ಕೆಲಸ ಕಳೆದುಕೊಳ್ಳಲು ಕಾರಣನಾದ ಎಂದು ಗೆಳೆಯನ ಕೊಂದ ಸ್ನೇಹಿತ!

| Published : May 19 2024, 01:51 AM IST / Updated: May 19 2024, 04:50 AM IST

ಸಾರಾಂಶ

ತಾನು ಕೆಲಸ ಕಳೆದುಕೊಳ್ಳಲು ಕಾರಣನಾದ ಎಂದು ತನ್ನ ಸ್ನೇಹಿತನನ್ನು ಆತನ ಗೆಳೆಯ ಕಂಠ ಮಟ್ಟ ಕುಡಿಸಿ ಇಟ್ಟಿಗೆ ಎತ್ತಿಹಾಕಿ ಕೊಲೆ ಮಾಡಿದ್ದಾನೆ.

 ಬೆಂಗಳೂರು :  ತಾನು ಕೆಲಸ ಕಳೆದುಕೊಳ್ಳಲು ಕಾರಣನಾದ ಎಂದು ಕೋಪಗೊಂಡು ಸ್ನೇಹಿತನಿಗೆ ಮದ್ಯಪಾನ ಮಾಡಿಸಿ ಬಳಿಕ ತಲೆ ಮೇಲೆ ಸಿಮೆಂಟ್‌ ಇಟ್ಟಿಗೆ ಎತ್ತಿ ಹಾಕಿ ಹತ್ಯೆಗೈದಿರುವ ಘಟನೆ ಯಲಹಂಕ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಚಿಕ್ಕಬೊಮ್ಮಸಂದ್ರದ ನಿವಾಸಿ ಗಜೇಂದ್ರ ಸೌದ್ (32) ಕೊಲೆಯಾದ ದುರ್ದೈವಿ. ಈ ಕೃತ್ಯ ಸಂಬಂಧ ಮೈಸೂರಿನ ಸಂತೋಷ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಡೈರಿ ಸರ್ಕಲ್ ಸಮೀಪದ ಬಾರ್‌ನಲ್ಲಿ ಈ ಗೆಳೆಯರು ಶುಕ್ರವಾರ ರಾತ್ರಿ ಮದ್ಯ ಸೇವಿಸಿದ್ದಾರೆ. ನಂತರ ಕಂಠಮಟ ಮದ್ಯ ಸೇವಿಸಿ ಅರೆ ಪ್ರಜ್ಞೆಯಲ್ಲಿದ್ದ ಗಜೇಂದ್ರ ತಲೆ ಮೇಲೆ ಸಿಮೆಂಟ್ ಇಟ್ಟಿಗೆಯನ್ನು ಎತ್ತಿ ಹಾಕಿ ಸಂತೋಷ್ ಪರಾರಿಯಾಗಿದ್ದ. ತೀವ್ರವಾಗಿ ಗಾಯಗೊಂಡು ಆತ ಮೃತಪಟ್ಟಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಮೃತ ಗಜೇಂದ್ರ ಮೂಲತಃ ನೇಪಾಳ ದೇಶದವನಾಗಿದ್ದು, ಎಂಟು ವರ್ಷಗಳ ಹಿಂದೆ ಬೆಂಗಳೂರಿಗೆ ತನ್ನ ಪರಿವಾರ ಸಮೇತ ಆತ ಬಂದಿದ್ದ. ಯಲಹಂಕ ಉಪನಗರದ ಬಳಿ ಹೋಟೆಲ್‌ನಲ್ಲಿ ಕೆಲಸಕ್ಕೆ ಸೇರಿದ್ದ ಗಜೇಂದ್ರ, ತನ್ನ ಕುಟುಂಬದ ಜತೆ ಚಿಕ್ಕಬೊಮ್ಮಸಂದ್ರದಲ್ಲಿ ವಾಸವಾಗಿದ್ದ. ಆ ಹೋಟೆಲ್‌ನಲ್ಲಿ ಸಂತೋಷ್‌ ಕೂಡ ಕೆಲಸ ಮಾಡುತ್ತಿದ್ದ. ಆಗ ಕೆಲಸದ ವಿಚಾರವಾಗಿ ಇಬ್ಬರ ಮಧ್ಯೆ ಮನಸ್ತಾಪವಾಗಿತ್ತು. ಇದೇ ವಿಷಯವಾಗಿ ಪರಸ್ಪರ ಜಗಳ ಸಹ ಆಗಿದ್ದವು. ಕೊನೆಗೆ ಆಶಿಸ್ತು ಹಿನ್ನೆಲೆಯಲ್ಲಿ ಸಂತೋಷ್‌ನನ್ನು ಕೆಲಸದಿಂದ ಹೋಟೆಲ್‌ ಮಾಲೀಕ ತೆಗೆದುಹಾಕಿದ್ದ. ಇದೇ ಜಿದ್ದಿನಲ್ಲಿ ಗೆಳೆಯನ ಕೊಲೆಗೆ ಸಂಚು ರೂಪಿಸಿದ್ದ ಆರೋಪಿ, ಶುಕ್ರವಾರ ರಾತ್ರಿ ಮದ್ಯ ಸೇವಿಸುವ ನೆಪದಲ್ಲಿ ಕರೆಸಿಕೊಂಡು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ.