ಮಳವಳ್ಳಿ : ಹಿಪ್ಪನೇರಳೆ ಸೊಪ್ಪು ತರಲು ಹೋಗಿದ್ದ ವೇಳೆ ಏಕಾಏಕಿ ಹೆಜ್ಜೇನು ದಾಳಿಗೆ ರೈತ ಸಾವು

| Published : Dec 17 2024, 12:46 AM IST / Updated: Dec 17 2024, 04:22 AM IST

ಸಾರಾಂಶ

ರೇಷ್ಮೆ ಹುಳು ಸಾಕಾಣಿಕೆ ಮಾಡುತ್ತಿದ್ದ ನಿಂಗೇಗೌಡ ಬೆಳಗ್ಗೆ ಹಿಪ್ಪನೇರಳೆ ಸೊಪ್ಪು ತರಲು ಹೋಗಿದ್ದ ವೇಳೆ ಪಕ್ಕದಲ್ಲೆ ಇದ್ದ ಮರದಲ್ಲಿ ಹೆಜ್ಜೇನು ಏಕಾಏಕಿ ದಾಳಿ ಮಾಡಿವೆ. ಇದರಿಂದ ತಪ್ಪಿಸಿಕೊಂಡು ಓಡಿದರೂ ಬಿಡದೆ ಹೆಚ್ಚಿನ ಜೇನುಗಳು ನಿಂಗೇಗೌಡರಿಗೆ ಕಚ್ಚಿವೆ.

  ಮಳವಳ್ಳಿ : ಹೆಜ್ಜೇನು ದಾಳಿಯಿಂದ ರೈತ ಸಾವನ್ನಪ್ಪಿರುವ ಘಟನೆ ತಾಲೂಕಿನ ಕಂದೇಗಾಲ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ನಿಂಗೇಗೌಡ (50) ಮೃತಪಟ್ಟವರು. ರೇಷ್ಮೆ ಹುಳು ಸಾಕಾಣಿಕೆ ಮಾಡುತ್ತಿದ್ದ ನಿಂಗೇಗೌಡ ಬೆಳಗ್ಗೆ ಹಿಪ್ಪನೇರಳೆ ಸೊಪ್ಪು ತರಲು ಹೋಗಿದ್ದ ವೇಳೆ ಪಕ್ಕದಲ್ಲೆ ಇದ್ದ ಮರದಲ್ಲಿ ಹೆಜ್ಜೇನು ಏಕಾಏಕಿ ದಾಳಿ ಮಾಡಿವೆ.

ಇದರಿಂದ ತಪ್ಪಿಸಿಕೊಂಡು ಓಡಿದರೂ ಬಿಡದೆ ಹೆಚ್ಚಿನ ಜೇನುಗಳು ನಿಂಗೇಗೌಡರಿಗೆ ಕಚ್ಚಿವೆ. ಈತನನ್ನು ರಕ್ಷಿಸಲು ಬಂದ ಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಬಸವರಾಜು ಮೇಲೂ ಹೆಜ್ಜೇನು ದಾಳಿ ಮಾಡಿದ ಪರಿಣಾಮ ತೀವ್ರವಾಗಿ ಗಾಯಗೊಂಡು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆ ದಾಖಲು ಮಾಡಲಾಗಿದೆ. ಮೃತ ನಿಂಗೇಗೌಡರ ಶವವನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆ ಶವಗಾರದಲ್ಲಿ ಇಡಲಾಗಿದೆ.

ಈ ಸಂಬಂಧ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಇಂದು ಹಲವೆಡೆ ವಿದ್ಯುತ್ ವ್ಯತ್ಯಯ

ಮಂಡ್ಯ: ತಾಲೂಕಿನ ಬಸರಾಳು 66/11 ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾರ್ಯವನ್ನು ಡಿ.17 ರಂದು ಬೆಳಗ್ಗೆ 9 ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯ ಬಸರಾಳು, ಶಿವಪುರ, ಬೇಬಿ, ಕಂಬದಹಳ್ಳಿ, ಬಿದರಕಟ್ಟೆ, ಮಾರಸಿಂಗನಹಳ್ಳಿ, ಅಂಕುಶಾಪುರ, ಬೆನ್ನಹಟ್ಟಿ, ಶಾನಭೋಗನಹಳ್ಳಿ, ಬೊಮ್ಮನಹಳ್ಳಿ, ಅನುಕುಪ್ಪೆ, ಮನುಗನಹಳ್ಳಿ, ಎಂ.ಹಟ್ನ, ಗಣಿಗ ಹಾಗೂ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಮಂಡ್ಯ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.

ನಗರ ಪ್ರದೇಶ ವ್ಯಾಪ್ತಿ ಇಂದು ವಿದ್ಯುತ್ ವ್ಯತ್ಯಯ

ಮಂಡ್ಯ: 66/11 ಕೆ.ವಿ ಚಿಕ್ಕಮಂಡ್ಯ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಡಿ.17 ರಂದು ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಬೆಳಗ್ಗೆ 10 ರಿಂದ ಸಂಜೆ 7 ಗಂಟೆವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಚಿಕ್ಕ ಮಂಡ್ಯ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಗೆ ಒಳಪಡುವ ಜೈನ್ ಸ್ಟ್ರೀಟ್, ಪೇಟೆ ಬೀದಿ, ಆನೆಕೆರೆ ಬೀದಿ, ಸಿಹಿನೀರು ಕೊಳ, ಶಂಕರ ಮಠ, ಮುಸ್ಲಿಂ ಬ್ಲಾಕ್, ಡೌರಿ ಸಮಾಜ, ಕಾಳಿಕಾಂಬಾ ದೇವಸ್ಥಾನದ ಸುತ್ತ ಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಸೆಸ್ಕ್ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ.