ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲೆಯಿಂದ ನಾಪತ್ತೆಯಾಗಿದ್ದ ೨೧ ಮಕ್ಕಳ ಪ್ರಕರಣಗಳ ಪೈಕಿ ೬ ಪ್ರಕರಣಗಳಲ್ಲಿ ೮ ಮಕ್ಕಳನ್ನು ಪತ್ತೆ ಹಚ್ಚಿರುವ ಪೊಲೀಸರು ಪೋಷಕರ ಮಡಿಲಿಗೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.ಮಂಡ್ಯ ಮಹಿಳಾ ಪೊಲೀಸ್ ಠಾಣೆಯಲ್ಲಿ ೩, ಪಶ್ಚಿಮ ಪೊಲೀಸ್ ಠಾಣೆ, ಮಳವಳ್ಳಿಯ ಪುರ ಪೊಲೀಸ್ ಠಾಣೆ ಹಾಗೂ ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣೆಯಲ್ಲಿ ತಲಾ ಒಂದೊಂದು ಪ್ರಕರಣದಲ್ಲಿ ಒಟ್ಟು ೬ ಪ್ರಕರಣಗಳಲ್ಲಿ ೩ ರಿಂದ ೧೪ ವರ್ಷದವರೆಗೆ ಪೋಷಕರಿಂದ ಬೇರ್ಪಟ್ಟಿದ್ದ ೮ ಅಪ್ರಾಪ್ತ ಮಕ್ಕಳನ್ನು ಪೋಷಕರ ಮಡಿಲಿಗೆ ಸೇರಿಸಲಾಗಿದೆ.
ಮಂಡ್ಯ ಬಾಲಕರ ಬಾಲ ಮಂದಿರದಿಂದ ೫ ಜನ ಬಾಲಕರು ೬ ಸೆಪ್ಟೆಂಬರ್ ೨೦೧೨೧ರಂದು ರಾತ್ರಿ ೮.೪೫ರಲ್ಲಿ ಸ್ನಾನ ಮಾಡಿ ಬಟ್ಟೆ ಒಗೆಯುವುದಾಗಿ ಹೇಳಿ ಹಿಂದಿನ ಬಾಗಿಲಿನ ಬೀಗ ಒಡೆದು ಓಡಿಹೋಗಿದ್ದರು. ಬೀಗ ಒಡೆಯುವ ಸದ್ದು ಕೇಳಿಸದಂತೆ ನೀರನ್ನು ಜೋರಾಗಿ ಬಿಟ್ಟು ಬಟ್ಟೆಗಳನ್ನು ಜೋರಾಗಿ ಶಬ್ಧ ಬರುವಂತೆ ಒಗೆಯುತ್ತಿದ್ದರು. ಇದನ್ನು ಸಿಬ್ಬಂದಿ ನೋಡಲು ಬಂದಾಗ ಬಾಲಕರು ಓಡಿಹೋಗಿದ್ದರು. ಎಲ್ಲಿ ಹುಡುಕಿದರೂ ಪತ್ತೆಯಾಗಿರಲಿಲ್ಲ.ಕಾಣೆಯಾದ ಐವರು ಬಾಲಕರ ಪೈಕಿ ಓರ್ವ ಬಾಲಕನ ತಾಯಿ ಮೈಸೂರಿನ ಕಲ್ಯಾಣ ಮಂಟಪವೊಂದರಲ್ಲಿ ಕ್ಲೀನಿಂಗ್ ಕೆಲಸ ಮಾಡಿಕೊಂಡಿದ್ದು, ಆಕೆಯ ಬಳಿ ಮಗನ ಬಗ್ಗೆ ವಿಚಾರಿಸಿದಾಗ ಮನೆಗೆ ಬಂದು ಹೋಗುತ್ತಿರುವುದಾಗಿ ತಿಳಿಸಿದರು. ಹಾಗಾಗಿ ಪ್ರಕಣದಲ್ಲಿ ಆತ ಪತ್ತೆಯಾಗಿರುವುದಾಗಿ ವರದಿ ದಾಖಲಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
೨ ಫೆಬ್ರವರಿ ೨೦೨೦ರಂದು ಬೋರ್‌ವೆಲ್‌ನಿಂದ ನೀರು ತರುವುದಾಗಿ ಹೋಗಿದ್ದ ಬಾಲಕಿ ನಾಪತ್ತೆಯಾಗಿದ್ದಳು. ಬೋರ್‌ವೆಲ್ ಬಳಿ ಬಿಂದಿಗೆ ಮಾತ್ರ ಬಿದ್ದಿತ್ತು. ಈ ಸಂಬಂಧ ಮದ್ದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಬಾಲಕಿಯ ಬಗ್ಗೆ ಮಾಹಿತಿ ಸಂಗ್ರಹಿಸಿದಾಗ ಆಕೆ ಧಾರವಾಡದಲ್ಲಿರುವ ವಿಷಯ ತಿಳಿದು ಅಲ್ಲಿಗೆ ಹೋಗಿ ಆಕೆಯನ್ನು ಕರೆತಂದು ಪೋಷಕರ ವಶಕ್ಕೆ ಒಪ್ಪಿಸಿದ್ದಾರೆ.
೩೦ ಆಗಸ್ಟ್ ೨೦೨೨ರಲ್ಲಿ ಕೆರಗೋಡು ಪೊಲೀಸ್ ಠಾಣೆ ವ್ಯಾಪ್ತಿಯ ಮೊರಾರ್ಜಿ ವಸತಿ ಶಾಲೆಯಿಂದ ಬಾಲಕನೊಬ್ಬ ನಾಪತ್ತೆಯಾಗಿದ್ದನು. ಈ ಕುರಿತು ಬಾಲಕನ ತಂದೆ ಪಾಂಡವಪುರ ತಾಲೂಕು ಹಿರೇಮರಳಿ ಗ್ರಾಮದ ಈರೇಗೌಡ ದೂರು ನೀಡಿದ್ದರು. ಜುಲೈ ೨೯ರಂದು ಮೊರಾರ್ಜಿ ವಸತಿ ಶಾಲೆಯಿಂದ ಮಗನನ್ನು ಮನೆಗೆ ಕರೆದುಕೊಂಡು ಹೋಗಿದ್ದು ಆಗಸ್ಟ್ ೧೦ರಂದು ಬೆಳಗ್ಗೆ ೧೧.೫೦ರ ಸಮಯಕ್ಕೆ ವಾಪಸ್ ಮೊರಾರ್ಜಿ ಶಾಲೆಗೆ ಬಿಟ್ಟು ಬಂದಿದ್ದೆನು. ಗೌರಿ-ಗಣೇಶ ಹಬ್ಬಕ್ಕೆ ಮಗನನ್ನು ಕರೆದುಕೊಂಡು ಹೋಗಲು ಮೊರಾರ್ಜಿ ವಸತಿ ಶಾಲೆಯ ಬಳಿ ಬಂದು ಮಗನನ್ನು ಕಳುಹಿಸಿಕೊಡುವಂತೆ ಕೇಳಿದಾಗ ನಿಮ್ಮ ಮಗ ವಸತಿ ಶಾಲೆಗೆ ಬಂದಿಲ್ಲವೆಂದು ಅಧಿಕಾರಿಗಳು ತಿಳಿಸಿದರು. ಇದರಿಂದ ಗಾಬರಿಗೊಂಡು ಕೆರಗೋಡು ಪೊಲೀಸರಿಗೆ ದೂರು ನೀಡಿದ್ದರು.
ನಾಪತ್ತೆಯಾದ ಬಾಲಕ ಬೆಂಗಳೂರಿನ ಶೇಷಾದ್ರಿಪುರಂ, ಗಾಂಧಿನಗರದ ಹೋಟೆಲ್‌ನಲ್ಲಿ ಕೆಲಸ ಮಾಡಿಕೊಂಡಿರುವ ವಿಷಯ ತಿಳಿದು ಅಲ್ಲಿಗೆ ಹೋಗಿ ವಿಚಾರಿಸಿದಾಗ ಬಾಲಕ ಹಾಸನ ಮೂಲದ ಜಯತೀರ್ಥ ಎಂಬುವರ ಜೊತೆ ತಾನು ಅನಾಥ ಎಂದೇಳಿಕೊಂಡು ವಾಸವಾಗಿರುವುದು ಗೊತ್ತಾಯಿತು. ಬಾಲಕನನ್ನು ಕರೆತಂದು ಪೋಷಕರಿಗೆ ಒಪ್ಪಿಸಲಾಗಿದೆ.ಶ್ರೀರಂಗಪಟ್ಟಣ ತಾಲೂಕು ಬೆಳಗೊಳದ ಎಕೋ ಸ್ಪಂದನ ಬಾಲ ನ್ಯಾಯ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಪ್ರಿಯಾ ಲೂಯಿಸ್ ಅವರು ನಮ್ಮ ಸಂಸ್ಥೆಗೆ ೧೭ ವರ್ಷದ ಬಾಲಕನನ್ನು ಮಂಡ್ಯದ ಬಾಲಮಂದಿರದಿಂದ ಡಿಪ್ಲೋಮಾ ಇನ್ ಹೋಟೆಲ್ ಮ್ಯಾನೇಜ್‌ಮೆಂಟ್ ವಿದ್ಯಾಭ್ಯಾಸದ ಸ್ಕಿಲ್ ಟ್ರೈನಿಂಗ್ ಕೊಡಲು ಶಿಫಾರಸು ಮಾಡಿ ಕಳುಹಿಸಿದ್ದರು. ಬಾಲಕ ಮೂರು ದಿನ ಸಂಸ್ಥೆಯಲ್ಲಿದ್ದು ೧೭ ಸೆಪ್ಟೆಂಬರ್ ೨೦೨೩ರಂದು ಆಟವಾಡಲು ಬಿಟ್ಟಿದ್ದ ಸಮಯದಲ್ಲಿ ಬಾಲಕ ನಾಪತ್ತೆಯಾಗಿದ್ದನು. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಲಿಲ್ಲ. ಬಾಲಕನ ಅಣ್ಣನಿಗೆ ಕರೆ ಮಾಡಿ ವಿಚಾರಿಸಲಾಗಿ ಆತ ಮನೆಗೂ ಹೋಗಿರಲಿಲ್ಲ. ಕೊನೆಗೆ ೧೭ ವರ್ಷದ ಬಾಲಕನು ಮೈಸೂರು ನಗರದಲ್ಲಿ ಸಣ್ಣಪುಟ್ಟ ಕಳ್ಳತನ ಮಾಡಿಕೊಂಡಿರುವ ವಿಷಯ ತಿಳಿಯಿತು. ಮೈಸೂರು, ನಂಜನಗೂಡು, ಬೆಂಗಳೂರು ಕಡೆಗಳಲ್ಲಿ ಓಡಾಡಿಕೊಂಡಿರುವ ಬಗ್ಗೆ ಬಾತ್ಮೀದಾರರಿಂದ ಮಾಹಿತಿ ಗೊತ್ತಾಯಿತು. ಕೊನೆಗೆ ಉಪ್ಪಾರಪೇಟೆ ಪೊಲೀಸ್ ಠಾಣಾ ಪ್ರಕರಣದಲ್ಲಿ ಆರೋಪಿಯಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಬಂಧಿಯಾಗಿರುವ ವಿಷಯ ತಿಳಿದು ಆತ ಪತ್ತೆಯಾಗಿರುವುದಾಗಿ ದಾಖಲಿಸಿಕೊಳ್ಳಲಾಗಿದೆ.
ಶ್ರೀರಂಗಪಟ್ಟಣ ತಾಲೂಕು ಕಿರಂಗೂರು ಗ್ರಾಮದಲ್ಲಿ ವಾಸವಿದ್ದ ಬಿಹಾರ ಮೂಲದ ಕುಟುಂಬದ ಪೈಕಿ ಮದನ್ ಶಾಹ ಎಂಬುವರ ಪತ್ನಿ ಹಾಗೂ ಮೂರು ಹೆಣ್ಣು ಮಕ್ಕಳು ನಾಪತ್ತೆಯಾಗಿದ್ದರು. ಪತ್ನಿ ಮೊಬೈಲ್‌ಗೆ ಫೋನ್ ಮಾಡಿದರೆ ಸ್ವಿಚ್‌ಆಫ್ ಆಗಿತ್ತು. ಕಾಣೆಯಾಗಿರುವ ಹೆಂಡತಿ-ಮೂವರು ಹೆಣ್ಣು ಮಕ್ಕಳನ್ನು ಪತ್ತೆ ಮಾಡಿಕೊಡುವಂತೆ ಮದನ್‌ಶಹಾ ದೂರು ನೀಡಿದ್ದನು. ಮದನ್‌ಶಹಾ ಅವರ ಮೊಬೈಲ್‌ಗೆ ಹೊಸದಾಗಿ ಬರುತ್ತಿದ್ದ ಕರೆಗಳನ್ನು ಪರಿಶೀಲಿಸಿ, ಆತನ ಪತ್ನಿ ಬಳಸುತ್ತಿದ್ದ ಹೊಸ ಮೊಬೈಲ್ ಸಂಖ್ಯೆಯನ್ನು ಪತ್ತೆ ಮಾಡಿ ಬಿಹಾರ ರಾಜ್ಯದ ಮೋತಿಹಾರಿ ಜಿಲ್ಲೆಯ ಭಗವಾನ್‌ಪುರ ಬಳಿಯ ಖೈರವ ಗ್ರಾಮದಲ್ಲಿರುವುದು ಪತ್ತೆಯಾಯಿತು.ಮಳವಳ್ಳಿ ಸರ್ಕಾರಿ ಬಾಲಕಿಯರ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ೧೬ ವರ್ಷದ ಬಾಲಕಿ ೩೧ ಜುಲೈ ೨೦೨೪ರಂದು ಕಾಣೆಯಾಗಿದ್ದಳು. ದಿನಬಳಕೆ ವಸ್ತುಗಳನ್ನು ತೆಗೆದುಕೊಂಡು ಹೋಗಲು ಮಳವಳ್ಳಿಗೆ ಬಂದಿದ್ದವಳು ನಾಪತ್ತೆಯಾಗಿದ್ದಳು. ಎಲ್ಲಿ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಆಕೆ ಬೆಂಗಳೂರಿನ ಜಿ.ಸತೀಶ್ ಎಂಬಾತನೊಂದಿಗೆ ಫೋನ್‌ನಲ್ಲಿ ಹೆಚ್ಚು ಮಾತನಾಡುತ್ತಿರುವುದರ ಬಗ್ಗೆ ತಾಯಿ ಮಂಜುಳಾ ಪೊಲೀಸರಿಗೆ ತಿಳಿಸಿದ್ದರು.
೧೬ ವರ್ಷದ ಬಾಲಕಿ ಡ್ರೈವರ್ ಲವರ್ ಅಮ್ಮು ಎಂಬ ಇನ್ಸ್‌ಸ್ಟ್ರಾಗ್ರಾಂ ಐಡಿಯನ್ನು ಉಪಯೋಗಿಸುತ್ತಿದ್ದಾರೆಂದು ಮಾಹಿತಿ ತಿಳಿದು ಈ ಐಡಿಗೆ ಲಿಂಕ್ ಆಗಿರುವ ಹೆಸರು ಮತ್ತು ಮೊಬೈಲ್ ಸಂಖ್ಯೆಯನ್ನು ಪಡೆದು ಬೆಂಗಳೂರಿನ ಲಕ್ಕೊಂಡನಹಳ್ಳಿ ಬಳಿ ಇದ್ದ ಬಾಲಕಿಯನ್ನು ಕರೆತಂದು ತಾಯಿಯ ಮಡಿಲಿಗೆ ಸೇರಿಸಲಾಗಿದೆ.