ಸಾರಾಂಶ
ಬೆಂಗಳೂರು : ನಿರ್ಮಾಣ ಹಂತದ ಕಟ್ಟಡದ ಲಿಫ್ಟ್ ಗುಂಡಿಗೆ ಬಿದ್ದು 7 ವರ್ಷದ ಬಾಲಕನೊಬ್ಬ ಮೃತಪಟ್ಟಿರುವ ಘಟನೆ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕನ್ನಮಂಗಲದ ನಿವಾಸಿ ಶ್ರೀಕನ್ಯಾ ಪುತ್ರ ಸುಹಾಸ್ (7) ಮೃತ ದುರ್ದೈವಿ. ಶಾಲೆಗೆ ರಜೆ ಹಿನ್ನೆಲೆಯಲ್ಲಿ ಸ್ನೇಹಿತರ ಜತೆ ನಿರ್ಮಾಣ ಹಂತದ ಕಟ್ಟಡದ ಬಳಿ ಆಟವಾಡಲು ಬುಧವಾರ ಬೆಳಗ್ಗೆ ಸುಹಾಸ್ ತೆರಳಿದ್ದಾಗ ಈ ಘಟನೆ ನಡೆದಿದೆ.
ಕನ್ನಮಂಗಲದಲ್ಲಿ ಹಾಲು ಉತ್ಪಾದಕರ ಸಂಘವು ಎರಡು ಅಂತಸ್ತಿನ ನೂತನ ಕಟ್ಟಡ ನಿರ್ಮಿಸುತ್ತಿದ್ದು, ಈ ಕಟ್ಟಡಕ್ಕೆ ಲಿಫ್ಟ್ ಅಳವಡಿಸಲು ತೆಗೆಯಲಾಗಿದ್ದ 5 ಅಡಿ ಅಳದ ಗುಂಡಿಯಲ್ಲಿ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ನೀರು ತುಂಬಿತ್ತು. ಮಳೆ ಕಾರಣಕ್ಕೆ ಶಾಲೆಗಳಿಗೆ ರಜೆ ಹಿನ್ನೆಲೆಯಲ್ಲಿ ಆ ಕಟ್ಟಡದ ಬಳಿ ಆಟವಾಡಲು ಗೆಳೆಯರ ಜತೆ ಸುಹಾಸ್ ತೆರಳಿದ್ದ. ಆಗ ಆಯತಪ್ಪಿ ಗುಂಡಿಗೆ ಬಿದ್ದು ಉಸಿರುಗಟ್ಟಿ ಆತ ಕೊನೆಯುಸಿರೆಳೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುಂಡಿಗೆ ಸುಹಾಸ್ ಬೀಳುತ್ತಿದ್ದಂತೆ ಜತೆಯಲ್ಲಿ ಸ್ನೇಹಿತರು ಜೋರಾಗಿ ಕೂಗಿಕೊಂಡಿದ್ದಾರೆ. ಆದರೆ ಮಕ್ಕಳ ಕೂಗಾಟಕ್ಕೆ ಸ್ಥಳೀಯರು ತಕ್ಷಣವೇ ಸ್ಪಂದಿಸಿಲ್ಲ. ಕೊನೆಗೆ ಕೆಲವರ ಬಳಿ ಹೋಗಿ ಮಕ್ಕಳು ಹೇಳಿದ್ದಾರೆ. ಆಗ ಗುಂಡಿ ಬಳಿಗೆ ಧಾವಿಸಿ ರಕ್ಷಿಸುವ ವೇಳೆಗೆ ಬಾಲಕ ಮೃತಪಟ್ಟಿದ್ದ ಎಂದು ತಿಳಿದು ಬಂದಿದೆ.
ಕೋಲಾರ ಜಿಲ್ಲೆ ಮುಳುಬಾಗಿಲು ತಾಲೂಕಿನ ಶ್ರೀಕನ್ಯಾ ಅವರು, ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿಯಿಂದ ಪ್ರತ್ಯೇಕಗೊಂಡು ಮಗ ಸುಹಾಸ್ ಜತೆ ನೆಲೆಸಿದ್ದರು. ಮನೆಗೆಲಸ ಮಾಡಿಕೊಂಡು ಅವರು ಜೀವನ ಸಾಗಿಸುತ್ತಿದ್ದರು. ಎಂದಿನಂತೆ ಬುಧವಾರ ಬೆಳಗ್ಗೆ ಮಗನನ್ನು ಮನೆಯಲ್ಲಿ ಬಿಟ್ಟು ಅವರು ಕೆಲಸಕ್ಕೆ ತೆರಳಿದ್ದಾಗ ಈ ಅನಾಹುತ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಘಟನೆ ಸಂಬಂಧ ಕನ್ನಮಂಗಲ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸೊಣ್ಣಪ್ಪ ಹಾಗೂ ನಿರ್ಮಾಣ ಹಂತದ ಕಟ್ಟಡದ ಮೇಲುಸ್ತುವಾರಿ ಅನಿಲ್ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.