ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಮಕರ ಸಂಕ್ರಾಂತಿ ಹಬ್ಬದ ಮುನ್ನ ದಿನ ಮದ್ಯದ ಅಮಲಿನಲ್ಲಿ ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಹತ್ಯೆಗೈದ ದುಷ್ಕರ್ಮಿಯೊಬ್ಬನನ್ನು ಸ್ಥಳೀಯರು ಹಿಗ್ಗಾಮುಗ್ಗ ಥಳಿಸಿ ಪೊಲೀಸರಿಗೊಪ್ಪಿಸಿರುವ ಘಟನೆ ನಗರದಲ್ಲಿ ನಡೆದಿದೆ.ಬಿಹಾರ ರಾಜ್ಯದ ಅಭಿಷೇಕ್ ಕುಮಾರ್ (24) ಬಂಧಿತನಾಗಿದ್ದು, ನೇಪಾಳ ದೇಶದ ಸೆಕ್ಯುರಿಟಿ ಗಾರ್ಡ್ ದಂಪತಿ ಪುತ್ರಿ ಮೇಲೆ ಈ ಪೈಶಾಚಿಕ ಕೃತ್ಯ ನಡೆದಿದೆ. ರಾಮಮೂರ್ತಿ ನಗರ ಸಮೀಪ ನಿರ್ಮಾಣ ಹಂತದ ಕಟ್ಟಡದ ಆವರಣದಲ್ಲಿ ಮೃತ ಬಾಲಕಿ ಕುಟುಂಬ ನೆಲೆಸಿತ್ತು. ಸಂಕ್ರಾಂತಿ ಹಬ್ಬಕ್ಕೆ ಸಿಹಿ ಊಟ ತಯಾರಿಸುವ ಸಲುವಾಗಿ ಆ ಕಟ್ಟಡದ 4ನೇ ಮಹಡಿಯಲ್ಲಿ ಬಿದ್ದಿದ್ದ ಮರದ ತುಂಡುಗಳನ್ನು ತರಲು ಮೃತಳ ತಾಯಿ ತೆರಳಿದ್ದಾಗ ಆಟವಾಡುತ್ತಿದ್ದ ಬಾಲಕಿ ಮೇಲೆ ಅದೇ ಕಟ್ಟಡದ ಕೆಲಸಗಾರ ದುಷ್ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
1ನೇ ಮಹಡಿಯಲ್ಲಿ ಬಾಲಕಿ ಮೇಲೆ ರೇಪ್:ಉದ್ಯೋಗ ಅರಸಿಕೊಂಡು ಮೃತ ಬಾಲಕಿ ಪೋಷಕರು ನಗರಕ್ಕೆ ಬಂದಿದ್ದು, ಕಳೆದೊಂದು ವರ್ಷದಿಂದ ರಾಮಮೂರ್ತಿ ನಗರ ಸಮೀಪದ ನಿರ್ಮಾಣ ಹಂತದ ಕಟ್ಟಡದಲ್ಲಿ ಬಾಲಕಿ ತಂದೆ ಕಾವಲುಗಾರನಾಗಿದ್ದ. ಅದೇ ಕಟ್ಟಡದ ನೆಲಮಹಡಿಯಲ್ಲಿ ತಮ್ಮ ಇಬ್ಬರು ಮಕ್ಕಳ ಜತೆ ಕಾವಲುಗಾರ ವಾಸವಾಗಿದ್ದ. ಈ ಕಟ್ಟಡದಲ್ಲಿ ನಾಲ್ಕೈದು ಕಾರ್ಮಿಕರು ಕೆಲಸ ಮಾಡುತ್ತಿದ್ದು, 3 ದಿನಗಳ ಹಿಂದಷ್ಟೇ ಅಭಿಷೇಕ್ ಕೆಲಸಕ್ಕೆ ಸೇರಿದ್ದ. ಸಂಕ್ರಾಂತಿ ಹಬ್ಬಕ್ಕೆ ಸಿಹಿ ಅಡುಗೆ ತಯಾರಿಸಲು ಬಾಲಕಿ ತಾಯಿ, ಮರದ ತುಂಡುಗಳನ್ನು ತರಲು ಸೋಮವಾರ ಸಂಜೆ 5 ಗಂಟೆ ಸುಮಾರಿಗೆ 4ನೇ ಮಹಡಿಗೆ ತೆರಳಿದ್ದಾರೆ. ಆಗ ಮೊದಲ ಮಹಡಿಯ ನೀರಿನಲ್ಲಿ ಆಟವಾಡುತ್ತ ನಿಂತ್ತಿದ್ದ ಬಾಲಕಿ ಮೇಲೆ ಮದ್ಯದ ಅಮಲಿನಲ್ಲಿದ್ದ ಅಭಿಷೇಕ್ ಲೈಂಗಿಕ ಶೋಷಣೆ ನೀಡಿದ್ದಾನೆ.
ಉಸಿರುಗಟ್ಟಿ ಮಗು ಸಾವು:ಕೆಲ ನಿಮಿಷಗಳಲ್ಲಿ ಮರಳಿದ ತಾಯಿ, ತನ್ನ ಮಗಳ ಮೇಲೆ ಆರೋಪಿ ಅಂಗಾತ ಮಲಗಿರುವುದು ಕಂಡು ಆಕ್ರೋಶಗೊಂಡಿದ್ದು, ತನ್ನ ಕೈಯಲ್ಲಿದ್ದ ಮರದ ತುಂಡಿನಿಂದ ಆತನಿಗೆ ಬಡಿದಿದ್ದಾಳೆ. ತಾಯಿ ಚೀರಾಟದ ಸದ್ದು ಕೇಳಿ ಕಟ್ಟಡದ ಸನಿಹದಲ್ಲೇ ಇದ್ದ ಬಾಲಕಿ ತಂದೆ ಹಾಗೂ ಸಹ ಕಾರ್ಮಿಕರು ಧಾವಿಸಿದ್ದಾರೆ. ಕೂಡಲೇ ಬಾಲಕಿಯನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಆರೋಪಿಯ ಭಾರ ಸಹಿಸಲಾರದೆ ಉಸಿರುಗಟ್ಟಿ ಮಗು ಕೊನೆಯುಸಿರೆಳೆದಿದೆ ಎನ್ನಲಾಗಿದೆ.
ಈ ಸಂಬಂಧ ರಾಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಬಾಕ್ಸ್)
ಜನಾಕ್ರೋಶಕ್ಕೆ ತಲ್ಲಣಿಸಿದರಾಮಮೂರ್ತಿ ನಗರ
ಅತ್ಯಾಚಾರ ವಿಷಯ ತಿಳಿದು ಆಕ್ರೋಶಗೊಂಡ ನೇಪಾಳ ಮೂಲದ ಜನರು ಹಾಗೂ ಸ್ಥಳೀಯರು, ತಕ್ಷಣವೇ ಘಟನಾ ಸ್ಥಳದ ಮುಂದೆ ಜಮಾಯಿಸಿದರು. ಕೃತ್ಯ ಎಸಗಿದ ಆರೋಪಿಯನ್ನು ಹಿಡಿದು ಮನಬಂದಂತೆ ಹೊಡೆದಿದ್ದಾರೆ. ಘಟನಾ ಸ್ಥಳಕ್ಕೆ ತೆರಳಿದ ರಾಮಮೂರ್ತಿನಗರ ಠಾಣೆ ಪೊಲೀಸರು, ಉದ್ರಿಕ್ತರ ಗುಂಪಿನಿಂದ ಆರೋಪಿಯನ್ನು ಬಿಡಿಸಿಕೊಂಡು ಠಾಣೆಗೆ ಕರೆದೊಯ್ದಿದ್ದಾರೆ. ಬಳಿಕ ರಾಮಮೂರ್ತಿನಗರ ಠಾಣೆ ಹಾಗೂ ಆಸ್ಪತ್ರೆ ಬಳಿ ಸಹ ಜನರು ಗುಂಪು ಗುಂಪಾಗಿ ಸೇರಿ ಆರೋಪಿಯನ್ನು ತಮ್ಮ ವಶಕ್ಕೆ ನೀಡುವಂತೆ ಆಗ್ರಹಿಸಿದ್ದಾರೆ. ಇದರಿಂದ ಮಂಗಳವಾರ ಮಧ್ಯಾಹ್ನದವರೆಗೆ ರಾಮಮೂರ್ತಿನಗರ ವ್ಯಾಪ್ತಿಯಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ಜನರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಪೂರ್ವ ವಿಭಾಗದ ಡಿಸಿಪಿ ಡಿ.ದೇವರಾಜ್ ಅವರು ಆಗಮಿಸಿ, ಆರೋಪಿಗೆ ತಕ್ಕ ಶಿಕ್ಷೆಯಾಗುವಂತೆ ಮಾಡುತ್ತೇವೆ ಎಂದು ಭರವಸೆ ನೀಡಿದ ಬಳಿಕ ಜನರು ಶಾಂತವಾಗಿದ್ದಾರೆ.-ಬಾಕ್ಸ್-
ನಾಲ್ಕು ದಿನಗಳಹಿಂದಷ್ಟೇ ಕೆಲಸಕ್ಕೆ
ವರ್ಷದ ಹಿಂದೆ ಕೂಲಿ ಅರಸಿಕೊಂಡು ಬಿಹಾರ ರಾಜ್ಯದಿಂದ ನಗರಕ್ಕೆ ಬಂದಿದ್ದ ಆರೋಪಿ ಅಭಿಷೇಕ್, ನಾಲ್ಕು ದಿನಗಳ ಹಿಂದಷ್ಟೇ ರಾಮಮೂರ್ತಿ ನಗರ ಸಮೀಪದ ನಿರ್ಮಾಣ ಹಂತದ ಕಟ್ಟಡದಲ್ಲಿ ಕೆಲಸಕ್ಕೆ ಸೇರಿದ್ದ. ವಿಪರೀತ ಮದ್ಯ ವ್ಯಸನಿಯಾದ ಆತ, ಕುಡಿದ ಅಮಲಿನಲ್ಲೇ ಬಾಲಕಿ ಮೇಲೆ ಹೀನಾಯ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.