ಪ್ರೀ ಸ್ಕೂಲ್‌ನ 3ನೇ ಮಹಡಿಯಿಂದಬಿದ್ದಿದ್ದ ಮಗು ಚಿಕಿತ್ಸೆ ಫಲಿಸದೆ ಸಾವು

| Published : Jan 26 2024, 01:48 AM IST

ಸಾರಾಂಶ

ಪ್ರೀ-ಸ್ಕೂಲ್‌ನ 3ನೇ ಮಹಡಿಯಿಂದ ಬಿದ್ದಿದ್ದ ಮಗು ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ಬೆಂಗಳೂರಿನ ಹೆಣ್ಣೂರು ವ್ಯಾಪ್ತಿಯ ಚೆಲ್ಲಕೆರೆಯಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಇತ್ತೀಚೆಗೆ ಖಾಸಗಿ ಪ್ರೀ ಸ್ಕೂಲ್‌(ನರ್ಸರಿ) ಕಟ್ಟಡದ ಮೂರನೇ ಮಹಡಿಯಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಮಗು ಚಿಕಿತ್ಸೆ ಫಲಿಸದೆ ಗುರುವಾರ ಮೃತಪಟ್ಟಿದೆ.

ಹೆಣ್ಣೂರಿನ ಜಿಯನ್ನಾ ಜಿಟೋ(4) ಮೃತ ಮಗು. ಜ.22ರಂದು ಮಧ್ಯಾಹ್ನ ಹೆಣ್ಣೂರಿನ ಚೆಲ್ಲಕೆರೆಯ ಖಾಸಗಿ ಪ್ರೀ ಸ್ಕೂಲ್‌ನ ಕಟ್ಟಡದ ಮೂರನೇ ಮಹಡಿಯಿಂದ ಮಗು ಬಿದ್ದ ಪರಿಣಾಮ ತಲೆಗೆ ಗಂಭೀರ ಗಾಯವಾಗಿತ್ತು. ಕೂಡಲೇ ಮಗುವನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಗುರುವಾರ ಚಿಕಿತ್ಸೆ ಫಲಿಸದೆ ಆ ಮಗು ಮೃತಪಟ್ಟಿದೆ.

ಕೇರಳ ಮೂಲದ ಸಾಫ್ಟ್‌ವೇರ್‌ ಎಂಜಿನಿಯರ್‌ ದಂಪತಿ ಜಿಟೋ ಟಾಮಿ ಜೋಸೆಫ್‌ ಮತ್ತು ಬಿನಿಟೋ ಥಾಮಸ್‌ ಉದ್ಯೋಗ ನಿಮಿತ್ತ ನಗರದಲ್ಲಿ ನೆಲೆಸಿದ್ದರು. ಮನೆಗೆ ಹತ್ತಿರದಲ್ಲಿರುವ ಪ್ರೀ ಸ್ಕೂಲ್‌ಗೆ ತಮ್ಮ ಮಗುವನ್ನು ಸೇರಿಸಿದ್ದರು. ಅದೇ ಪ್ರೀ ಸ್ಕೂಲ್‌ನ ಕಟ್ಟಡದಿಂದ ಬಿದ್ದು ಮಗು ಮೃತಪಟ್ಟಿದೆ. ಈ ಸಂಬಂಧ ಮೃತ ಮಗುವಿನ ಪೋಷಕರು ಪ್ರೀ ಸ್ಕೂಲ್‌ ವಿರುದ್ಧ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಹೆಣ್ಣೂರು ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಸ್ತೆಯಲ್ಲಿ ವ್ಹೀಲಿಂಗ್‌ ಹುಚ್ಚಾಟ: ಬೈಕ್‌ ಸವಾರನ ಬಂಧನ

ಕನ್ನಡಪ್ರಭ ವಾರ್ತೆ ಬೆಂಗಳೂರುಸಾರ್ವಜನಿಕ ರಸ್ತೆಯಲ್ಲಿ ಅಪಾಯಕಾರಿಯಾಗಿ ದ್ವಿಚಕ್ರ ವಾಹನ ವ್ಹೀಲಿಂಗ್‌ ಮಾಡುತ್ತಿದ್ದ ಸವಾರನನ್ನು ಸದಾಶಿವನಗರ ಸಂಚಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.ಜಾಲಹಳ್ಳಿ ಕುವೆಂಪುನಗರ 1ನೇ ಹಂತದ ನಿವಾಸಿ ರಾಕೇಶ್‌ (19) ಬಂಧಿತ ಸವಾರ. ಗುರುವಾರ ಮಧ್ಯಾಹ್ನ 1.30ರ ಸುಮಾರಿಗೆ ನ್ಯೂ ಬಿಇಎಲ್‌ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಹೆಲ್ಮೆಟ್‌ ಧರಿಸದೆ ಅತಿವೇಗವಾಗಿ ವ್ಹೀಲಿಂಗ್‌ ಮಾಡುತ್ತಿದ್ದ. ಇದನ್ನು ಗಮನಿಸಿದ ಸಂಚಾರ ಪೊಲೀಸರು ದ್ವಿಚಕ್ರ ವಾಹನವನ್ನು ತಡೆದು ಸವಾರ ಮತ್ತು ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದಿದ್ದಾರೆ. ಸದಾಶಿವನಗರ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.