ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಅಪರಾಧ ಪ್ರಕರಣಗಳ ತನಿಖೆಯಲ್ಲಿ ಲೋಪ ಸೇರಿದಂತೆ ಇತರೆ ವಿಷಯಗಳಲ್ಲಿ ಕರ್ತವ್ಯಲೋಪವೆಸಗಿದ ಆರೋಪದ ಮೇರೆಗೆ ರಾಮಮೂರ್ತಿ ನಗರ ಠಾಣೆ ಇನ್‌ಸ್ಪೆಕ್ಟರ್ ಸೇರಿದಂತೆ ಆರು ಮಂದಿ ಪೊಲೀಸರ ತಲೆದಂಡವಾಗಿದೆ.ಇನ್ಸ್‌ಪೆಕ್ಟರ್ ಮುತ್ತುರಾಜ್, ಸಬ್ ಇನ್‌ಸ್ಪೆಕ್ಟರ್ ಉಮೇಶ್, ಸಹಾಯಕ ಸಬ್ ಇನ್‌ಸ್ಪೆಕ್ಟರ್‌ಗಳಾದ ಫೈರೋಜ್ ಖಾನ್, ಮಹೇಶ್, ಹೆಡ್ ಕಾನ್‌ಸ್ಟೇಬಲ್ ಮಂಜುನಾಥ್ ಹಾಗೂ ಕಾನ್‌ಸ್ಟೇಬಲ್ ಬಸವರಾಜು ಅಳ್ಳೋಳ್ಳಿ ಅಮಾನತುಗೊಂಡಿದ್ದಾರೆ. ಈ ಆರು ಮಂದಿ ಪೊಲೀಸರ ವಿರುದ್ಧ ಎಸಿಪಿ ವರದಿ ಆಧರಿಸಿ ಅಮಾನತುಗೊಳಿಸಿ ನಗರ ಪೊಲೀಸ್ ಹೆಚ್ಚುವರಿ ಆಯುಕ್ತ ಎನ್.ಸತೀಶ್ ಕುಮಾರ್ ಆದೇಶಿಸಿದ್ದಾರೆ.
ಕೆಲ ದಿನಗಳ ಹಿಂದೆ ರಾಮಮೂರ್ತಿನಗರ ವ್ಯಾಪ್ತಿಯಲ್ಲಿ ಅಕ್ರಮ ಚಟುವಟಿಕೆಗಳ ಕುರಿತು ನಗರ ಹೆಚ್ಚುವರಿ ಆಯುಕ್ತರಿಗೆ ದೂರುಗಳು ಸಲ್ಲಿಕೆಯಾಗಿದ್ದವು. ಇವುಗಳನ್ನು ಗಂಭೀರವಾಗಿ ಪರಿಗಣಿಸಿದ ಸತೀಶ್ ಕುಮಾರ್ ಅವರು, ಈ ಕುರಿತು ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಕೆ.ಜಿ.ಹಳ್ಳಿ ಉಪ ವಿಭಾಗದ ಎಸಿಪಿಗೆ ಸೂಚಿಸಿದರು.ಅಂತೆಯೇ ಈ ದೂರುಗಳ ಸಂಬಂಧ ಇಲಾಖಾ ಮಟ್ಟದ ಆಂತರಿಕ ವಿಚಾರಣೆ ನಡೆಸಿ ಎಸಿಪಿ ವರದಿ ಸಲ್ಲಿಸಿದ್ದರು. ಆಗ ಮುತ್ತುರಾಜು, ಉಮೇಶ್ ಹಾಗೂ ಇತರೆ ಸಿಬ್ಬಂದಿ ವಿರುದ್ಧ ಕರ್ತವ್ಯಲೋಪಗಳು ಪತ್ತೆಯಾದವು.
ಸದ್ಯ ಮೂರು ಪ್ರಕರಣಗಳಲ್ಲಿ ಕರ್ತವ್ಯಲೋಪದ ಆರೋಪದ ಮೇರೆಗೆ ಪಿಐ ಹಾಗೂ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಆದರೆ ಇನ್ನು ಅಪರಾಧ ಪ್ರಕರಣಗಳ ಕುರಿತ ಕಡತಗಳನ್ನು ಪರಿಶೀಲಿಸಿದರೆ ಆರೋಪಿತ ಪೊಲೀಸರ ಮತ್ತಷ್ಟು ತಪ್ಪುಗಳು ಬಯಲಾಗುತ್ತವೆ ಎಂದು ಮೂಲಗಳು ಹೇಳಿವೆ.ಏನೇನು ಆರೋಪಗಳು?1.ಇತ್ತೀಚೆಗೆ ಭಗನಿ ಬಾರ್ ಆ್ಯಂಡ್ ರೆಸ್ಟೋರೆಂಟ್ ಬಳಿ ಗಸ್ತು ಸಿಬ್ಬಂದಿ ಮೇಲೆ ಕೆಲ ರೌಡಿಗಳು ಹಲ್ಲೆ ನಡೆಸಿದ್ದರು. ಆದರೆ ಈ ಘಟನೆ ಸಂಬಂಧ ಗಸ್ತು ಸಿಬ್ಬಂದಿ ದೂರು ನೀಡಿದರೂ ಕಾನೂನು ಕ್ರಮ ಜರುಗಿಸದೆ ಇನ್‌ಸ್ಪೆಕ್ಟರ್ ಮುತ್ತುರಾಜ್ ಹಾಗೂ ಪಿಎಸ್‌ಐ ಉಮೇಶ್ ಹಾಗೂ ಸಿಬ್ಬಂದಿ ನಿರ್ಲಕ್ಷ್ಯತನ ತೋರಿದ್ದರು ಎಂಬ ಆರೋಪ ಬಂದಿತ್ತು.
2.ಕೊಲೆ ಪ್ರಕರಣದಲ್ಲಿ 5ನೇ ಆರೋಪಿಯಾಗಿದ್ದ ಗೌರವ್ ಎಂಬಾತ ಹೆಸರನ್ನು ದೋಷಾರೋಪಪಟ್ಟಿಯಲ್ಲಿ ಕೈ ಬಿಡಲಾಗಿತ್ತು. ಈ ತನಿಖೆ ಕುರಿತು ಹಿರಿಯ ಅಧಿಕಾರಿಗಳಿಗೆ ತಿಳಿಸದೆ ಪಿಐ, ಪಿಎಸ್‌ಐ ಹಾಗೂ ಸಿಬ್ಬಂದಿ ಉದಾಸೀತನೆ ತೋರಿದ್ದರು.3.ಡ್ರಗ್ಸ್ ಮಾರಾಟಕ್ಕೆ ಯತ್ನಿಸಿದ್ದ ಅಂಟೋನಿ ಎಂಬಾತನನ್ನು ವಶಕ್ಕೆ ಪಡೆದು ರಾಮಮೂರ್ತಿನಗರ ಠಾಣೆಗೆ ತಂದು ಸಿಬ್ಬಂದಿ ವರದಿ ಮಾಡಿದ್ದರು. ಅಲ್ಲೇ ಆ ಪೆಡ್ಲರ್ ಬಳಿ ಡ್ರಗ್ಸ್ ಸಹ ಪತ್ತೆಯಾಗಿತ್ತು. ಹೀಗಿದ್ದರೂ ಆತನ ವಿರುದ್ಧ ಮುಂದಿನ ಕಾನೂನು ಕ್ರಮ ಜರುಗಿಸದೆ ಬಿಟ್ಟು ಕಳುಹಿಸಿದ್ದರು ಎಂಬ ಆರೋಪ ಪಿಐ ಮುತ್ತುರಾಜು ತಂಡ ವಿರುದ್ಧ ಕೇಳಿ ಬಂದಿತ್ತು.