ಸಾರಾಂಶ
ಬೆಂಗಳೂರು : ಇತ್ತೀಚೆಗೆ ಓಕಳಿಪುರದ ರೈಲ್ವೆ ಹಳಿಗಳ ಬಳಿ ನಡೆದಿದ್ದ ದಿಲೀಪ್ ಕೊಲೆ ಪ್ರಕರಣ ಸಂಬಂಧ ಆತನ ಸ್ನೇಹಿತನನ್ನು ಶ್ರೀರಾಮಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪ್ರಕಾಶ್ ನಗರದ ನಿವಾಸಿ ಆರ್.ವಿಠ್ಠಲ್ ಅಲಿಯಾಸ್ ಪಾಂಡು ಬಂಧಿತನಾಗಿದ್ದು, ಹಣಕಾಸು ವಿಚಾರವಾಗಿ ತನ್ನ ಗೆಳೆಯ ದಿಲೀಪ್ (45) ನನ್ನು ಆತ ಕೊಲೆ ಮಾಡಿ ಪರಾರಿಯಾಗಿದ್ದ. ಈ ತನಿಖೆಗಿಳಿದ ಇನ್‌ಸ್ಪೆಕ್ಟರ್ ಪೂಣಚ್ಚ ಹಾಗೂ ಸಬ್ ಇನ್‌ಸ್ಪೆಕ್ಟರ್ ನಂದಕುಮಾರ್ ನೇತೃತ್ವದ ತಂಡವು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ.
₹20 ಸಾವಿರಕ್ಕೆ ಕೊಲೆ:
ಹಲವು ವರ್ಷಗಳಿಂದ ಖಾಸಗಿ ಶಾಲೆಯ ಶಾಲಾ ವಾಹನದ ಕ್ಲಿನರ್ ವಿಠ್ಠಲ್ ಹಾಗೂ ದಿಲೀಪ್ ಸ್ನೇಹಿತರಾಗಿದ್ದು, ಈ ಗೆಳೆತನದಲ್ಲಿ ಪರಸ್ಪರ ಹಣಕಾಸು ವ್ಯವಹಾರ ಸಹ ಇತ್ತು. ಅಂತೆಯೇ ಕೆಲ ದಿನಗಳ ಹಿಂದೆ ಗೆಳೆಯನಿಂದ ₹20 ಸಾವಿರ ಸಾಲವನ್ನು ವಿಠ್ಠಲ್ ಪಡೆದಿದ್ದ. ಆದರೆ ಸಕಾಲಕ್ಕೆ ಸಾಲ ಮರಳಿಸದ ಕಾರಣಕ್ಕೆ ಇಬ್ಬರ ಮಧ್ಯೆ ಮನಸ್ತಾಪವಾಗಿತ್ತು. ಇತ್ತೀಚೆಗೆ ₹20 ಸಾವಿರ ಸಾಲಕ್ಕೆ ಬಡ್ಡಿ ಸೇರಿ ₹33 ಸಾವಿರ ಆಗಿದೆ ಎಂದು ಹೇಳಿ ಗೆಳೆಯನನ್ನು ದಿಲೀಪ್ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದ. ತನಗೆ ಪ್ರತಿ ತಿಂಗಳು ₹10 ಸಾವಿರ ವೇತನ ಬರುತ್ತದೆ. ಅದರಲ್ಲಿ ಒಂದೇ ಬಾರಿಗೆ ₹33 ಸಾವಿರ ಕೊಡಲು ಸಾಧ್ಯವಿಲ್ಲವೆಂದು ವಿಠ್ಠಲ್ ಅಲವತ್ತುಕೊಂಡಿದ್ದ. ಇದೇ ಹಣಕಾಸು ವಿಷಯವಾಗಿ ಇಬ್ಬರ ಮಧ್ಯೆ ಜಗಳ ಮುಂದುವರೆದಿತ್ತು.
ಕೊನೆಗೆ ಇದರಿಂದ ಕೆರಳಿದ ವಿಠ್ಠಲ್, ಗೆಳೆಯ ಹತ್ಯೆಗೆ ನಿರ್ಧರಿಸಿದ್ದ. ಅದರಂತೆ ಹಣ ಕೊಡುವ ನೆಪದಲ್ಲಿ ಏ.28ರಂದು ಓಕಳೀಪುರದ ರೈಲ್ವೆ ಹಳಿಗಳ ಬಳಿಗೆ ಸ್ನೇಹಿತನನ್ನು ಆರೋಪಿಸಿ ಕರೆಸಿಕೊಂಡಿದ್ದ. ಆ ವೇಳೆ ಆತ ಕಣ್ಣಿಗೆ ಖಾರದ ಪುಡಿ ಎರಚಿ ಬಳಿಕ ಚಾಕುವಿನಿಂದ ಇರಿದು ಹತ್ಯೆಗೈದು ಪರಾರಿಯಾಗಿದ್ದ. ಮೂರು ದಿನಗಳ ಬಳಿಕ ಮೃತದೇಹ ಪತ್ತೆಯಾಗಿತ್ತು.
ಶಿಲುಬೆ ನೀಡಿದ ಸುಳಿವು:
ಮೊದಲು ಅಪರಿಚಿತ ಮೃತದೇಹ ಗುರುತು ಪತ್ತೆಗೆ ಪೊಲೀಸರು ತೀವ್ರ ಶೋಧ ನಡೆಸಿದ್ದರು. ಅದೇ ವೇಳೆ ತಮ್ಮ ಸೋದರ ನಾಪತ್ತೆ ಆಗಿದ್ದಾನೆ ಎಂದು ಠಾಣೆಗೆ ಮೃತ ದಿಲೀಪ್ ಸೋದರ ದೂರು ನೀಡಲು ಬಂದಿದ್ದರು. ಆಗ ಆತನ ಫೋಟೋ ನೋಡಿದ ಪೊಲೀಸರಿಗೆ ಧರಿಸಿದ್ದ ಶಿಲುಬೆ ನೋಡಿ ಶಂಕೆ ಮೂಡಿದೆ. ಕೂಡಲೇ ಹತ್ಯೆ ನಡೆದ ಸ್ಥಳದಲ್ಲಿ ಸಿಕ್ಕಿದ ಶಿಲುಬೆಗೂ ದಿಲೀಪ್ ಫೋಟೋದಲ್ಲಿ ಧರಿಸಿದ್ದ ಶಿಲುಬೆಗೂ ಹೋಲಿಕೆ ಮಾಡಿದಾಗ ಸಾಮ್ಯತೆ ಕಂಡು ಬಂದಿದೆ. ಈ ಸುಳಿವು ಆಧರಿಸಿ ತನಿಖೆಗಳಿದ ಪೊಲೀಸರು, ಶಂಕೆ ಮೇರೆಗೆ ಆತನ ಸ್ನೇಹಿತ ವಿಠ್ಠಲ್ ವಶಕ್ಕೆ ಪಡೆದು ವಿಚಾರಿಸಿದಾಗ ಸತ್ಯ ಬಯಲಾಗಿದೆ.
)
;Resize=(128,128))
;Resize=(128,128))
;Resize=(128,128))