ಸಾರಾಂಶ
ತಮ್ಮ ಮನೆಯಲ್ಲಿ ಅಲಂಕಾರಿಕವಾಗಿ ಗಾಂಜಾ ಗಿಡ ಬೆಳೆಸಿದ್ದನ್ನು ರೀಲ್ಸ್ ಮಾಡಿದ್ದ ಫಾಸ್ಟ್ ಫುಡ್ ಹೋಟೆಲ್‌ವೊಂದರ ಮಾಲೀಕರೂ ಆಗಿರುವ ಸಿಕ್ಕಿಂ ಮೂಲದ ದಂಪತಿಯನ್ನು ಸದಾಶಿವನಗರ ಠಾಣೆ ಪೊಲೀಸರು ಬಂಧಿಸಿ ಬಳಿಕ ಬಿಡುಗಡೆಗೊಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ತಮ್ಮ ಮನೆಯಲ್ಲಿ ಅಲಂಕಾರಿಕವಾಗಿ ಗಾಂಜಾ ಗಿಡ ಬೆಳೆಸಿದ್ದನ್ನು ರೀಲ್ಸ್ ಮಾಡಿದ್ದ ಫಾಸ್ಟ್ ಫುಡ್ ಹೋಟೆಲ್‌ವೊಂದರ ಮಾಲೀಕರೂ ಆಗಿರುವ ಸಿಕ್ಕಿಂ ಮೂಲದ ದಂಪತಿಯನ್ನು ಸದಾಶಿವನಗರ ಠಾಣೆ ಪೊಲೀಸರು ಬಂಧಿಸಿ ಬಳಿಕ ಬಿಡುಗಡೆಗೊಳಿಸಿದ್ದಾರೆ.ಎಂಎಸ್‌ಆರ್ ನಗರ ನಿವಾಸಿಗಳಾದ ಊರ್ಮಿಳಾ ಕುಮಾರಿ ಮತ್ತು ಸಾಗರ್ ಗುರುಂಗ್ ಸಂಕಷ್ಟಕ್ಕೆ ತುತ್ತಾಗಿದ್ದು, ಈ ದಂಪತಿಗೆ ಠಾಣಾ ಜಾಮೀನು ಮೇರೆಗೆ ಪೊಲೀಸರು ಬಂಧಮುಕ್ತಗೊಳಿಸಿದ್ದಾರೆ. ಈ ದಂಪತಿ ಬೆಳೆದಿದ್ದ 54 ಗ್ರಾಂ ತೂಕದ ಗಾಂಜಾ ಗಿಡವನ್ನು ಜಪ್ತಿ ಮಾಡಲಾಗಿದೆ.
ಕೆಲ ದಿನಗಳ ಹಿಂದೆ ತಮ್ಮ ಮನೆಯ ಬಾಲ್ಕನಿಯಲ್ಲಿ ನಿಂತು ರೀಲ್ಸ್ ಮಾಡಿ ಇನ್‌ಸ್ಟಾಗ್ರಾಂನಲ್ಲಿ ಊರ್ಮಿಳಾ ಅಪ್‌ಲೋಡ್ ಮಾಡಿದ್ದರು. ಈ ರೀಲ್ಸ್‌ನಲ್ಲಿ ಗಾಂಜಾ ಗಿಡಗಳಿರುವುದನ್ನು ನೋಡಿ ಪೊಲೀಸರಿಗೆ ಸ್ಥಳೀಯ ಕೆಲ ಯುವಕರು ವಿಷಯ ತಿಳಿಸಿದರು. ಈ ಮಾಹಿತಿ ಹಿನ್ನೆಲೆಯಲ್ಲಿ ಮನೆ ಪರಿಶೀಲನೆಗೆ ತೆರಳಿದಾಗ ಹೂವಿನಕುಂಡದಲ್ಲಿದ್ದ ಗಾಂಜಾ ಗಿಡ ಕಿತ್ತು ದಂಪತಿ ಬಿಸಾಕಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.ಹಲವು ದಿನಗಳಿಂದ ಎಂ.ಎಸ್.ಆರ್.ನಗರದಲ್ಲಿ ಫಾಸ್ಟ್ ಫುಡ್ ಹೋಟೆಲನ್ನು ಊರ್ಮಿಳಾ ದಂಪತಿ ನಡೆಸುತ್ತಿದ್ದು, ಆ ಹೋಟೆಲ್‌ನ ಮಹಡಿಯಲ್ಲಿ ದಂಪತಿ ನೆಲೆಸಿದ್ದಾರೆ. ಮನೆಯ ಬಾಲ್ಕನಿಯಲ್ಲಿ 20 ವಿವಿಧ ಹೂವಿನ ಗಿಡಗಳ ಜತೆ ಅಕ್ರಮವಾಗಿ ಅವರು ಗಾಂಜಾ ಬೆಳೆಸಿದ್ದರು. ಆದರೆ ದಂಪತಿ ಗಾಂಜಾ ವ್ಯಸನಿಗಳಲ್ಲ. ಅಲಂಕಾರಿಕವಾಗಿ ಗಾಂಜಾ ಬೆಳೆಸಿ ಸಂಕಷ್ಟಕ್ಕೆ ತುತ್ತಾಗಿರುವುದು ತನಿಖೆಯಲ್ಲಿ ಗೊತ್ತಾಯಿತು. ಹೀಗಾಗಿ ಮತ್ತೆ ಗಾಂಜಾ ಬೇಸಾಯ ಮಾಡದಂತೆ ಎಚ್ಚರಿಕೆ ಕೊಟ್ಟು ಠಾಣಾ ಜಾಮೀನಿನ ಮೇರೆಗೆ ಬಿಡುಗಡೆಗೊಳಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಾಂಜಾ ಬೆಳೆದಿರುವ ಮಾಹಿತಿ ಪಡೆದು ಊರ್ಮಿಳಾ ಮನೆಗೆ ಪರಿಶೀಲಿಸಲು ಪೊಲೀಸರು ತೆರಳಿದ್ದರು. ಆಗ ಮೊದಲ ಅಂತಸ್ತಿನಲ್ಲಿದ್ದ ಮನೆಗೆ ಹೋಗುವ ವೇಳೆಗೆ ಊರ್ಮಿಳಾಗೆ ಕೆಳ ಹಂತದ ಹೋಟೆಲ್‌ನಲ್ಲಿದ್ದ ಆಕೆಯ ತಂಗಿ ಪೊಲೀಸರು ಬಂದಿರುವ ಬಗ್ಗೆ ಮಾಹಿತಿ ಕೊಟ್ಟಿದ್ದರು. ಆಗ ಮನೆಯಲ್ಲಿದ್ದ ಊರ್ಮಿಳಾ ಕೂಡಲೇ ಗಾಂಜಾ ಗಿಡಗಳನ್ನು ಕಿತ್ತು ಕಸದ ಬುಟ್ಟಿಗೆ ಬಿಸಾಕಿದ್ದರು. ಮನೆ ತಪಾಸಣೆ ನಡೆಸಿದಾಗ ಕಸದ ಬುಟ್ಟಿಯಲ್ಲಿ ಗಿಡಗಳು ಪತ್ತೆಯಾದವು ಎಂದು ಅಧಿಕಾರಿಗಳು ವಿವರಿಸಿದ್ದಾರೆ.