ಸಾರಾಂಶ
ಬೆಂಗಳೂರು : ನಗರದಲ್ಲಿ ಬೈಕ್ ಕಳ್ಳತನ ಕೃತ್ಯದಲ್ಲಿ ತೊಡಗಿದ್ದ ಕಾರು ಸರ್ವೀಸ್ ಸೆಂಟರ್‌ನ ಕೆಲಸಗಾರನೊಬ್ಬನನ್ನು ಮಹದೇವಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ವರ್ತೂರು ನಿವಾಸಿ ಕಿರಣ್ ಕುಮಾರ್ ಬಂಧಿತನಾಗಿದ್ದು, ಆರೋಪಿಯಿಂದ ₹8 ಲಕ್ಷ ಮೌಲ್ಯದ 11 ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ. ಕೆಲ ದಿನಗಳ ಹಿಂದೆ ಕೆ.ಆರ್.ಪುರ ರೈಲ್ವೆ ನಿಲ್ದಾಣ ಸಮೀಪ ಖಚಿತ ಮಾಹಿತಿ ಪಡೆದು ಬೈಕ್ ಸಮೇತ ಕಿರಣ್‌ನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕಿರಣ್ ವೃತ್ತಿಪರ ಕ್ರಿಮಿನಲ್ ಆಗಿದ್ದು, 2019ರಿಂದ ನಗರದಲ್ಲಿ ಬೈಕ್ ಕಳ್ಳತನ ಕೃತ್ಯಕ್ಕೆ ಆತ ಕುಖ್ಯಾತಿ ಪಡೆದಿದ್ದಾನೆ. ಈ ಮೊದಲು ಗೊರಗುಂಟೆಪಾಳ್ಯದಲ್ಲಿ ನೆಲೆಸಿದ್ದ ಕಿರಣ್ ಕುಟುಂಬವು ಆನಂತರ ವರ್ತೂರಿಗೆ ಬಂದು ನೆಲೆಸಿತು. ತನ್ನ ತಾಯಿ ಜತೆ ವಾಸವಾಗಿದ್ದ ಆತ, ಮನೆ ಸಮೀಪದ ಕಾರು ಸರ್ವೀಸ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದ. ಆ ವೇಳೆ ವಾಹನಗಳ ಲಾಕ್ ಅನ್ನು ಅನ್‌ಲಾಕ್ ಮಾಡುವುದನ್ನು ಆತ ಕರಗತ ಮಾಡಿಕೊಂಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸುಲಭವಾಗಿ ಹಣ ಸಂಪಾದನೆಗೆ ಬೈಕ್ ಕಳ್ಳತನಕ್ಕಿಳಿದಿದ್ದಾನೆ. ಕಳೆದ ನಾಲ್ಕು ವರ್ಷಗಳಿಂದ ಎರಡ್ಮೂರು ಬಾರಿ ಆತನನ್ನು ಬಂಧಿಸಿ ಪೊಲೀಸರು ಜೈಲಿಗೆ ಕಳುಹಿಸಿದ್ದರು. ಹೀಗಿದ್ದರೂ ತನ್ನ ಚಾಳಿಯನ್ನು ಕಿರಣ್ ಬಿಟ್ಟಿರಲಿಲ್ಲ. ಈಗ ಬಂಧನದಿಂದ ಮೈಕೋ ಲೇಔಟ್, ಬೈಯಪ್ಪನಹಳ್ಳಿ ಹಾಗೂ ಸೂರ್ಯ ಸಿಟಿ ಸೇರಿದಂತೆ ಇತರೆ ಠಾಣೆಗಳಲ್ಲಿ ನಡೆದಿದ್ದ 9 ಪ್ರಕರಣಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮತ್ತೊಬ್ಬ ಪೊಲೀಸರ ಬಲೆಗೆ: ಕೊಡಿಗೇಹಳ್ಳಿ ಪೊಲೀಸರ ಕಾರ್ಯಾಚರಣೆ ವೇಳೆ ಮತ್ತೊಬ್ಬ ಬೈಕ್ ಕಳ್ಳ ಸಿಕ್ಕಿದ್ದಿದ್ದಾನೆ. ಆರೋಪಿಯಿಂದ ₹3.92 ಲಕ್ಷ ಮೌಲ್ಯ 7 ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ. ಈತ ಕೂಡ ವೃತ್ತಿಪರ ಕ್ರಿಮಿನಲ್ ಆಗಿದ್ದು, ಮೈ ಬಗ್ಗಿಸಿ ದುಡಿಯದೆ ನಿರಾಯಸವಾಗಿ ಹಣ ಗಳಿಸಲು ಕಳ್ಳತನಕ್ಕಿಳಿದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.