ಸಾರಾಂಶ
ಬೆಂಗಳೂರು : ಅಪರಾಧ ಪ್ರಕರಣಗಳ ಆರೋಪಿಗಳಿಗೆ ನಕಲಿ ದಾಖಲೆ ಸೃಷ್ಟಿಸಿ ಜಾಮೀನು ನೀಡುತ್ತಿದ್ದ ಎಂಟು ಮಂದಿ ದುಷ್ಕರ್ಮಿಗಳನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ವಾಸೀಂ, ಜುಬೇರ್, ಗೋವಿಂದ್ ನಾಯಕ್, ಅಭಿಷೇಕ್, ದೊರೆ ರಾಜ್, ಗೋವಿಂದ ರಾಜು ಸೇರಿ ಎಂಟು ಮಂದಿ ಬಂಧಿತರಾಗಿದ್ದು, ಆರೋಪಿಗಳಿಂದ 47 ನಕಲಿ ಆಧಾರ್ ಕಾರ್ಡ್‌ಗಳು, 122 ವಿವಿಧ ಖೊಟ್ಟಿ ದಾಖಲೆಗಳು, ನಕಲಿ ಸ್ಟ್ಯಾಂಪ್ ಹಾಗೂ ಪೆನ್ ಡ್ರೈವ್ ಸೇರಿದಂತೆ ಇತರೆ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಕೆಲ ದಿನಗಳ ಹಿಂದೆ ನಕಲಿ ಜಾಮೀನುದಾರರ ಬಗ್ಗೆ 4ನೇ ಎಸಿಜೆಎಂ ನ್ಯಾಯಾಲಯದ ಶಿರಸ್ತೇದಾರರು ದೂರು ನೀಡಿದ್ದರು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಎಂಟು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ದರೋಡೆ, ಸುಲಿಗೆ, ಕೊಲೆ ಯತ್ನ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳ ಆರೋಪಿಗಳ ಬಿಡುಗಡೆಗೆ ನಕಲಿ ಜಾಮೀನು ಬಳಕೆಯಾಗಿದೆ. ಹಣಕ್ಕಾಗಿ ನಕಲಿ ದಾಖಲೆ ಸೃಷ್ಟಿಸಿ ಅಪರಿಚಿತರಿಗೆ ಆರೋಪಿಗಳು ನೆರವಾಗುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.