₹1.50 ಕೋಟಿ ಚೀಟಿ ಹಣ ಜತೆ ಪರಾರಿಯಾಗಿದ್ದ ದಂಪತಿ ಸೆರೆ : ಚೀಟಿ ಹೆಸರಿನಲ್ಲಿ 40 ಜನರಿಗೆ ವಂಚನೆ

| Published : Oct 07 2024, 01:38 AM IST / Updated: Oct 07 2024, 05:06 AM IST

Money Problem

ಸಾರಾಂಶ

ಚೀಟಿ ಹೆಸರಿನಲ್ಲಿ 30-40 ಜನರಿಂದ ಸುಮಾರು ₹1.50 ಕೋಟಿ ಸಂಗ್ರಹಿಸಿ ವಂಚಿಸಿ ರಾತ್ರೋರಾತ್ರಿ ಮನೆ ಖಾಲಿ ಮಾಡಿಕೊಂಡು ಪರಾರಿಯಾಗಿದ್ದ ಮಹಿಳೆ ಸೇರಿ ಮೂವರನ್ನು ಕಾಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

 ಬೆಂಗಳೂರು :  ಚೀಟಿ ಹೆಸರಿನಲ್ಲಿ 30-40 ಜನರಿಂದ ಸುಮಾರು ₹1.50 ಕೋಟಿ ಸಂಗ್ರಹಿಸಿ ವಂಚಿಸಿ ರಾತ್ರೋರಾತ್ರಿ ಮನೆ ಖಾಲಿ ಮಾಡಿಕೊಂಡು ಪರಾರಿಯಾಗಿದ್ದ ಮಹಿಳೆ ಸೇರಿ ಮೂವರನ್ನು ಕಾಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕಾಡುಗೋಡಿ ಬೆಳತೂರಿನ ಮಹದೇವಮ್ಮ(44), ಈಕೆಯ ಪತಿ ಚಂದ್ರಶೇಖರ್‌(50) ಹಾಗೂ ಪುತ್ರ ಸಾಗರ್‌(24) ಬಂಧಿತರು. ಆರೋಪಿಗಳು ಚೀಟಿ ಕಟ್ಟಿಸಿಕೊಂಡು ಹಣ ವಾಪಾಸ್‌ ನೀಡದೆ ಒಂದು ತಿಂಗಳಿಂದ ತಲೆಮರೆಸಿಕೊಂಡಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ತಲಕಾಡು ಮೂಲದ ಮಹದೇವಮ್ಮ ಸುಮಾರು 10 ವರ್ಷಗಳಿಂದ ಬೆಳತೂರಿನಲ್ಲಿ ನೆಲೆಸಿದ್ದಾರೆ. ಈಕೆಯ ಪತಿ ಚಂದ್ರಶೇಖರ್‌ ತಲಕಾಡಿನಲ್ಲಿ ನೆಲೆಸಿದ್ದು, ಆಗಾಗ ಬಂದು ಹೋಗುತ್ತಿದ್ದರು. ಹಲವು ವರ್ಷಗಳಿಂದ ₹1 ಲಕ್ಷ ದಿಂದ ₹10 ಲಕ್ಷವರೆಗೂ ಚೀಟಿ ವ್ಯವಹಾರ ನಡೆಸುತ್ತಿದ್ದ ಮಹದೇವಮ್ಮ ಸ್ಥಳೀಯರ ನಂಬಿಕೆ ಗಿಟ್ಟಿಸಿದ್ದರು. ಹೀಗಾಗಿ ಸುಮಾರು 30-40 ಮಂದಿ ಈಕೆಯ ಬಳಿ ಚೀಟಿ ಕಟ್ಟಿದ್ದರು.

ಕಳೆದ ಫೆಬ್ರವರಿಯಿಂದ ವಿವಿಧ ಕಾರಣ ಮುಂದಿಟ್ಟು ಚೀಟಿ ಎತ್ತುವುದನ್ನು ಮುಂದೂಡಿದ್ದರು. ಕಳೆದ ಒಂದು ತಿಂಗಳ ಹಿಂದೆ ರಾತ್ರೋರಾತ್ರಿ ಮನೆ ಖಾಲಿ ಮಾಡಿಕೊಂಡು ಪರಾರಿಯಾಗಿದ್ದರು. ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ಚೀಟಿದಾರರು ಮಹದೇವಮ್ಮ ವಿರುದ್ಧ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿ ಮೈಸೂರಿನಲ್ಲಿ ತಲೆಮರೆಸಿಕೊಂಡಿದ್ದ ಮಹದೇವಮ್ಮ ಹಾಗೂ ಆಕೆಯ ಪತಿ, ಪುತ್ರನನ್ನು ಬಂಧಿಸಿ ನಗರಕ್ಕೆ ಕರೆತಂದು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.