್ರೋ ಗಾಂಜಾವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಈ ಆರು ಮಂದಿ ಬ್ಯಾಂಕಾಕ್‌ ನಿಂದ ಬಂದಿಳಿದ ಪ್ರಯಾಣಿಕರೇ ಆಗಿದ್ದಾರೆ.

ಗುರುವಾರ ಬ್ಯಾಂಕಾಕ್‌ನಿಂದ ಬಂದ ಮಹಿಳೆಯರನ್ನು ಶಂಕೆ ಮೇರೆಗೆ ತಪಾಸಣೆಗೊಳಪಡಿಸಿದಾಗ ಡ್ರಗ್ಸ್‌ ಪತ್ತೆಯಾಗಿದೆ. ತಮ್ಮ ಬ್ಯಾಗ್‌ಗಳಲ್ಲಿ ಡ್ರಗ್ಸ್ ಅಡಗಿಸಿ ರಾಜ್ಯಕ್ಕೆ ಮಹಿಳೆಯರು ಡ್ರಗ್ಸ್ ಸಾಗಿಸುತ್ತಿದ್ದರು. ಕೂಡಲೇ ಅವರನ್ನು ಬಂಧಿಸಿ 4.10 ಕೋಟಿ ರು. ಮೌಲ್ಯದ 11.72 ಕೆಜಿ ಹೈಡ್ರೋ ಗಾಂಜಾ ಜಪ್ತಿ ಮಾಡಲಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.

ಅದೇ ರೀತಿ ಕೆಐಎಗೆ ಶನಿವಾರ ಬಂದಿಳಿದ ಪ್ರಯಾಣಿಕನ ಬಳಿ 1.99 ಕೋಟಿ ರು. ಮೌಲ್ಯದ 5.70 ಕೆಜಿ ಹೈಡ್ರೋ ಗಾಂಜಾ ಹಾಗೂ ಶುಕ್ರವಾರ ಆಗಮಿಸಿದ ಪ್ರಯಾಣಿಕನ ಬಳಿ 2.02 ಕೋಟಿ ರು. ಮೌಲ್ಯದ 5.94 ಕೆಜಿ ಹೈಡ್ರೋ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.